ಮೈತ್ರಿ ಶಾಸಕರ ಮೇಲೆ ಬಿಜೆಪಿ ಒತ್ತಡ

Team Udayavani, Jan 17, 2019, 6:37 AM IST

ಬಳ್ಳಾರಿ: ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲದೆ ಮೈತ್ರಿ ಸರ್ಕಾರದ ಶಾಸಕರ ಮೇಲೆ ಒತ್ತಡ ಹೇರಿ ಆಪರೇಷನ್‌ ಕಮಲಕ್ಕೆ ಮುಂದಾಗುತ್ತಿರುವ ಬಿಜೆಪಿಯವರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನ ಪಾಠ ಕಲಿಸಲಿದ್ದಾರೆ ಎಂದು ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಮುಕ್ತ ಭಾರತ, ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮುಕ್ತ ಕರ್ನಾಟಕ ಮಾಡಲು ಮತದಾರರು ಬದ್ಧರಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ 2008, 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶವಿಲ್ಲ. ರಾಜ್ಯದ ಜನ ಎರಡು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡುವಂತೆ ಜನಾದೇಶ ನೀಡಿದ್ದಾರೆ. ಅದರಂತೆ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ನಿಲುವುಗಳು ಒಂದೇ ಆಗಿದ್ದರಿಂದ ಎರಡು ಪಕ್ಷಗಳು ಸೇರಿ ಸರ್ಕಾರ ರಚಿಸಿವೆ. ಆದರೆ, ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ, ಜನಾದೇಶದ ಮೇಲೆ ನಂಬಿಕೆಯಿಲ್ಲ. ಸರ್ಕಾರ ರಚನೆ ಮಾಡಲು ವಾಮಮಾರ್ಗ ಹಿಡಿದಿದ್ದಾರೆ ಎಂದು ವ್ಯಂಗ್ಯವಾಡಿದರು.

ಭಾರತವನ್ನು ಕಾಂಗ್ರೆಸ್‌ ಮುಕ್ತಗೊಳಿಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾಗೆ ಈಚೆಗೆ ನಡೆದ ಬಳ್ಳಾರಿ ಲೋಕಸಭೆ ಉಪಚುನಾವಣೆ ಮತ್ತು ಪಂಚರಾಜ್ಯಗಳ ಚುನಾವಣಾ ಫಲಿತಾಂಶವೇ ತಕ್ಕ ಉತ್ತರ ನೀಡಿದೆ. ಅದರಂತೆ ರಾಜ್ಯದಲ್ಲೂ ಮೈತ್ರಿ ಸರ್ಕಾರ ಉರುಳಿಸಲು ಕಸರತ್ತು ನಡೆಸಿದರೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿ ಯಾವುದೇ ಒತ್ತಡ ತಂದರೂ ನಮ್ಮ ಶಾಸಕರು ನಮ್ಮ ಜೊತೆ ಇದ್ದಾರೆ ಎಂಬ ನಂಬಿಕೆ ಈಗಲೂ ಇದೆ. ಆನಂದ್‌ ಸಿಂಗ್‌ ಗಂಟೆಗಟ್ಟಲೇ ಫೋನ್‌ನಲ್ಲಿ ನನ್ನ ಜೊತೆ ಮಾತಾಡಿದ್ದಾರೆ. ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌, ಚಿಕ್ಕಮಗಳೂರಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಹ.ಬೊ.ಹಳ್ಳಿ ಶಾಸಕ ಭೀಮಾನಾಯ್ಕ ಮೊನ್ನೆ ನನ್ನ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇನ್ನು ನನ್ನ ಸಹೋದರ ನಾಗೇಂದ್ರ, ಅವರನ್ನು ಕಾಂಟ್ಯಾಕ್ಟ್ ಮಾಡಲು ದಿನವೂ ಟ್ರೈ ಮಾಡ್ತಾ ಇದ್ದೀನಿ. ಫೋನ್‌ ಮಾಡಿದಾಗಲೆಲ್ಲ ಅವರ ನಂಬರ್‌ ಸ್ವಿಚ್ ಆಫ್‌ ಆಗಿದೆ. ಅವಕಾಶ ನಮ್ಮ ಬಳಿ ಹುಡುಕಿಕೊಂಡು ಬರುತ್ತೆ ಆತುರ ಬೇಡ ಎಂದು ಹೇಳಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೊಂದಿಗೂ ಮಾತನಾಡಿಸಿದ್ದೇನೆ. ಸ್ವಲ್ಪ ತಾಳ್ಮೆ ಬೇಕು ಎಂದು ಹೇಳಿದ್ದೇನೆ. ಆದರೂ, ಒತ್ತಡ ಹೇರಿ ಆಪರೇಷನ್‌ ಕಮಲದ ಮೂಲಕ ಶಾಸಕರನ್ನು ಖರೀದಿಸಲು ಮುಂದಾದ ಬಿಜೆಪಿಗೆ ಕಿಂಚಿತ್ತೂ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ದೂರಿದರು.

ಆಪರೇಷನ್‌ ಕಮಲದ ಮೂಲಕ ಶಾಸಕರನ್ನು ಕರೆದೊಯ್ದು ಮುಂಬೈ, ಗುರುಗಾಂವ್‌, ದೆಹಲಿಯಲ್ಲಿಟ್ಟಿರುವ ಬಿಜೆಪಿಯವರು, ಅಲ್ಲಿನ ಮಹಾರಾಷ್ಟ್ರ, ಹರ್ಯಾಣ ರಾಜ್ಯ ಸರ್ಕಾರ, ದೆಹಲಿಯಲ್ಲಿರುವ ಕೇಂದ್ರ ಸರ್ಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ