ಮಕ್ಕಳ ಓದಿಗೆ ಪ್ರೋತ್ಸಾಹ ನೀಡಿ: ಡಾ| ಸುನೀಲ್‌

Team Udayavani, Nov 4, 2019, 5:15 PM IST

ಗುರುಮಠಕಲ್‌: ಕ್ಷತ್ರೀಯ ಸಮಾಜದವರು ಶಿಕ್ಷಣದ ಮಹತ್ವ ಅರಿತು ಎಲ್ಲರೂ ಶಿಕ್ಷಣಕ್ಕಾಗಿ ಒತ್ತು ನೀಡಬೇಕು ಎಂದು ಡಾ| ಸುನೀಲ್‌ ಕರೆ ನೀಡಿದರು.

ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ರಾಜ ರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಮಕ್ಕಳಲ್ಲಿ ಓದುವ ಸಾಮರ್ಥ್ಯ ಸಾಕಷ್ಟಿದೆ. ಆದರೆ ಪಾಲಕರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ಸಮಾಜದ ಉಪಾಧ್ಯಕ್ಷ ಬುಡ್ಡಪ್ಪ ಜನಾರ್ದನ ಮಾತನಾಡಿ, ಭೂ ಮಂಡಲದ 7 ಚಕ್ರವರ್ತಿ ರಾಜರಲ್ಲಿ ಸಹಸ್ತ್ರಾರ್ಜುನ ಮಹಾರಾಜ ಪರಾಕ್ರಮಿಯಾಗಿದ್ದರು. ಇಂತಹ ರಾಜರ ವಂಶಸ್ಥರಾದ ನಾವು ಅವರ ಜೀವನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಸುಮಾರು 4600 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಮಹಾರಾಜರ ಪರಾಕ್ರಮಗಳ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದೆ. ಲೋಕ ಕಲ್ಯಾಣಕ್ಕಾಗಿ ಅಶ್ವಮೇಧ ಯಾಗವನ್ನು ಮಾಡುತ್ತಿದ್ದ ರಾಜ, ದತ್ತಾತ್ರೇಯ ಮಹಾರಾಜರನ್ನು ತಪಸ್ಸಿನಿಂದ ಒಲಿಸಿಕೊಂಡು ಸಹಸ್ತ್ರ ಬಾಹುಗಳ ವರವನ್ನು ಪಡೆದಿದ್ದರು ಎಂದು ವಿವರಿಸಿದರು.

ಸಮಾಜದ ಕಾರ್ಯದರ್ಶಿ ಚಂದುಲಲ್‌ ಚೌದ್ರಿ ಮಾತನಾಡಿ, ಪ್ರಾಚೀನ ಕಾಲದ ರಾಜವಂಸ್ಥರಾದ ನಾವು ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿದ್ದು, ನಮ್ಮನ್ನು ಆಳುವವರು ನಿರ್ಲಕ್ಷಿಸುತ್ತ ಬಂದಿದ್ದಾರೆ. ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದ ಸಮಾಜವನ್ನು ಸರ್ಕಾರ ಗುರುತಿಸಿ ಅಗತ್ಯ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಅಧ್ಯಕ್ಷ ರಾಮಕಿಶನರಾವ್‌ ಗೋಂಗಲೆ, ಡಾ| ನರಸಿಂಗರಾವ ವೈದ್ಯ, ಅಂಬರಾವ್‌ ಜಿತ್ರೆ, ತುಲಸಿರಾಮ ಗೊಂಗ್ಲೆ, ಅನೀಲ ಬಸೂದೆ, ಶಶಿಕಾಂತ ಮೋಹನ್‌, ನಾಗಪ್ಪ, ರವಿಕುಮಾರ ವೇದಿಕೆಯಲ್ಲಿದ್ದರು. ಹಣಮಂತರಾವ ಗೊಂಗ್ಲೆ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತ ವಂದಿಸಿದರು.

ಇದಕ್ಕೂ ಮೊದಲು ಅಂಕಮ್ಮ ದೇವಸ್ಥಾನದಲ್ಲಿ ಮಹಾರಾಜ ಜಯಂತಿ ಹಿನ್ನೆಲೆ ಪೂಜಾ ಕಾರ್ಯಕ್ರಮ ನೆರವೇರಿತು. ಬಳಿಕ ಪಟ್ಟಣದ ಮುಖ್ಯ ಬೀದಿಗಳ ಮೂಲಕ ಭವ್ಯ ಮೆರವಣಿಗೆ ನಡೆಸಲಾಯಿತು.

ರಾಜಕುಮಾರ, ಶ್ರೀರಾಮ ಬಸೂದೆ, ರವಿಕುಮಾರ ಗೊಂಗಲೆ, ಮಾಣಿಕಪ್ರಭು ಚೌದ್ರಿ, ಯಶವಂತರಾವ ಚೌದ್ರಿ, ತುಕಾರಾಮ, ಮಹೇಶ, ಜಗದೀಶ, ಸುರೇಶ ಗೊಂಗಲೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಯುವಕರು, ಮುಖಂಡರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು .

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ