ಶರಣರು ಜಾತಿ-ಮತಕ್ಕೆ ಸೀಮಿತರಲ್ಲ
Team Udayavani, Jan 22, 2022, 7:57 PM IST
ಹರಿಹರ: ಅಂಬಿಗರ ಚೌಡಯ್ಯ ಸೇರಿದಂತೆ ಶರಣರು ಯಾವುದೇ ಜಾತಿ-ಮತಗಳಿಗೆ ಸೀಮಿತರಲ್ಲ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದರು. ನಗರದ ತಾಲೂಕು ಆಡಳಿತ ಕಚೇರಿಯಲ್ಲಿ ಶುಕ್ರವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಸಿದ್ಧಗಂಗಾ ಶ್ರೀಗಳ ಮೂರನೇ ಪುಣ್ಯಸ್ಮರಣೆಯ ದಾಸೋಹ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಜಶರಣ ಅಂಬಿಗರ ಚೌಡಯ್ಯರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಅವರು ಮೇಲು-ಕೀಳು ಎಂಬ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಸಮಸಮಾಜ ನಿರ್ಮಿಸಲು ಶ್ರಮಿಸಿದ್ದಾರೆ. ಬಸವ ತತ್ವ ಪರಿಪಾಲಕರಾದ ಅಂಬಿಗರ ಚೌಡಯ್ಯನವರು ಮೌಡ್ಯ ಹೋಗಲಾಡಿಸಿ ವಿಶ್ವ ಮಾನವ ಸಂದೇಶ ಸಾರಿದವರಾಗಿದ್ದಾರೆ. ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳು ಜಾತಿ, ಮತ ಭೇದ ಎಣಿಸದೆ ಸರ್ವರಿಗೂ ತ್ರಿವಿಧ ದಾಸೋಹ ನೀಡಿದವರಾಗಿದ್ದಾರೆ ಎಂದರು.
ನಗರಸಭೆ ಸದಸ್ಯ ಎಸ್.ಎಂ. ವಸಂತ್ ಮಾತನಾಡಿ, ಮೌಡ್ಯ, ಅನ್ಯಾಯದ ವಿರುದ್ಧ ಹೋರಾಡಿದ ಅಂಬಿಗರ ಚೌಡಯ್ಯನವರ ಹಾಗೂ ಬಡ ಮಕ್ಕಳ ಶಿಕ್ಷಣಕ್ಕೆ ಜೋಳಿಗೆ ಹಿಡಿದ ಸಿದ್ಧಗಂಗಾ ಶ್ರೀಗಳ ಸ್ಮರಣೆ ಒಂದೇ ದಿನ ಬಂದಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು. ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಗ್ರೇಡ್-2 ತಹಶೀಲ್ದಾರ್ ಶಶಿಧರ, ಗಂಗಾಮತ ಸಮಾಜದ ಮುಖಂಡರಾದ ಕೆಂಚನಹಳ್ಳಿ ಮಹಂತೇಶಪ್ಪ, ಪೇಟೆ ಬಸಣ್ಣ, ಗರಡಿಮನಿ ಬಸಣ್ಣ, ರಮೇಶ ರಾಟಿ, ಜಿ.ಎಚ್ ಬಸವರಾಜ್, ಬಲ್ಲೂರು ಪ್ರಕಾಶ್, ಅಶೋಕ್, ಹೊನ್ನಪ್ಪ ಇತರರು ಇದ್ದರು.