ಬಿಹಾರದ 1,482 ಜನ ವಲಸಿಗರನ್ನು ತವರಿಗೆ ಕಳುಹಿಸಲು ರೈಲು ವ್ಯವಸ್ಥೆ
Team Udayavani, May 16, 2020, 10:16 AM IST
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳು ಮತ್ತು ಪಕ್ಕದ ವಿಜಯಪುರ ಜಿಲ್ಲೆಯಲ್ಲಿ ಸಿಲುಕಿರುವ ಬಿಹಾರದ 1,482 ಜನ ವಲಸಿಗರನ್ನು ತವರು ರಾಜ್ಯಕ್ಕೆ ಕಳುಹಿಸಲು ಶ್ರಮಿಕ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗುತ್ತಿದೆ.
ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನೆಲೆಸಿರುವ ಬಿಹಾರದಿಂದ ಬಂದಂತಹ ವಲಸಿಗರು ತವರಿಗೆ ಮರಳಲು ಮುಂದಾಗಿದ್ದಾರೆ. ಹೀಗಾಗಿ ಅವರ ಸ್ಥಳಾಂತರಕ್ಕೆ ಕಲಬುರಗಿ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲಿನ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿ ಶರತ್ ಬಿ. ಸೊಲ್ಲಾಪುರ ರೈಲ್ವೆ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಮೇ 17ರಂದು ರಾತ್ರಿ 8 ಗಂಟೆಗೆ ರೈಲಿನ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿ ರೈಲ್ವೆ ಅಧಿಕಾರಿಗಳಲ್ಲಿ ಕೋರಿದ್ದಾರೆ. ಇನ್ನು, ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಹೊತ್ತ ರೈಲು ಮೇ 14ರಂದು ಹೊರಟಿದ್ದು ಇಂದು ಸಂಜೆ 4.30ಕ್ಕೆ ಕಲಬುರಗಿಗೆ ಆಗಮಿಸುವ ನಿರೀಕ್ಷೆ ಇದೆ.
ಈಗಾಗಲೇ ಮುಂಬೈನಿಂದ ಎರಡು ವಿಶೇಷ ರೈಲುಗಳಲ್ಲಿ ಕಲಬುರಗಿ, ಯಾದಗಿರಿ, ವಿಜಯಪುರ ಹಾಗೂ ಮಹಾರಾಷ್ಟ್ರದ ಅಕ್ಕಲಕೋಟೆಯ 2,393 ಜನರು ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ್ದಾರೆ. ಆಯಾ ಜಿಲ್ಲೆಗಳಿಗೆ ವಲಸಿಗರನ್ನು ಕಳುಹಿಸಿ ಕೊಡಲಾಗಿದ್ದು, ಕಲಬುರಗಿ ಜಿಲ್ಲೆಯ ವಲಸಿಗರನ್ನು ಹಲವೆಡೆ ಕ್ವಾರಂಟೈನ್ ಮಾಡಲಾಗಿದೆ.