ಈಗಲೋ, ಆಗಲೋ ಎನ್ನುವಂತಿದೆ ಕಡಬದ ಶ್ಮಶಾನ

••ತಾಲೂಕು ಕೇಂದ್ರದಲ್ಲಿಲ್ಲ ಶವ ಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ | ಶೀಘ್ರ ಕ್ರಮಕ್ಕೆ ಸ್ಥಳೀಯರ ಆಗ್ರಹ

Team Udayavani, May 26, 2019, 10:18 AM IST

ಕಡಬ: ಕಡಬವು ತಾಲೂಕು ಕೇಂದ್ರವಾಗಿ ಗುರುತಿಸಲ್ಪಟ್ಟಿದ್ದರೂ ಇಲ್ಲಿನ ಸಾರ್ವಜನಿಕ ರುದ್ರಭೂಮಿ ಮೂಲ ಸೌಕರ್ಯವಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ. ಶವಸಂಸ್ಕಾರಕ್ಕಾಗಿ ಆಧುನಿಕ ವ್ಯವಸ್ಥೆಯ ಸುಸಜ್ಜಿತ ರುದ್ರಭೂಮಿ ಬೇಕು ಎನ್ನುವ ಗ್ರಾಮಸ್ಥರ ಬೇಡಿಕೆಗೆ ಇದುವರೆಗೆ ಯಾವುದೇ ರೀತಿಯ ಮಾನ್ಯತೆ ಸಿಕ್ಕಿಲ್ಲ.

ಕಾದಿರಿಸಿದ ಭೂಮಿ ಇದೆ
ರುದ್ರಭೂಮಿಗಾಗಿ ಗ್ರಾ.ಪಂ. ವ್ಯಾಪ್ತಿಯ ಕಲ್ಲಂತಡ್ಕದಲ್ಲಿ ಕಡಬ-ಪಂಜ ರಸ್ತೆಯ ಪಕ್ಕದಲ್ಲಿ ಸ.ನಂ. 306/1ಎ1ಯಲ್ಲಿ 1.03 ಎಕ್ರೆ ಭೂಮಿ ಕಾದಿರಿಸಲಾಗಿದೆ. ಈ ಭೂಮಿಯಲ್ಲಿ ಸಾಧಾರಣ ಚಿತಾಗಾರ ಇದೆಯಾದರೂ ಇಲ್ಲಿ ಸಮರ್ಪಕ ವ್ಯವಸ್ಥೆಗಳಿಲ್ಲ. ಇರುವ ಕಟ್ಟಡ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ. ಚಿತಾಗಾರದ ಛಾವಣಿಯ ತಗಡುಶೀಟುಗಳು ಗಾಳಿಗೆ ಹಾರಿಹೋಗಿವೆ. ಈಗಲೋ, ಆಗಲೋ ಎನ್ನುವಂತಿದೆ ಇಲ್ಲಿನ ಸ್ಥಿತಿ. ಸರಿಯಾದ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ. ಕಾದಿರಿಸಿರುವ ಜಮೀನಿನ ಸುತ್ತ ಆವರಣಗೋಡೆ ನಿರ್ಮಿಸಿ ಭದ್ರಪಡಿಸಿಕೊಂಡು ಅತಿಕ್ರಮಣ ತಡೆಯುವಲ್ಲಿ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇನ್ನೇನು ಮಳೆಗಾಲ ಆರಂಭವಾಗಲಿದೆ. ಮಳೆಗಾಲದಲ್ಲಿ ಇಲ್ಲಿ ಶವ ಸಂಸ್ಕಾರ ನಡೆಸುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ ಎನ್ನುವುದು ಸ್ಥಳೀಯರ ದೂರು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ಸರಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ರುದ್ರಭೂಮಿ ಹಾಗೂ ಆಧುನಿಕ ವಿದ್ಯುತ್‌ ಚಿತಾಗಾರ ಒದಗಿಸುವ ಬಗ್ಗೆ 2011-12ನೇ ಸಾಲಿನಲ್ಲಿ ರಾಜ್ಯದಾದ್ಯಂತ ಒಟ್ಟು 60 ಕೋಟಿ ರೂ. ಅನುದಾನವನ್ನು ಮೀಸಲಿರಿಸಿತ್ತು. ಇದರನ್ವಯ ಅಂದಾಜು ಪಟ್ಟಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಡಬ ವಿಶೇಷ ತಹಶೀಲ್ದಾರರ ಕಚೇರಿಗೆ ಬಂದ ಮಾಹಿತಿಯನ್ನು ಅನುಸರಿಸಿ ಕಡಬ ಗ್ರಾ.ಪಂ. ಆಡಳಿತವು ಜಿ.ಪಂ. ಎಂಜಿನಿಯರ್‌ ಮೂಲಕ 26.08 ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಿತ್ತು. ಅಂದಾಜು ಪಟ್ಟಿಯಲ್ಲಿ ರುದ್ರಭೂಮಿಯ ಆವರಣದೊಳಗೆ ವಾಚ್‌ಮನ್‌ ಶೆಡ್‌, ಪ್ರಾರ್ಥನ ಮಂದಿರ, ವಿದ್ಯುತ್‌ ಚಿತಾಗಾರ, ಶೌಚಾಲಯ ಇತ್ಯಾದಿಗೆ 20.58 ಲಕ್ಷ ರೂ., ರಸ್ತೆ ಕಾಂಕ್ರೀಟ್‌ಗೆ 3.5 ಲಕ್ಷ ರೂ. ಹಾಗೂ ಕೊಳವೆ ಬಾವಿಗೆ 2 ಲಕ್ಷ ರೂ. ವಿಂಗಡಿಸಲಾಗಿತ್ತು. ಆದರೆ ಹಲವು ವರ್ಷಗಳೇ ಸಂದರೂ ವಿದ್ಯುತ್‌ ಚಿತಾಗಾರದ ಕನಸು ನನಸಾಗಿಲ್ಲ.

ಯೋಜನೆಗೆ ಬಂದದ್ದು ಬರೇ 4 ಲಕ್ಷ ರೂಪಾಯಿ
ವಿದ್ಯುತ್‌ ಚಿತಾಗಾರ ಸಹಿತ ಸುಸಜ್ಜಿತ ರುದ್ರಭೂಮಿ ನಿರ್ಮಾಣಕ್ಕಾಗಿ 26.08 ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಿ ಹಲವು ವರ್ಷಗಳು ಕಳೆದರೂ ಬಿಡುಗಡೆಯಾಗಿರುವುದು ಕೇವಲ 4 ಲಕ್ಷ ರೂ. ಮಾತ್ರ. ಅದೂ ಕೂಡ ಬಳಕೆಯಾಗದೆ ಕಳೆದ 7 ವರ್ಷಗಳಿಂದ ತಹಶೀಲ್ದಾರರ ಖಾತೆಯಲ್ಲಿಯೇ ಉಳಿದಿದೆ.
ಮನವಿ ಸಲ್ಲಿಸಿದ್ದೇವೆ

ಸರಕಾರವು ಕೇವಲ 4 ಲಕ್ಷ ರೂ.ಗಳನ್ನು ಮಾತ್ರ ಮಂಜೂರು ಮಾಡಿದೆ. ಈ ಅನುದಾನದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸುವುದು ಅಸಾಧ್ಯ. ಹೆಚ್ಚಿನ ಅನುದಾನ ನೀಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
– ಚೆನ್ನಪ್ಪ ಗೌಡ ಕಜೆಮೂಲೆ ಪಿಡಿಒ,
ಕಡಬ ಗ್ರಾ.ಪಂ.
ಸೌಲಭ್ಯಕ್ಕೆ ಸಿದ್ಧತೆ

ಮಂಜೂರುಗೊಂಡಿರುವ ಅನುದಾನ ಬಳಕೆಯಾಗದೆ ಉಳಿದಿದೆ. ಈ ಅನುದಾನವನ್ನು ಬಳಸಿ ರುದ್ರಭೂಮಿಗೆ ಹೊಸದಾದ ಚಿತಾಗಾರ ಅಳವಡಿಸಿ ಮೂಲ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸ ಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಲಭ್ಯವಿರುವ ಅನುದಾನ ಬಳಸುವ ನಿಟ್ಟಿನಲ್ಲಿ ಅಂದಾಜುಪಟ್ಟಿ ತಯಾರಿಸಲಾಗಿದೆ. ಪಂಚಾಯತ್‌ ಅನುದಾನದಲ್ಲಿ ರಸ್ತೆ ನಿರ್ಮಿಸಿ, ರುದ್ರಭೂಮಿಯ ಜಾಗಕ್ಕೆ ತಂತಿ ಬೇಲಿ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ.
ಪಿ.ಪಿ. ವರ್ಗೀಸ್‌ ಜಿ.ಪಂ. ಸದಸ್ಯರು, ಕಡಬ
ನಾಗರಾಜ್‌ ಎನ್‌.ಕೆ.

ಈ ವಿಭಾಗದಿಂದ ಇನ್ನಷ್ಟು

  • 2019ಕ್ಕೆ ವಿದಾಯ ಹೇಳುವ ಸಮಯ ಹತ್ತಿರವಾಗುತ್ತಿದ್ದಂತೆ ಹೊಸ ವರ್ಷದ ನಿರೀಕ್ಷೆ ಗರಿ ಗೆದರಿದೆ. ಸಹಜವಾಗಿ ವಾಹನ ತಯಾರಿಕಾ ಕ್ಷೇತ್ರದತ್ತಲೂ ಅನೇಕ ನಿರೀಕ್ಷೆಗಳಿರುತ್ತವೆ....

  • ಕಾರು ಅಪಘಾತಕ್ಕೊಳಗಾದಾಗ ಮುಂಭಾಗ, ಹಿಂಭಾಗ, ಡೋರ್‌ಗಳಿಗೆ ಹಾನಿಯಾಗಬಹುದು. ಕಾರಿನ ಬಾಡಿಗಳಲ್ಲಿ ಗುಳಿ(ಡೆಂಟ್‌) ಬಿದ್ದಿದೆ ಎಂದರೆ ಅದು ಆತಂಕಕಾರಿ ವಿಚಾರವೇ ಅಲ್ಲ....

  • ಹಿಂದೊಂದು ಕಾಲವಿತ್ತು. ಮಹಿಳೆಯರು ತಲೆತುಂಬಾ ಎಣ್ಣೆಹಾಕಿ ಜಡೆಹೆಣೆದು ಬಾಚಿಕೊಳ್ಳುವುದೇ ಒಂದು ಫ್ಯಾಶನ್‌ ಆಗಿತ್ತು. ಆದರೆ ಇಂದು ಈ ರೀತಿ ತಲೆಕಟ್ಟಿಕೊಳ್ಳಲು...

  • ವಸಂತ ಬದುಕಿನ ಹಾದಿಯುದ್ದಕ್ಕೂ ವಿಧವಿಧದ ಬಣ್ಣಗಳ ಚಿತ್ತಾರ, ಭಾವ ಜಗತ್ತನ ನಂಬಿಕೆಯ ಹಾದಿಯಲ್ಲಿ ಮೌನದ ಆಗಮನ. ಹೊಸ ಪರ್ವದ ನವ ಭಾವನೆಗಳ ಜತೆಯಲ್ಲಿ ಒಂಟಿತನದಲ್ಲೂ...

  • ಆಧುನಿಕತೆ ಬೆಳೆದಂತೆ, ತಂತ್ರಜ್ಞಾನ ಮುಂದುವರಿದಂತೆ ಮಾನಸಿಕ ನೆಮ್ಮದಿ ಎನ್ನುವುದು ಮರೀಚಿಕೆಯಾಗುತ್ತಿದೆ. ಎಲ್ಲವೂ ಬೆರಳ ತುದಿಯಲ್ಲೇ ದೊರೆಯುತ್ತದೆ ಎನ್ನುವುದೇನೋ...

ಹೊಸ ಸೇರ್ಪಡೆ