ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಆಗ್ರಹ

Team Udayavani, Oct 29, 2019, 4:22 PM IST

ಆಲೂರು: ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು.ಗ್ರಾಮೀಣ ಭಾಗಗಳ ರಸ್ತೆ ಅಭಿವೃದ್ಧಿಗೆಂದು ಬಿಡುಗಡೆಯಾದ ಸರ್ಕಾರದ ಅನುದಾನವನ್ನು ಕಲ್ಲುಕ್ವಾರಿಗಳಿಗೆ ಹೋಗುವ ರಸ್ತೆಗೆ ಬಳಕೆ ಮಾಡಿಕೊಂಡು ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ತಾಲೂಕು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಗಣೇಶ್‌ ಆರೋಪಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಗಳ ಅಭಿವೃದ್ಧಿಗೆ ಬಳಸಬೇಕಾದ ಅನುದಾನವನ್ನು ಕೆಲ ರಾಜಕೀಯ ಮುಖಂಡರು ಖಾಸಗಿ ಕಲ್ಲುಕ್ವಾರಿಗಳಿಗೆ ಹೋಗುವ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಬಳಸಿಕೊಂಡು ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸುತ್ತ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಈ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ.

ಶಿಷ್ಟಾಚಾರ ಉಲ್ಲಂಘನೆ: ಮಗ್ಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೆಮ್ಮಿಗೆ ಹಾಗೂ ಹೊನ್ನವಳ್ಳಿ ಗ್ರಾಮ ಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿಗೆಂದು ಕಾವೇರಿ ನೀರಾವರಿ ನಿಗಮದಿಂದ ಸುಮಾರು 1 ಕೋಟಿ ರೂ. ಅನುದಾನ ಪಡೆದು ಕಾಂಕ್ರೀಟ್‌ ರಸ್ತೆ ನಿರ್ಮಿ ಸಲಾಗಿದೆ. ಆದರೆ ಈ ಕಾಮಗಾರಿಗೆ ಚಾಲನೆ ನೀಡಲು ಮತ್ತು ಪೂರ್ಣ ಗೊಂಡ ರಸ್ತೆ ಉದ್ಘಾಟನಾ ಸಮಾರಂಭಕ್ಕೆ ಲೋಕಸಭಾ ಸದಸ್ಯರನ್ನಾಗಲಿ, ವಿಧಾನ ಸಭಾ ಸದಸ್ಯರನ್ನಾಗಲಿ, ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಆಹ್ವಾನಿಸದೇ ಶಿಷ್ಟ ಚಾರ ಉಲ್ಲಂಘಿಸಿ ತಮಗೆ ಬೇಕಾದ ಕೆಲ ಪಕ್ಷದ ಮುಖಂಡರನ್ನು ಕರೆಸಿಕೊಂಡು ರಸ್ತೆ ಉದ್ಘಾಟನೆ ನಡೆಸಿರುವ ಹಾಸನ ಜಿಲ್ಲಾ ಹೇಮಾವತಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರು ಚುನಾಯಿತ ಜನಪ್ರತಿನಿಧಿಗಳನ್ನು ಅವಮಾನಿಸಿದ್ದಾರೆ. ಅವರ ಈ ನಡೆ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿತ್ತೇನೆ ಎಂದರು.

ಅನುದಾನ ಸ್ಥಗಿತ- ಅಭಿವೃದ್ಧಿ ಕುಂಠಿತ: ಮಗ್ಗೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಕಡಬಗಾಲ, ಹೊಳೆಕೊಪ್ಪಲು, ಕೆರೆಕೊ  ಪ್ಪಲು, ಚಟ್ನಹಳ್ಳಿ, ಮೇರೆ, ಗಂಜಿಗೆರೆ, ಗಿರಿಘಟ್ಟ, ಬಸವನಹಳ್ಳಿ, ತಿಪ್ಪನಹಳ್ಳಿ, ಕಾಗ  ನೂರು, ಕಾಗನೂರು ಹೊಸಳ್ಳಿ, ಹೆಮ್ಮಿಗೆ ಇನ್ನೂ ಮುಂತಾದ ಹಳ್ಳಿಗಳಲ್ಲಿ ರಸ್ತೆ, ಚರ್ಚ್‌, ಮಸೀದಿ, ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ 3 ವರ್ಷ ಗಳಿಂದ ಹಣವನ್ನು ಬಿಡುಗಡೆ ಮಾಡದೇ ಕೆಲ ಗುತ್ತಿಗೆದಾರರು ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಬಗ್ಗೆ ಕಾವೇರಿ ನೀರಾವರಿ ನಿಗಮ ಮಂಡಳಿಯ ಮುಖ್ಯ ಎಂಜಿನಿಯರ್‌ ಗಮನಹರಿಸಬೇಕಾಗಿದೆ ಎಂದರು.

ಕಾಡಾನೆ ಹಾವಳಿ ನಿಯಂತ್ರಿಸಿ: ಒಂದೆಡೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರೈತರು ಬೆಳೆನಷ್ಟ ಅನುಭವಿಸಿದ್ದಾರೆ.ಮತ್ತೂಂದೆಡೆ ಕಾಡಾನೆಗಳು ಹಾಗೂ ಮಂಗಗಳ ಹಾವಳಿಂದ ರೈತರು ತೀವ್ರ ನಷ್ಟನುಭವಿಸುತ್ತಿದ್ದಾರೆ. ಕೂಡಲೇ ತಾಲೂಕು ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಣತೂರು ಗ್ರಾಪಂ ಅಧ್ಯಕ್ಷ ರವಿ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ರಾಜಶೇಖರ್‌, ನಾರಾಯಣ್‌ ಕಾಂಗ್ರೆಸ್‌ ಮುಖಂಡ ಸರ್ವರ್‌ ಪಾಷ ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ