ಕಲಬುರಗಿಯ ಎರಡನೇ ತರಗತಿಯ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ

Team Udayavani, Dec 3, 2019, 9:13 AM IST

ಕಲಬುರಗಿ: ಹೈದರಾಬಾದ್ ನ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವನ್ನು ಬೆಚ್ಚಿ ಬೀಳಿಸಿರುವ ಬೆನ್ನೆಲ್ಲೇ ಕಲಬುರಗಿ ಜಿಲ್ಲೆಯ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಕೃತ್ಯ ನಡೆದಿದೆ.

ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದ ಹೊರವಲಯದಲ್ಲಿ ಸೋಮವಾರ ಸಂಜೆ ಯಲ್ಲಪ್ಪ (25) ಎಂಬ ಕಾಮುಕ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಸಂತ್ರಸ್ತ ಬಾಲಕಿ ಎರಡನೇ ತರಗತಿ ಓದುತ್ತಿದ್ದಳು ಹಾಗೂ ಮಂದ ಬುದ್ಧಿಯವಳಾಗಿದ್ದಳು. ಚಾಕೊಲೇಟ್‌ ನೀಡುವ ಆಸೆ ತೋರಿಸಿ ಆಕೆಯನ್ನು ಕಾಲುವೆ ಕಡೆಗೆ ಕರೆದುಕೊಂಡು ಹೋದ ಕಾಮುಕ ಈ ಕೃತ್ಯ ಎಸಗಿದ್ದಾನೆ‌ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಾಲಕಿಯನ್ನು ಸೋಮವಾರ ವ್ಯಕ್ತಿಯೊಬ್ಬ ತನ್ನ ಜತೆಗೆ ಕರೆದುಕೊಂಡು ಓಡಾಡುತ್ತಿದ್ದನ್ನು‌ ಗ್ರಾಮಸ್ಥರು ನೋಡಿದ್ದರು ಎನ್ನಲಾಗಿದೆ. ‌

ಸಂಜೆ ವೇಳೆಗೆ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.‌ ಹೀಗಾಗಿ ಅನುಮಾನಗೊಂಡು ಆರೋಪಿಯನ್ನು ವಿಚಾರಿಸಿದರೂ ಆತ ಬಾಲಕಿ ಸಾವಿಗೂ ತನಗೂ ಸಂಬಂಧ ಇಲ್ಲ ಎಂದು ಹೇಳಿದ್ದ.‌ ನಂತರ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಗೊತ್ತಾಗಿದೆ.‌

ಯಾಕಾಪುರದ ಅಂಗನವಾಡಿ ಕೇಂದ್ರದ ಬಳಿ ಮುಲ್ಲಾಮರಿ ಯೋಜನೆ ಕಾಲುವೆ ಮೇಲೆ ಬಾಲಕಿ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಸುಲೇಪೇಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ‌ನಡೆಸಿದರು.‌

ಘಟನೆಯ ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ತಡರಾತ್ರಿಯೇ ಗ್ರಾಮಕ್ಕೆ ತೆರಳಿ ಪರಿಶೀಲನೆ ಮಾಡಿದರು.

ಸದ್ಯ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.‌

ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ