ಕುರಿ-ಮೇಕೆಗಳಿಗೆ ನೀಲಿ ನಾಲಿಗೆ ರೋಗ
ನಿತ್ಯ ಸಾಯುತ್ತಿವೆ 50ಕ್ಕೂ ಹೆಚ್ಚು ಕುರಿ-ಆಡುಗಳು; ಪರಿಹಾರಕ್ಕಾಗಿ ಕುರಿಗಾಹಿಗಳ ಅಲೆದಾಟ
Team Udayavani, Dec 5, 2022, 3:18 PM IST
ಗದಗ: ಕಳೆದ ಮೂರ್‍ನಾಲ್ಕು ತಿಂಗಳ ಕಾಲ ಸುರಿದ ನಿರಂತರ ಮಳೆ ಹಾಗೂ ಅತಿವೃಷ್ಟಿಯಿಂದಾಗಿ ರೈತರು ಬೆಳೆದ ಬೆಳೆ ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದರು. ಇದೀಗ ಅದೇ ಮಳೆಯ ಅವಾಂತರದ ಪರಿಣಾಮವಾಗಿ ಕುರಿಗಾಹಿಗಳು ಕುರಿಗಳನ್ನು ಕಳೆದುಕೊಂಡು ಪರಿಹಾರಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ನವೆಂಬರ್ ತಿಂಗಳಿನಿಂದ ಕುರಿಗಳಿಗೆ ಅಂಟಿಕೊಂಡಿರುವ ನೀಲಿ ನಾಲಿಗೆ ರೋಗ ಜಿಲ್ಲೆಯಲ್ಲಿ ನಿತ್ಯ 40ರಿಂದ 50 ಕುರಿ-ಮೇಕೆಗಳನ್ನು ಬಲಿ ಪಡೆದುಕೊಳ್ಳುತ್ತಿದೆ. ಜೊತೆಜೊತೆಗೆ ಕುರಿಗಳು ಮತ್ತು ಮೇಕೆಗಳು ಕರುಳು ಬೇನೆ ರೋಗ, ಗಟಲು ಬೇನೆ, ಹೊಟ್ಟೆ ಉಬ್ಬರ ಹಾಗೂ ನ್ಯುಮೋನಿಯಾ ರೋಗಕ್ಕೆ ಬಲಿಯಾಗುತ್ತಿದ್ದು, ಕುರಿಗಾಹಿಗಳನ್ನು ಆತಂಕಕ್ಕೀಡು ಮಾಡಿದೆ.
ಗದಗ ತಾಲೂಕಿನ ಮಹಾಲಿಂಗಪುರ, ಶಿಂಗಟರಾಯಕೇರಿ ತಾಂಡೆ ಸೇರಿದಂತೆ ಹಲವೆಡೆ ನೀಲಿ ನಾಲಿಗೆ ರೋಗ ಹಾಗೂ ಹೊಟ್ಟೆ ಉಬ್ಬರ ಸಮಸ್ಯೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಕುರಿ-ಮೇಕೆಗಳು ಸಾವಿಗೀಡಾಗುತ್ತಿವೆ. ಪ್ರತಿನಿತ್ಯ ಗದಗ ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಾರ್ಯಾಲಯಕ್ಕೆ 15ರಿಂದ 20 ಸಾವಿಗೀಡಾದ ಕುರಿ-ಮೇಕೆಗಳನ್ನು ಮಹಜರಗಾಗಿ ತೆಗೆದುಕೊಂಡು ಬರಲಾಗುತ್ತಿದೆ.
ರೋಗ ಹರಡುವಿಕೆ ಹೆಚ್ಚಳ: ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆ ಅತಿವೃಷ್ಟಿಯಿಂದ ಕೂಡಿದ್ದರ ಪರಿಣಾಮವಾಗಿ ನೀರು ಅಲ್ಲಲ್ಲಿ ನಿಂತುಕೊಂಡಿದೆ. ಇದು ಸೊಳ್ಳೆ ಹಾಗೂ ನೊಣಗಳ ಉತ್ಪತ್ತಿಗೆ ಕಾರಣವಾಗಿದೆ. ಇದರಿಂದ ಸಾಂಕ್ರಾಮಿಕ ನೀಲಿ ನಾಲಿಗೆ ರೋಗ ಹಾಗೂ ಹೊಟ್ಟೆ ಉಬ್ಬರ ಸಮಸ್ಯೆಯಿಂದಕುರಿ-ಮೇಕೆಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ.
ಯಾವ ಕುರಿಗೆ ಎಷ್ಟು ಪರಿಹಾರ?: 3 ತಿಂಗಳಿನಿಂದ 6 ತಿಂಗಳಿನ ಮೃತಪಟ್ಟ ಕುರಿ ಹಾಗೂ ಮೇಕೆ ಮರಿಗಳಿಗೆ ಅನುಗ್ರಹ ಕೊಡುಗೆ ಯೋಜನೆಯಡಿ 2,500 ರೂ. ಹಾಗೂ 6ತಿಂಗಳಿನಿಂದ ಮೇಲಟ್ಟ ಕುರಿ-ಮೇಕೆಗಳಿಗೆ ತಲಾ 5,000 ರೂ. ಪರಿಹಾರ ನೀಡಲಾಗುತ್ತಿದೆ. ಮೃತಪಟ್ಟ ಕುರಿ ಹಾಗೂ ಮೇಕೆಗಳನ್ನು ಕುರಿಗಾಹಿಗಳು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪಶು ಆಸ್ಪತ್ರೆಗಳಲ್ಲಿ ಪಶು ಇಲಾಖೆಯ ಸಹಾಯಕ ನಿರ್ದೇಶಕರೊಟ್ಟಿಗೆ ಮೃತಪಟ್ಟ ಕುರಿಯೊಂದಿಗೆ ಕುರಿಗಾಹಿ ಫೋಟೋ ತೆಗೆದುಕೊಂಡು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇತರೆ ಸಮಿತಿ ಸದಸ್ಯರ ಒಪ್ಪಿಗೆ ಪತ್ರದೊಂದಿಗೆ ಕುರಿ ಅಭಿವೃದ್ಧಿ ಮಂಡಳಿಗೆ ಅರ್ಜಿ ಸಲ್ಲಿಸಿದಾಗ ಪರಿಹಾರದ ಮೊತ್ತ ನೇರವಾಗಿ ಕುರಿಗಾಹಿಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ರೋಗ ಲಕ್ಷಣ-ನಿಯಂತ್ರಣ ಕ್ರಮ: ನೀಲಿ ನಾಲಿಗೆ ರೋಗ ಕಾಣಿಸಿಕೊಂಡ ಕುರಿಗಳ ನಾಲಿಗೆ ದಪ್ಪವಾಗಿ ನೀಲಿ ಬಣ್ಣಕ್ಕೆ ತಿರುಗುತ್ತದೆ. ಅತಿಯಾದ ಜ್ವರ ಕಾಣಿಸಿಕೊಂಡು ಬಾಯಲ್ಲಿ ಹುಣ್ಣುಗಳಾಗಿ ಮುಖ ಊತ ಬಂದು ಜೊಲ್ಲು ಸುರಿಸುತ್ತವೆ. ಮೇವು ತಿನ್ನಲಾಗದೇ ನಿತ್ರಾಣಗೊಂಡು ಸಾವಿಗೀಡಾಗುತ್ತವೆ. ಆದ್ದರಿಂದ, ಕುರಿಗಾಹಿಗಳು ಕುರಿ ಹಟ್ಟಿಗಳನ್ನು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ನೀರು ನಿಂತುಕೊಂಡು ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ನೀಡಬಾರದು. ಪ್ರತಿದಿನ ಸಂಜೆ ವೇಳೆ ಹೊಗೆ ಹಾಕುವ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬೇಕು. ಮಳೆಗಾಲ ಆರಂಭವಾಗುತ್ತಿದ್ದಂತೆ ಲಸಿಕೆ ಹಾಕಿಸಿದಾಗ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ರೋಗ ಬರದಂತೆ ತಡೆಯಬಹುದು.
ಸಾವಿನ ಸಂಖ್ಯೆ ಹೆಚ್ಚಳ
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕುರಿ ಅಭಿವೃದ್ಧಿ ಮಂಡಳಿ ಮಾಹಿತಿ ಪ್ರಕಾರ, ಕಳೆದ ಸಾಲಿಗಿಂತ ಪ್ರಸಕ್ತ ವರ್ಷ ಕುರಿ-ಮೇಕೆಗಳ ಸಾವಿನ ಸಂಖ್ಯೆ ಹೆಚ್ಚಿದೆ. ಪ್ರತಿ ವರ್ಷ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ನೀಲಿ ನಾಲಿಗೆ ರೋಗ ಕಂಡು ಬರುತ್ತದೆ. ಅಷ್ಟಾಗಿ ರೋಗ ಹರಡುವಿಕೆ ಪ್ರಮಾಣ ಇರುವುದಿಲ್ಲ. ಪ್ರಸಕ್ತ ವರ್ಷ ರೋಗ ಹರಡುವಿಕೆ ಪ್ರಮಾಣ ಹೆಚ್ಚಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಿದೆ. ಗದಗ ತಾಲೂಕುವೊಂದರಲ್ಲಿ 2021ರ ನವೆಂಬರ್ ತಿಂಗಳಿನಲ್ಲಿ 81 ಹಾಗೂ ಡಿಸೆಂಬರ್ ತಿಂಗಳಿನಲ್ಲಿ 477 ಸೇರಿ 558 ಕುರಿ, ಮೇಕೆ ಹಾಗೂ ಮರಿಗಳು ಸಾವಿಗೀಡಾಗಿದ್ದವು. ಪ್ರಸಕ್ತ ವರ್ಷ ನವೆಂಬರ್ ತಿಂಗಳು ಪೂರ್ಣಗೊಳ್ಳವುದರೊಳಗಾಗಿ ಸಾವಿನ ಸಂಖ್ಯೆ 200ರ ಗಡಿ ದಾಟಿತ್ತು.
ಕುರಿಗಾಹಿಗಳ ಪರದಾಟ
ಜಿಲ್ಲೆಯ ಗದಗ ತಾಲೂಕಿನಲ್ಲಿ 27, ಶಿರಹಟ್ಟಿ 13, ರೋಣ 23, ಮುಂಡರಗಿ 16 ಹಾಗೂ ನರಗುಂದ ತಾಲೂಕು 9 ಸೇರಿ ಒಟ್ಟು 88 ಪಶು ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿದ್ದರೂ, ಸಿಬ್ಬಂದಿ ಕೊರತೆಯಿಂದ ತಾಲೂಕಿನ ವಿವಿಧೆಡೆ ಮೃತಪಟ್ಟ ಕುರಿ ಹಾಗೂ ಮೇಕೆಗಳ ಮಹಜರಗಾಗಿ ಗದಗ ನಗರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಚೇರಿಗೆ ತೆಗೆದುಕೊಂಡು ಬರಬೇಕಾದ ಪರಿಸ್ಥಿತಿಯಿದೆ. ಪಕ್ಕದಲ್ಲಿ ಪಶು ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿದ್ದರೂ ಪ್ರಯೋಜನಕ್ಕಿಲ್ಲವಾಗಿದೆ. ಇದರಿಂದ ನಿತ್ಯ ಕುರಿಗಾಹಿಗಳು ನಗರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಚೇರಿಗೆ ಆಗಮಿಸಬೇಕಾಗಿದ್ದು, ಪರದಾಡುವಂತಾಗಿದೆ.
ವರವಾದ ಯೋಜನೆ
ಪಸ್ತುತ ಚಾಲ್ತಿಯಲ್ಲಿರುವ ಅನುಗ್ರಹ ಕೊಡುಗೆ ಯೋಜನೆ ಕುರಿಗಾಹಿಗಳ ಪಾಲಿಗೆ ವರವಾಗಿ ಪರಿಣಮಿಸಿದೆ. ಕಳೆದ 2021ರ ಡಿಸೆಂಬರ್ 1ರಂದು ಆರಂಭವಾದ ಈ ಯೋಜನೆ ಜಿಲ್ಲೆಯ ಕುರಿಗಾಹಿಗಳಿಗೆ ತಕ್ಕಮಟ್ಟಿಗೆ ವರದಾನವಾಗಿದೆ. 2021ರ ಡಿಸೆಂಬರ್, 2022ರ ಜನೇವರಿ, ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ಮೃತಪಟ್ಟ ಕುರಿ-ಮೇಲೆ ಹಾಗೂ ಮರಿಗಳ ಪರಿಹಾರಾರ್ಥವಾಗಿ ಅನುಗ್ರಹ ಕೊಡುಗೆ ಯೋಜನೆಯಡಿ ಕುರಿಗಾಹಿಗಳಿಗೆ ಒಟ್ಟು 82 ಲಕ್ಷ ರೂ. ಪರಿಹಾರ ಧನ ಜಮೆಯಾಗಿದೆ.
ಕಳೆದ ಒಂದು ತಿಂಗಳಿನಿಂದ ಕುರಿಗಳಿಗೆ ನೀಲಿ ನಾಲಿಗೆ ರೋಗ ಕಾಣಿಸಿಕೊಂಡಿದ್ದು, 120 ಕುರಿಗಳ ಪೈಕಿ 20 ಕುರಿಗಳು ರೋಗದಿಂದ ಮೃತಪಟ್ಟಿವೆ. ಲಸಿಕೆ ಹಾಕಿಸಿದ್ದರೂ ಕುರಿಗಳು ಸಾವಿಗೀಡಾಗಿರುವುದು ಚಿಂತೆಗೀಡು ಮಾಡಿದೆ. –ದೇವಪ್ಪ ಲಮಾಣಿ, ಶಿಂಗಟರಾಯನಕೇರಿ ತಾಂಡಾ ನಿವಾಸಿ
ಜಿಲ್ಲೆಯಲ್ಲಿ ನೀಲಿ ನಾಲಿಗೆ ರೋಗ ಹತೋಟಿಗೆ ತರಲಾಗಿದೆ. ಕುರಿ ಹಾಗೂ ಮೇಕೆಗಳಿಗೆ ಮುಂಜಾಗೃತಾ ಕ್ರಮವಾಗಿ ಲಸಿಕೆ ನೀಡಲಾಗಿದೆ. ಆದಾಗ್ಯೂ ಕುರಿಗಾಹಿಗಳ ನಿರ್ಲಕ್ಷ್ಯದಿಂದ ಕೆಲವು ಕಡೆ ಸಾವಿನ ಪ್ರಕರಣಗಳು ಕಂಡುಬರುತ್ತಿವೆ. ಜೊತೆಗೆ ಅನುಗ್ರಹ ಕೊಡುಗೆ ಯೋಜನೆಯಡಿ ಸಾವಿಗೀಡಾದ ಕುರಿ-ಮೇಕೆಗಳಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. -ಡಾ|ಎಚ್.ಬಿ. ಹುಲಗಣ್ಣವರ, ಉಪನಿರ್ದೇಶಕರು, ಪಶುಪಾಲನಾ ಇಲಾಖೆ
ಅರುಣಕುಮಾರ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದ ಅಭಿವೃದ್ಧಿಯಲ್ಲಿ ಸಾಮಾಜಿಕ- ಧಾರ್ಮಿಕ ಸಂಸ್ಥೆಗಳ ಪಾತ್ರ ಮಹತ್ವದ್ದು: ನರೇಂದ್ರ ಮೋದಿ
ಗಂಗಾವತಿ: ದಾಖಲೆ ಇಲ್ಲದೇ 60 ಲಕ್ಷ ರೂ.ಸಾಗಾಟ; ನಗದು ಸಮೇತ ಕಾರು ವಶಕ್ಕೆ
‘ಆರಾಮ್ ಅರವಿಂದ್ ಸ್ವಾಮಿ‘ ಫಸ್ಟ್ ಲುಕ್ ರಿಲೀಸ್
ಬೆಳೆ ಪರಿಹಾರ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ರಾಜ್ಯ ರೈತ ಸಂಘದಿಂದ ಧರಣಿ
ಬಾತ್ ರೂಮ್ ನಲ್ಲಿ ಏಕಾಏಕಿ ಕುಸಿದು ಬಿದ್ದು ಖ್ಯಾತ ನಟಿ ನೀಲು ಕೊಹ್ಲಿ ಅವರ ಪತಿ ಮೃತ್ಯು