ಗುಳೇದ ಲಕ್ಕಮ್ಮ ನಿನ್ನಾಲ್ಕು ಉಧೋ…ಉಧೋ…

Team Udayavani, Jan 17, 2019, 6:45 AM IST

ಹರಪನಹಳ್ಳಿ: ಕೈಲಿ ಹಣ್ಣು-ಕಾಯಿ, ಊದುಬತ್ತಿ ಹಿಡಿದು ದೇವಿಯ ದರ್ಶನಕ್ಕಾಗಿ ಸಾಲುಗಟ್ಟಿ ನಿಂತ ಭಕ್ತರು, ಇನ್ನೊಂದೆಡೆ ಬೇವಿನ ಉಡುಗೆ, ದೀಡ್‌ ನಮಸ್ಕಾರ ಸೇರಿದಂತೆ ವಿವಿಧ ಹರಕೆ ತೀರಿಸಲು ದೇವಸ್ಥಾನ ಸುತ್ತು ಹಾಕುತ್ತಾ ಲಕ್ಕಮ್ಮ ನಿನ್ನಾಲ್ಕು ಉಧೋ…ಉಧೋ… ಎಂಬ ಜೈಘೋಷ. ಇದು ತಾಲೂಕಿನ ಹುಲಿಕಟ್ಟೆ ಗ್ರಾಮ ಸಮೀಪದ ಅರಣ್ಯದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಗುಳೇದ ಲಕ್ಕಮ್ಮದೇವಿ ಸನ್ನಿಧಿಯಲ್ಲಿ ಬುಧವಾರ ಬೆಳಗಿನ ಜಾವದಿಂದ ಸಂಜೆಯವರೆಗೂ ಕಂಡು ಬಂದ ದೃಶ್ಯ.

ದಾವಣಗೆರೆ ಜಿಲ್ಲೆ ಸೇರಿದಂತೆ ನೆರೆಯ ಚಿತ್ರದುರ್ಗ, ಬಳ್ಳಾರಿ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಂದ ಟ್ರ್ಯಾಕ್ಟರ್‌, ಎತ್ತಿನಗಾಡಿ, ವಿವಿಧ ವಾಹನಗಳ ಮೂಲಕ ಲಕ್ಷಾಂತರ ಜನ ಭಕ್ತರು ಆಗಮಿಸಿದ್ದರು.

ಜನಜಂಜುಳಿ ತಪ್ಪಿಸಲು ಭಕ್ತರು ಸರದಿ ಸಾಲಿನಲ್ಲಿ ಬರುವಂತೆ ದೇವಸ್ಥಾನದ ಸುತ್ತಲೂ ಬ್ಯಾರಿಕೇಡ್‌ ಹಾಕಿ ಧ್ವನಿವರ್ಧಕದ ಮೂಲಕ ಜನರಲ್ಲಿ ಶಾಂತಿ ಕಾಪಾಡುವಂತೆ ಕೋರಲಾಗುತ್ತಿತ್ತು. ಭಕ್ತರು ಬೇವಿನ ಉಡುಗೆ ಉಟ್ಟು, ದೀಡ್‌ ನಮಸ್ಕಾರ ಹಾಕಿ ಹರಕೆ ತೀರಿಸಿದರು.

ಕುರಿ-ಕೋಳಿ ಬಲಿ: ದೇವಿಗೆ ಮಾಂಸದಡುಗೆ ನೈವೇದ್ಯ ತೋರಿಸಲು ಭಕ್ತರು ತಮ್ಮ ಶಕ್ತ್ಯಾನುಸಾರ ಕುರಿ-ಕೋಳಿ ಬಲಿ ನೀಡಿದರು. ನೈವೇದ್ಯವನ್ನು ದೇವರಿಗೆ ಸಲ್ಲಿಸಿ, ನಂತರ ಎಲ್ಲೆಂದರಲ್ಲಿ ಹಾಕದಂತೆ ಪ್ರತ್ಯೇಕವಾಗಿ ಡಬ್ಬಗಳನ್ನು ಇಡಲಾಗಿತ್ತು. ಪ್ರತಿ ವರ್ಷ ದೇವಸ್ಥಾನದ ಮರಕ್ಕೆ ಕುರಿ, ಕೋಳಿಯ ಕಾಲು, ತಲೆಯನ್ನು ಹರಕೆಗಾಗಿ ಭಕ್ತರು ಕಟ್ಟುತ್ತಿದ್ದರು. ಇದಕ್ಕೆ ನಿರ್ಬಂಧ ಹೇರಲಾಗಿದ್ದು, ದೇವಸ್ಥಾನದ ಹೊರಾಂಗಣದ ಮರಗಳಿಗೆ ಪ್ರಾಣಿಗಳ ತಲೆ-ಕಾಲು ಕಟ್ಟುತ್ತಿರುವುದು ಕಂಡು ಬಂತು.

ಇಷ್ಟಾರ್ಥ ಸಿದ್ಧಿಗಾಗಿ ಒಂಬತ್ತು ದಿನಗಳ ಕಾಲ ನಿಷ್ಕಲ್ಮಶ ಭಕ್ತಿಯಿಂದ ಗೋಧಿ ಸಸಿಯನ್ನು ಬಿದರಿನ ಬುಟ್ಟಿಯಲ್ಲಿ ಬೆಳೆದು, ಬಣ್ಣದ ಕಾಗದ ಹಾಗೂ ಅವರದೇ ಆದ ವಿಶಿಷ್ಟ ಶೈಲಿಯಲ್ಲಿ ಅಲಂಕರಿಸಿದ ಪುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಬಂದು ಅಮ್ಮನ ಅಡಿದಾವರೆಗೆ ಅರ್ಪಿಸಿದರು. ಮಾಂಸದ ಊಟದ ಜೊತೆಗೆ ಕೆಲವರು ಮದ್ಯಪಾನ ಮಾಡುವುದೂ ಕಂಡು ಬಂತು.

ಊರೆಲ್ಲ ಖಾಲಿ ಖಾಲಿ: ಹುಲಿಕಟ್ಟಿ ಗ್ರಾಮದ ಎಲ್ಲಾ ಜನರು ಎರಡು ದಿನಗಳ ಕಾಲ ಊರಲ್ಲಿ ಒಂದು ನರಪಿಳ್ಳೆಯೂ ಇಲ್ಲದಂತೆ ಮಕ್ಕಳು-ಮರಿ, ಸಾಕುಪ್ರಾಣಿ ಸಮೇತ ಜಾತ್ರೆ ಸಂದರ್ಭದಲ್ಲಿ ದೇವಸ್ಥಾನದ ಬಳಿ ಬಿಡಾರ ಹೂಡುತ್ತಾರೆ. ವಿಶೇಷವಾಗಿ ವಿವಿಧ ಭಾಗಗಳಿಂದ ಬಂಜಾರ ಸಮುದಾಯದ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎನ್ನುತ್ತಾರೆ ತಾ.ಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ.

ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಕಾಂಗ್ರೆಸ್‌ ನಾಯಕಿ ಎಂ.ಪಿ. ಲತಾ ಮಲ್ಲಿಕಾರ್ಜುನಯ್ಯ, ಜೆಡಿಎಸ್‌ ನಾಯಕ ಅರಸೀಕೆರೆ ಕೊಟ್ರೇಶ್‌, ಪುರಸಭೆ ಅಧ್ಯಕ್ಷ ಎಚ್.ಕೆ. ಹಾಲೇಶ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಪಿ.ಎಲ್‌. ಪೋಮ್ಯನಾಯ್ಕ, ಶಶಿಧರ ಪೂಜಾರ್‌, ಎಂ.ವಿ. ಅಂಜಿನಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಲಕ್ಷ್ಮಣ್‌, ಕಣವಿಹಳ್ಳಿ ಮಂಜುನಾಥ್‌, ತಾ.ಪಂ ಉಪಾಧ್ಯಕ್ಷ ಎಲ್‌.ಮಂಜ್ಯನಾಯ್ಕ, ಎಂ.ಪಿ.ನಾಯ್ಕ, ಬಿ.ವೈ. ವೆಂಕಟೇಶನಾಯ್ಕ ಸೇರಿದಂತೆ ಅನೇಕ ಗಣ್ಯರು ದೇವಿಯ ದರ್ಶನ ಪಡೆದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ