ಲಕ್ಷ್ಮೀವೆಂಕಟರಮಣಸ್ವಾಮಿ ಉತ್ಸವಮೂರ್ತಿ ರಥ ಪುರಪ್ರವೇಶ

Team Udayavani, Jul 16, 2019, 3:00 AM IST

ಅರಸೀಕೆರೆ: ಪ್ರತಿವರ್ಷದ ಸಂಪ್ರದಾಯದಂತೆ ಅಮರಗಿರಿ ಮಾಲೇಕಲ್ಲು ತಿರುಪತಿ ಲಕ್ಷ್ಮೀವೆಂಕಟರಮಣಸ್ವಾಮಿ ರಥವು ಸೋಮವಾರ ಮಧ್ಯಾಹ್ನ 1.30 ಕ್ಕೆ ಹುಳಿಯಾರು ರಸ್ತೆಯ ಶಿವಾಲಯದ ಸಮೀಪ ಆಗಮಿಸಿದಾಗ ನಗರಸಭೆಯ ಆಯುಕ್ತರು ಮತ್ತು ಸದಸ್ಯರು ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಪೂರ್ವಕವಾಗಿ ನಗರಕ್ಕೆ ಸ್ವಾಗತಿಸಿದರು.

ಕರ್ನಾಟಕದ ಚಿಕ್ಕ ತಿರುಪತಿಯೆಂದೇ ಇತಿಹಾಸ ಪ್ರಸಿದ್ಧಿ ಪಡೆದಿರುವ ನಗರ ಸಮೀಪದ ಮಾಲೇಕಲ್ಲು ತಿರುಪತಿ ಅತ್ಯಂತ ಪವಿತ್ರ ಯಾತ್ರಾಸ್ಥಳ ಮಾತ್ರವಲ್ಲದೆ ಪ್ರಕೃತಿ ಸೌಂದರ್ಯಗಳ ಪ್ರವಾಸಿ ತಾಣವೂ ಆಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಪ್ರತಿನಿತ್ಯ ಭಕ್ತ ಸಾಗರ ಇಲ್ಲಿಗೆ ಹರಿದು ಬರುತ್ತಿದ್ದು, ಇಲ್ಲಿನ ಜಾತ್ರಾ ಮಹೋತ್ಸವವು ಪ್ರತಿವರ್ಷದ ಆಷಾಡ ಶುದ್ಧ ಪಂಚಮಿಯ ಪ್ರಾಥಃಕಾಲದಿಂದ ಆರಂಭವಾಗಿದ್ದು,

ಇದೇ ಜು.13 ರಂದು ಶನಿವಾರ ದ್ವಾದಶಿಯ ದಿನದಂದು ಬೆಳಗ್ಗೆ ಶ್ರೀಕೃಷ್ಣ ಗಂಧೋತ್ಸವ, ಸೂರ್ಯಮಂಡಲೋತ್ಸವ, ರಥಮಂಟಪ ಸೇವೆ, ಮತ್ತು ವಸಂತ ಸೇವೆ, ನೆರವೆರಿದ ನಂತರ ಲಕ್ಷಾಂತರ ಭಕ್ತರ ಸಮೂಹದ ನಡುವೆ ಮಹಾರಥೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಪೌರಾಯುಕ್ತರಿಂದ ಸ್ವಾಗತ: ಮಹಾರಥೋತ್ಸವ ನಡೆದ ನಂತರ ಆಷಾಡ ಶುದ್ಧ ಚತುರ್ದಶಿಯ ಮಧ್ಯಾಹ್ನ ಲಕ್ಷ್ಮೀವೆಂಕಟರಮಣಸ್ವಾಮಿ ಉತ್ಸವಮೂರ್ತಿ ರಥದ ಪುರ ಪ್ರವೇಶಕ್ಕೆ ನಗರಸಭಾ ಪೌರಾಯುಕ್ತರಾದ ಪರಮೇಶ್ವರಪ್ಪ ರಥಕ್ಕೆ ಮಾಲಾರ್ಪಣೆ ಮಾಡಿ ದೇವರಿಗೆ ವಿಶೇಷ ಪೂಜಾ ನೆರವೇರಿಸುವ ಮೂಲಕ ಚಾಲನೆ ನೀಡಿ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಬಿ.ಎನ್‌.ವಿದ್ಯಾಧರ್‌, ರಾಜಶೇಖರ್‌, ಗಿರೀಶ್‌, ಮುಖಂಡರಾದ ರಮೇಶ್‌ನಾಯ್ಡು, ಶಿವನ್‌ರಾಜ್‌, ತುಳಸೀದಾಸ್‌, ಪದ್ದಣ್ಣ, ನಗರಸಭೆ ವ್ಯವಸ್ಥಾಪಕ ಎಂ.ಜೆ.ಮಹಾತ್ಮ, ಆರೋಗ್ಯ ನಿರೀಕ್ಷಕರಾದ ರಮೇಶ್‌, ರೇವಣಸಿದ್ದಪ್ಪ, ರಥೋತ್ಸವ ಸಮಿತಿ ಅಧ್ಯಕ್ಷ ಟಿ.ಆರ್‌.ನಾಗರಾಜ್‌, ಎನ್‌.ಸಿ. ಗೋವಿಂದರಾಜು, ಟಿ.ಆರ್‌.ಚಂದ್ರು, ಸತ್ಯನಾರಾಯಣ ರಂಗರಾಜು ಮತ್ತಿತರರು ಭಾಗವಹಿಸಿದ್ದರು.

ವಿಶೇಷ ಪೂಜೆ: ಉತ್ಸವಮೂರ್ತಿ ರಥವು ಸಂತೆಪೇಟೆ ಮೂಲಕ ವಾಸವಿ ಮಹಲ್‌ ರಸ್ತೆಯಲ್ಲಿ ಸಾಗಿ ಪ್ರಸನ್ನ ಗಣಪತಿ ಭಕ್ತ ಮಂಡಳಿ ಆಸ್ಥಾನ ಮಂಟಪ ಕರೆತಂದು ಸಂಪ್ರದಾಯದಂತೆ ದೇವಾಲಯದ ಅರ್ಚಕರಾದ ರಾಮಪ್ರಸಾದ್‌ ಹಾಗೂ ವರದರಾಜು ವಿಶೇಷ ಪೂಜೆ ನೆರವೇರಿಸಿದರು. ಸಾವಿರಾರು ಭಕ್ತರು ಪೂಜಾ ಕಾರ್ಯದಲ್ಲಿ ಭಾಗವಹಿಸಿ ದೇವರ ದರ್ಶನ ಭಾಗ್ಯವನ್ನು ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು.

ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಮತ್ತು ಒಳಚರಂಡಿಯ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿವೆ ಎನ್ನುವ ಕಾರಣಕ್ಕೆ ನಗರದ ಬಹುತೇಕ ಬೀದಿಗಳಲ್ಲಿ ರಥವು ಸಂಚರಿಸದೆ ಸಂಜೆಯವರೆಗೆ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿಯೇ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಂಡಲಾಗುತ್ತಿತ್ತು.

ಈಬಾರಿ ರಥದ ಚಕ್ರಗಳು ಸರಿಯಲ್ಲ ರಿಪೇರಿ ಕಾರ್ಯಗಳನ್ನು ಮಾಡಿಸಬೇಕಾಗಿದೆ. ಆದ್ದರಿಂದ ನಗರದ ಪ್ರಮುಖ ರಸ್ತೆಗಳಿಗೆ ದೇವರ ರಥವನ್ನು ಕರೆ ತರಲು ಸಾಧ್ಯವಾಗುತ್ತಿಲ್ಲ. ಸಂಜೆವರೆಗೂ ದೇವರ ದರ್ಶನಕ್ಕೆ ಅವಕಾಶವಿದ್ದು, ನಂತರ ರಥವನ್ನು ಮಂಗಳವಾದ್ಯಗಳೊಂದಿಗೆ ಪುನಃ ಹುಳಿಯಾರು ರಸ್ತೆಯ ಮಾರ್ಗವಾಗಿ ಮಾಲೇಕಲ್‌ ತಿರುಪತಿಗೆ ಕರೆದೊಯ್ಯಲಾಗುವುದು ಎಂದು ರಥೋತ್ಸವ ಸಮಿತಿ ಅಧ್ಯಕ್ಷ ಟಿ.ಆರ್‌.ನಾಗರಾಜ್‌ ಭಕ್ತಾದಿಗಳಲ್ಲಿ ಮನವಿ ಮಾಡಿದರು.

ಭಕ್ತರ ಅಸಮಾಧಾನ: ಅನೇಕ ವರ್ಷಗಳ ಸಂಪ್ರದಾಯದಂತೆ ಮಾಲೇಕಲ್‌ ತಿರುಪತಿ ಮಹಾರಥೋತ್ಸವ ನೆರವೇರಿದ ಎರಡನೇ ದಿನವಾದ ಚತುರ್ದಶಿ ದಿನದಂದು ಉತ್ಸವಮೂರ್ತಿ ರಥವು ಪುರಪ್ರವೇಶಿಸಿ ನಗರದ ಹೃದಯಭಾಗದಲ್ಲಿನ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ವಿರಾಜಮಾನವಾಗಿ ನಂತರ ಪೇಟೇಬೀದಿ, ಬಿ.ಎಚ್‌.ರಸ್ತೆ ಮಾರ್ಗವಾಗಿ ಕಂತೇನಹಳ್ಳಿಗೆ ಹೋಗಿ ಪುನಃ ಬಿ.ಎಚ್‌.ರಸ್ತೆಯ ಮಾರ್ಗವಾಗಿ ಮೊದಲಿಯಾರ್‌ ಬೀದಿ, ಆಜಾದ್‌ ರಸ್ತೆ, ರೈಲ್ವೆ ನಿಲ್ದಾಣದ ರಸ್ತೆ ಮಾರ್ಗವಾಗಿ ಯಜಮಾನ್‌ ರಂಗೇಗೌಡರ ಬೀದಿ ಶ್ಯಾನುಭೋಗರ ಬೀದಿ, ಮಾರ್ಗವಾಗಿ ಮಾರನೇ ದಿನ ಮುಂಜಾನೆ ವೇಳೆಗೆ ಮಾಲೇಕಲ್‌ ತಿರುಪತಿ ದೇವಾಲಯನ್ನು ಪ್ರವೇಶಿಸುವುದನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗುತ್ತಿತ್ತು.

ಇತ್ತೀಚೆಗೆ ತಾಲೂಕು ಆಡಳಿತ ಮತ್ತು ದೇವಾಲಯದ ರಥೋತ್ಸವ ಸಮಿತಿಯವರು ಮೂರು ನಾಲ್ಕು ವರ್ಷಗಳಿಂದ ನಗರದಲ್ಲಿ ವಿವಿಧ ಕಾಮಗಾರಿಗಳ ನೆಪ ಮಾಡಿಕೊಂಡು ನಗರದಲ್ಲಿ ರಾತ್ರಿಯಿಡೀ ನಡೆಯುತ್ತಿದ್ದ ದೇವರ ಉತ್ಸವವನ್ನು ತಡೆಹಿಡಿಯುವ ಪ್ರಯತ್ನವನ್ನು ಮಾಡುತ್ತಿದ್ದರು. ಈಗ ರಸ್ತೆಗಳು ಸರಿಯಾಗಿದೆ. ಆದರೆ ರಥದ ಚಕ್ರಗಳನ್ನು ರಿಪೇರಿ ಮಾಡಿಲ್ಲ ಎಂಬ ಕುಂಟು ನೆಪ ಹೇಳುವ ಮೂಲಕ ಭಕ್ತಾದಿಗಳನ್ನು ದಾರಿ ತಪ್ಪಿಸುತ್ತಿದೆ ಎಂದು ತಾಲೂಕು ವಿಶ್ವಹಿಂದು ಪರಿಷತ್‌ ಅಧ್ಯಕ್ಷ ಟಿ.ವಿ.ಅರುಣ್‌ ಕುಮಾರ್‌ ಆಕ್ಷೇಪಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ