ಹಗ್ಗದ ಮೇಲೆ ವಿದ್ಯಾರ್ಥಿನಿಯರ ಸಾಹಸಗಾಥ

Team Udayavani, Mar 5, 2019, 7:22 AM IST

ಕಲಘಟಗಿ: ಬೆಲವಂತರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯರು ಹಗ್ಗದ ಮೇಲೆ ಯೋಗ ಮತ್ತು ಪಿರಾಮಿಡ್‌ ಪ್ರದರ್ಶಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಡಿ.ಎಸ್‌. ಅಂಬಿಗ ಮಾರ್ಗದರ್ಶನದಲ್ಲಿ ಬಾಲಕಿಯರು ಲೀಲಾಜಾಲವಾಗಿ ಹಗ್ಗದ ಮೇಲೆ ಸಾಹಸ ಪ್ರದರ್ಶಿಸಿ ಗಮನ ಸೆಳೆಯುತ್ತಿದ್ದಾರೆ.

ಶಾಲೆಯಲ್ಲಿ 1ರಿಂದ 8ನೇ ತರಗತಿ ವರೆಗೆ 400ರಷ್ಟು ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ 4, 5, 7, 8ನೇ ತರಗತಿಯ ಹತ್ತು ವಿದ್ಯಾರ್ಥಿನಿಯರು ಈ ಯೋಗ ಪ್ರದರ್ಶನದಲ್ಲಿ ತೊಡಗಿಸಿಕೊಂಡು ತಾಲೂಕಿನ ವಿದ್ಯಾರ್ಥಿ ವೃಂದಕ್ಕೆ ಆದರ್ಶಪ್ರಾಯವಾಗಿದ್ದಾರೆ. 

ಯೋಗ ಪ್ರದರ್ಶನದ ಮೂಲಕ ಯೋಗದ ಮಹತ್ವ ಅರಿವು ಮೂಡಿಸುವ ಅಂಬಿಗ ಅವರ ಕನಸು ನನಸಾಗಿಸಲು ಅವರ ಶಾಲೆಯ ಒಬ್ಬ ವಿದ್ಯಾರ್ಥಿನಿಯೇ ಕಾರಣ ಎಂಬುದು ವಿಶೇಷ! ತಾಲೂಕಿನ ದ್ಯಾವನಕೊಂಡದ ವಿದ್ಯಾರ್ಥಿನಿ ನಿಸರ್ಗ ಮಾಳಗಿ ಬೆಲವಂತರ ಶಾಲೆಗೆ ಬರುವ ಮುನ್ನ ಕುಂದಗೋಳದ ಜೆಎಸ್ಸೆಸ್‌ ವಿದ್ಯಾಪೀಠದ ವಿದ್ಯಾರ್ಥಿನಿಯಾಗಿದ್ದಳು. ಅಲ್ಲಿ ಮೂಡಬಿದರೆಯ ಯೋಗ ಶಿಕ್ಷಕಿ ಅಶ್ವಿ‌ನಿ ಎಂಬುವರಿಂದ ಜರುಗಿದ ಯೋಗ ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆದಿದ್ದಳು. ಇದನ್ನರಿತ ಅಂಬಿಗ ಅವರು ತಮ್ಮ ಶಾಲೆಯ ಮಕ್ಕಳಿಗೇಕೆ ಯೋಗ ತರಬೇತಿ ನೀಡಿ ಮಕ್ಕಳ ಸಾಧನೆಗೆ ಮುಂದಾಗಬಾರದು ಎಂದು ಕಾರ್ಯೋನ್ಮುಖರಾದರು. ಶಾಲಾ ಮುಖ್ಯೋಪಾಧ್ಯಾಯರು, ಇತರೇ ಶಿಕ್ಷಕರು ಮತ್ತು ಕೆಲ ಪಾಲಕರೊಂದಿಗೆ ಚರ್ಚಿಸಿ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನಕ್ಕೆ ಮುಂದಾದರು.

ಯಾರ್ಯಾರು?: 8ನೇ ತರಗತಿಯಲ್ಲಿ ಓದುತ್ತಿರುವ ನಿಸರ್ಗ ಮಾಳಗಿ ಅವಳೊಂದಿಗೆ 4ನೇ ತರಗತಿಯ ಸೌಭಾಗ್ಯ ಬಸನಕೊಪ್ಪ, 5ನೇ ತರಗತಿಯ ಸೌಜನ್ಯ ಕರ್ಲಟ್ಟಿ, ನೀಲಮ್ಮ ಕೋಟಿ, ಭಾರತಿ ಪೂಜಾರ, ಸಂಗೀತಾ ಬಡಿಗೇರ, 7ನೇ ತರಗತಿಯ ದೀಪಾ ಭರಮಪ್ಪನವರ, ಬಸಮ್ಮ ಸಂಕಣ್ಣವರ, ಪವಿತ್ರಾ ವೀರಾಪುರ ಹಾಗೂ 8ನೇ ತರಗತಿಯ ಶಿವಲೀಲಾ ಹುರಕಡ್ಲಿ ಲೀಲಾಜಾಲವಾಗಿ ಹಗ್ಗದ ಮೇಲೆ ಯೋಗ ಪ್ರದರ್ಶನ ಮಾಡುತ್ತಲಿದ್ದಾರೆ. 

ಆರಂಭದಲ್ಲಿ ಬಾಲಕಿಯರು ತರಬೇತಿಗೆ ಹಿಂಜರಿದರಾದರೂ ಅಂಬಿಗ ಅವರು ಸತತ ಪರಿಶ್ರಮದಿಂದ 10 ವಿದ್ಯಾರ್ಥಿನಿಯರನ್ನು ಅಣಿಗೊಳಿಸಿದ್ದು, ಫಲಶ್ರುತಿ ಈಗ ಕಾಣುತ್ತಿದೆ. ಈ ಹತ್ತು ವಿದ್ಯಾರ್ಥಿನಿಯರು ಹಗ್ಗದ ಮೇಲೆ ಪದ್ಮಾಸನ, ತಾಡಾಸನ, ವೀರಭದ್ರಾಸನ, ಪಶ್ಚಿಮೋತ್ತಾಸನ,
ವೃಕ್ಷಾಸನ, ಮತ್ಸೇಂದ್ರಾಸನ, ಶೀರ್ಷಾಸನ ಮತ್ತು ಪಿರಾಮಿಡ್‌ಗಳ ಪ್ರದರ್ಶನ ನೀಡುತ್ತಲಿದ್ದಾರೆ.

ವಿದ್ಯಾರ್ಥಿನಿಯರು ಶಾಲೆ ಹಾಗೂ ಗ್ರಾಮದಲ್ಲಿ ಜರುಗುತ್ತಿರುವ ವಿಶೇಷ ಕಾರ್ಯಕ್ರಮಗಳಲ್ಲಿ ತಮ್ಮ ಯೋಗ ಪ್ರದರ್ಶನವನ್ನು ನೀಡಿ ಜನ ಮನ್ನಣೆ ಪಡೆಯುತ್ತ ಇತರೆ ಮಕ್ಕಳನ್ನೂ ಆಕರ್ಷಿಸುತ್ತಿದ್ದಾರೆ. ಅಂಬಿಗ ಅವರು ಪ್ರತಿ ಬುಧವಾರ ಯೋಗ ತರಬೇತಿಯನ್ನು ಕಡ್ಡಾಯವಾಗಿ ನೀಡಬೇಕೆನ್ನುವ ಮನೋಬಲ ಹೊಂದಿದ್ದು, ಶಿಕ್ಷಕರು, ಎಸ್‌ಡಿಎಂಸಿಯವರು ಮತ್ತು ಗ್ರಾಮಸ್ಥರು ಸಹಕರಿಸುತ್ತಿದ್ದಾರೆ. ಶಿಕ್ಷಣ ಇಲಾಖೆ ಈ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವುದರೊಂದಿಗೆ ತಾಲೂಕಿನ ಎಲ್ಲ ಶಾಲೆಗಳಲ್ಲಿಯೂ ಯೋಗಾಭ್ಯಾಸಕ್ಕೆ ಹೆಚ್ಚಿನ ಮುತುವರ್ಜಿ ವಹಿಸಲು ಮುಂದಾಗಬೇಕೆಂಬುದು ಪಾಲಕರ ಹಾಗೂ ಸಾರ್ವಜನಿಕರ ಅಪೇಕ್ಷೆಯಾಗಿದೆ.

ಮಕ್ಕಳ ಪ್ರತಿಭೆ ಗುರುತಿಸಿ ಅನಾವರಣಗೊಳಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ಡಿ.ಎಸ್‌. ಅಂಬಿಗ ಅವರ ಕಾರ್ಯ ಶ್ಲಾಘನೀಯ. ಎಲ್ಲ ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು.  ಎಂ.ಎಚ್‌. ಮುನ್ನೊಳ್ಳಿ, ಮುಖ್ಯಾಧ್ಯಾಪಕ  ಶಾಲೆಯಲ್ಲಿ ಯೋಗ ಚಟುವಟಿಕೆಗಳು ಆರಂಭಗೊಂಡಂದಿನಿಂದ ಮಕ್ಕಳು ನಿರಂತರವಾಗಿ ಉತ್ಸುಕತೆಯಿಂದ ಆಟ-ಪಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಕಾಣಿಸುತ್ತಿದೆ.
 ಚನ್ನಪ್ಪ ಬಳಗಲಿ, ಪಾಲಕ, ಬೆಲವಂತರ
 
ಹಿರಿ-ಕಿರಿಯರೆಲ್ಲರೂ ಪ್ರತಿದಿನ ಜೀವನದಲ್ಲಿ ಯೋಗಾಭ್ಯಾಸ ಮಾಡುವುದರಿಂದ ದೈಹಿಕ-ಮಾನಸಿಕ ಸದೃಢತೆ ಉಂಟಾಗಿ ಲವಲವಿಕೆಯಿಂದ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ನಮ್ಮ ಶಾಲೆಯ ಮಕ್ಕಳು ಇದಕ್ಕೆ ಮುಂದಾಗಿರುವುದು ಹೆಮ್ಮೆ ಎನಿಸಿದೆ.
 ಈರಪ್ಪ ಬಸನಕೊಪ್ಪ, ಬೆಲವಂತರ, ಎಸ್‌ಡಿಎಂಸಿ ಸದಸ್ಯ

ಪ್ರಭಾಕರ ನಾಯಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ