ಪಾಲೋಳಿ: ಸೇತುವೆ ನಿರ್ಮಾಣಕ್ಕೆ ಸಾಧ್ಯತಾ ವರದಿ ಸಲ್ಲಿಕೆ

Team Udayavani, May 21, 2019, 10:16 AM IST

ಕಡಬ: ಕುಮಾರಧಾರಾ ಹೊಳೆಗೆ ಕಡಬ ಗ್ರಾಮದ ಪಿಜಕಳದ ಪಾಲೋಳಿಯಲ್ಲಿ ಸರ್ವಋತು ಸೇತುವೆ ನಿರ್ಮಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖಾಧಿಕಾರಿಗಳು 23.38 ಕೋಟಿ ರೂ.ಗಳ ಅಂದಾಜು ಪಟ್ಟಿಯೊಂದಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್) ಸಾಧ್ಯತಾ ವರದಿ ಸಲ್ಲಿಸಿದ್ದಾರೆ.

ಪಾಲೋಳಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕುಮಾರಧಾರಾ ನದಿಗೆ ಸರ್ವಋತು ಸೇತುವೆ ನಿರ್ಮಿಸಬೇಕು ಎನ್ನುವ ಗ್ರಾಮಸ್ಥರ ಬೇಡಿಕೆಯಂತೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರ ಸೂಚನೆಯ ಮೇರೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಹಿಂದೆಯೇ ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದರು.

ಕೆಆರ್‌ಡಿಸಿಎಲ್ಗೆ ಕಾಮಗಾರಿ

ಪಾಲೋಳಿ ಸೇತುವೆಯ ನಿರ್ಮಾಣ ಕಾಮಗಾರಿಯನ್ನು ಹೊಸಮಠ ಸೇತುವೆಯ ಕಾಮಗಾರಿ ನಿರ್ವಹಿಸಿದ ಕೆಆರ್‌ಡಿಸಿಎಲ್ಗೆ ವಹಿಸುವ ಸಾಧ್ಯತೆಗಳಿದ್ದು, ಸರಕಾರದ ಸೂಚನೆಯಂತೆ ಕೆಲ ಸಮಯದ ಹಿಂದೆ ಕಂದಾಯ ಅಧಿಕಾರಿಗಳ ಜತೆಗೆ ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಕೆಆರ್‌ಡಿಸಿಎಲ್ಗೆ ಸಾಧ್ಯತಾ ವರದಿ ಸಲ್ಲಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ 23.38 ಕೋಟಿ ರೂ. ಅಂದಾಜು ಪಟ್ಟಿ

·ಕೆಆರ್‌ಡಿಸಿಎಲ್ಗೆ ಕಾಮಗಾರಿ ಹೊಣೆ ಸಾಧ್ಯತೆ

·ಸದ್ಯ ತಾತ್ಕಾಲಿಕ ಸೇತುವೆಯೇ ಆಧಾರ

ನೂತನ ಸೇತುವೆ ಹಾಗೂ ಸೇತುವೆಗೆ ಕಡಬ ಹಾಗೂ ಎಡಮಂಗಲ ಭಾಗದಿಂದ ಸಂಪರ್ಕ ರಸ್ತೆ ನಿರ್ಮಿಸಲು ಬೇಕಾಗುವ ಜಮೀನಿನ ಲಭ್ಯತೆ ಇತ್ಯಾದಿ ವಿಚಾರಗಳ ಕುರಿತು ಈ ಸಾಧ್ಯತಾ ವರದಿಯಲ್ಲಿ ವಿವರಗಳನ್ನು ಸಲ್ಲಿಸಲಾಗಿದೆ.

ಹಲವು ವರ್ಷಗಳ ಬೇಡಿಕೆ

ಪಾಲೋಳಿಯಲ್ಲಿ ಸರ್ವಋತು ಸೇತುವೆ ನಿರ್ಮಾಣವಾಗಬೇಕೆಂದು ಕಳೆದ 30 ವರ್ಷಗಳ ಬೇಡಿಕೆ. ಸ್ಥಳೀಯರು ಸೇರಿಕೊಂಡು ಸಂಘಟನಾತ್ಮಕವಾಗಿ ಹೋರಾಟವನ್ನು ರೂಪಿಸುವ ಸಲುವಾಗಿ ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ ಪಿಜಕಳ ಅವರ ಅಧ್ಯಕ್ಷತೆಯಲ್ಲಿ ಪಾಲೋಳಿ ಕುಮಾರಧಾರಾ ಶಾಶ್ವತ ಸೇತುವೆ ಹೋರಾಟ ಸಮಿತಿ ಎನ್ನುವ ಹೆಸರಿನಲ್ಲಿ ಸಂಘಟನೆಯನ್ನು ರೂಪಿಸಿ ಹೋರಾಟ ಆರಂಭಿಸಿದ್ದರು. ಕಡಬದ ರಾಜಕೀಯ ಮುಂದಾಳು, ಜಿಲ್ಲಾ ಪರಿಷತ್‌ನ ಮಾಜಿ ಸದಸ್ಯ ಸಯ್ಯದ್‌ ಮೀರಾ ಸಾಹೇಬ್‌ ಅವರು ಲೋಕೋಪಯೋಗಿ ಸಚಿವರನ್ನು ಭೇಟಿ ಮಾಡಿ ಪಾಲೋಳಿ ಸೇತುವೆ ನಿರ್ಮಾಣದ ಅಗತ್ಯವನ್ನು ಮನವರಿಕೆ ಮಾಡಿದ ಪರಿಣಾಮ ಗ್ರಾಮಸ್ಥರ ಹೋರಾಟಕ್ಕೆ ಸರಕಾರದ ಮಟ್ಟದಲ್ಲಿ ಸ್ಪಂದನೆ ಲಭಿಸಿದೆ.

ಸುತ್ತು ಬಳಸುವುದು ತಪ್ಪುತ್ತದೆ

ಪಾಲೋಳಿ ಮತ್ತು ಎಡಮಂಗಲ ಪೇಟೆಯ ಮಧ್ಯೆ ಇರುವುದು ಕೇವಲ 2 ಕಿ.ಮೀ.ಗಳ ಅಂತರ. ಆದರೆ ಮಧ್ಯೆ ಕುಮಾರಧಾರಾ ಹೊಳೆ ಹರಿಯುತ್ತಿರುವುದರಿಂದ ಪಾಲೋಳಿ- ಪಿಜಕ್ಕಳದ ಜನರು ಎಡಮಂಗಲವನ್ನು ತಲುಪಬೇಕಾದರೆ ಕಡಬ- ಕೋಡಿಂಬಾಳ- ಪುಳಿಕುಕ್ಕು ಮೂಲಕ 15 ಕಿ.ಮೀ.ಗಳಷ್ಟು ದೂರ ಸುತ್ತು ಬಳಸಿ ಪ್ರಯಾಣಿಸಬೇಕಿದೆ. ಅದೂ ಸಮರ್ಪಕ ಬಸ್‌ ಸೌಕರ್ಯ ಇಲ್ಲದಿರುವುದರಿಂದ ಸುಲಭದ ದಾರಿ ಇಲ್ಲ. ಪಾಲೋಳಿಯಲ್ಲಿ ಸೇತುವೆ ನಿರ್ಮಾಣವಾದರೆ ಕಡಬದಿಂದ ಕೇವಲ 5 ಕಿ.ಮೀ. ಸಂಚರಿಸಿ ಎಡಮಂಗಲ ತಲುಪಬಹುದು.

ಕಳೆದ ಕೆಲವು ವರ್ಷಗಳಿಂದ ಊರವರೇ ಸೇರಿಕೊಂಡು ಶ್ರಮದಾನದ ಮೂಲಕ ಇಲ್ಲಿ ತಾತ್ಕಾಲಿಕ ನೆಲೆಯ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. 4 ವರ್ಷಗಳ ಹಿಂದೆ ದಾನಿಗಳ ಆರ್ಥಿಕ ನೆರವಿನಿಂದ ಎಡಮಂಗಲ ಹಾಗೂ ಪಿಜಕಳ ಪರಿಸರದ ಜನರ ಶ್ರಮದಾನದ ಫಲವಾಗಿ ಸುಮಾರು 120 ಮೀ. ಉದ್ದ ಹಾಗೂ 10 ಮೀ. ಅಗಲದ ಸೇತುವೆ ನಿರ್ಮಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ನೀರಿನ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗುವ ಸೇತುವೆಯನ್ನು ಪ್ರತೀ ಬೇಸಗೆಯಲ್ಲಿ ಊರವರು ಪುನರ್‌ ನಿರ್ಮಾಣ ಮಾಡಿ ಉಪಯೋಗಿಸುತ್ತಿದ್ದಾರೆ. ಈ ಬಾರಿಯೂ ಹಾನಿಯಾಗಿರುವ ತಾತ್ಕಾಲಿಕ ಸೇತುವೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿ ಸಾರ್ವಜನಿಕರು ಉಪಯೋಗಿಸುತ್ತಿದ್ದಾರೆ.

ತಾತ್ಕಾಲಿಕ ಸೇತುವೆಯ ಮೊರೆ
ಕಳೆದ ಕೆಲವು ವರ್ಷಗಳಿಂದ ಊರವರೇ ಸೇರಿಕೊಂಡು ಶ್ರಮದಾನದ ಮೂಲಕ ಇಲ್ಲಿ ತಾತ್ಕಾಲಿಕ ನೆಲೆಯ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. 4 ವರ್ಷಗಳ ಹಿಂದೆ ದಾನಿಗಳ ಆರ್ಥಿಕ ನೆರವಿನಿಂದ ಎಡಮಂಗಲ ಹಾಗೂ ಪಿಜಕಳ ಪರಿಸರದ ಜನರ ಶ್ರಮದಾನದ ಫಲವಾಗಿ ಸುಮಾರು 120 ಮೀ. ಉದ್ದ ಹಾಗೂ 10 ಮೀ. ಅಗಲದ ಸೇತುವೆ ನಿರ್ಮಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ನೀರಿನ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗುವ ಸೇತುವೆಯನ್ನು ಪ್ರತೀ ಬೇಸಗೆಯಲ್ಲಿ ಊರವರು ಪುನರ್‌ ನಿರ್ಮಾಣ ಮಾಡಿ ಉಪಯೋಗಿಸುತ್ತಿದ್ದಾರೆ. ಈ ಬಾರಿಯೂ ಹಾನಿಯಾಗಿರುವ ತಾತ್ಕಾಲಿಕ ಸೇತುವೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿ ಸಾರ್ವಜನಿಕರು ಉಪಯೋಗಿಸುತ್ತಿದ್ದಾರೆ.
ಪಟ್ಟಿಯಲ್ಲಿ ಸೇರ್ಪಡೆಪಾಲೋಳಿ ಸೇತುವೆಗೆ ಅಂದಾಜುಪಟ್ಟಿ ತಯಾರಿಸಲಾಗಿದೆ. ಸರಕಾರದ ಸೂಚನೆಯಂತೆ ಕೆಆರ್‌ಡಿಸಿಎಲ್ಗೆ ಸೇತುವೆ ನಿರ್ಮಾಣಕ್ಕೆ ಬೇಕಾದ ಜಮೀನಿನ ಮಾಹಿತಿ, ಇತರ ವಿವರಗಳುಳ್ಳ ಸಾಧ್ಯತಾ ವರದಿ ಸಲ್ಲಿಸಿ ದ್ದೇವೆ. ಕೆಆರ್‌ಡಿಸಿಎಲ್ನ 2019-20ನೇ ಸಾಲಿನ ಕಾಮಗಾರಿಗಳ ಪಟ್ಟಿಗೆ ಪಾಲೋಳಿ ಸೇತುವೆಯನ್ನೂ ಸೇರಿಸಿದೆ. ಪ್ರಕ್ರಿಯೆಗಳ ಬಳಿಕ ಟೆಂಡರ್‌ ಆಗಬೇಕಿದೆ.
– ಪ್ರಮೋದ್‌ ಕುಮಾರ್‌ ಕೆ.ಕೆ. ಪಿಡಬ್ಲ್ಯೂಡಿ ಎಇ, ಪುತ್ತೂರು

ನಾಗರಾಜ್‌ ಎನ್‌.ಕೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ