ಪಟೇಲ್‌ ಕುಟುಂಬದ ಕಾರ್ಯ ಶ್ಲಾಘನೀಯ

Team Udayavani, Mar 11, 2019, 6:25 AM IST

ಅಫಜಲಪುರ: ತಾಲೂಕಿನ ಬಡ ಮುಸಲ್ಮಾನ್‌ ಕುಟುಂಬದ ಮಕ್ಕಳನ್ನು ತಮ್ಮ ಮಕ್ಕಳಂತೆ ಭಾವಿಸಿ ಅವರ ಮದುವೆಯನ್ನು ಅದ್ಧೂರಿಯಾಗಿ ಮಾಡಿದ ಪಟೇಲ್‌ ಕುಟುಂಬಸ್ಥದವರ ಸಮಾಜ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು. 

ಪಟ್ಟಣದ ನ್ಯಾಷನಲ್‌ ಫಂಕ್ಷನ್‌ ಹಾಲ್‌ನಲ್ಲಿ ಹಾಜಿ ಸಾಹೇಬ್‌ ಪಟೇಲ್‌ ಚಾರಿಟೇಲ್‌ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ 4ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತೀರಾ ಬಡವರು, ನಿರ್ಗತಿಕರ ಮಕ್ಕಳ ಮದುವೆ ಮಾಡಿಸುವುದಲ್ಲದೆ ಅವರ ಸಂಸಾರಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಒದಗಿಸಿ ಕುಟುಂಬದ ಭಾರ ಇಳಿಸುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಇದು ನಿಜಕ್ಕೂ ದೇವರ ಪ್ರೀತಿಗೆ ಪಾತ್ರವಾಗುವ ಕೆಲಸವಾಗಿದೆ. ಮುಂಬರುವ ದಿನಗಳಲ್ಲಿ ದೇವರು ಪಟೇಲ್‌ ಪರಿವಾರದವರಿಗೆ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು. 

ಮುಖಂಡರಾದ ಹಾಜಿಂಪೀರ್‌ ವಾಲಿಕಾರ, ಮಕ್ಬೂಲ್‌ ಪಟೇಲ್‌, ಶಿವಕುಮಾರ ನಾಟಿಕಾರ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಶರಣಪ್ಪ ಮಾನೇಗಾರ ಮಾತನಾಡಿ, ಮನುಷ್ಯ ಎಷ್ಟೇ ಸಂಪಾದನೆ ಮಾಡಿದರೂ ಸಮಾಜಿಕ ಸೇವೆ, ಪರೋಪಕಾರ ಇಲ್ಲದಿದ್ದರೆ ಅದು ವ್ಯರ್ಥವಾಗುತ್ತದೆ. 

ಆದರೆ ಪಪ್ಪು ಪಟೇಲ್‌ ಮತ್ತು ಪರಿವಾರದವರು ಸದಾ ಸಮಾಜಮುಖೀ ಕೆಲಸ ಮಾಡುತ್ತ ಎಲ್ಲರಿಗೂ ಮಾದರಿಯಾಗಿದ್ದಾರೆ. ಪಟೇಲ್‌ ಪರಿವಾರದವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.  ಸಾನ್ನಿಧ್ಯ ವಹಿಸಿದ್ದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು
ಮಾತನಾಡಿ, ಪಪ್ಪು ಪಟೇಲ್‌ ಮತ್ತು ಕುಟುಂಬಸ್ಥರು ಹಾಗೂ ತಾಲೂಕಿನ ಸಮಸ್ತ ಮುಸಲ್ಮಾನ್‌ ಬಾಂಧವರು ಎಲ್ಲ ಧರ್ಮಿಯರೊಂದಿಗೆ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಯಾವುದೇ ಕೋಮು ದ್ವೇಷಗಳಿಲ್ಲದ ನಮ್ಮ ತಾಲೂಕಿನಲ್ಲಿ ಸಹೋದರತೆ, ಪ್ರೀತಿಗೆ ಕೊರತೆ ಇಲ್ಲ.

ಇಂತಹ ಸೌಹಾರ್ದದ ಊರಲ್ಲಿ ಪಟೇಲ್‌ ಕುಟುಂಬಸ್ಥರು ಬಡವರ ಮಕ್ಕಳ ಮದುವೆ ಮಾಡಿಸಿ ತಮ್ಮ ಮಕ್ಕಳ ಮದುವೆ ಮಾಡಿದಷ್ಟು ಸಂಭ್ರಮಿಸುತ್ತಿರುವುದು ನೋಡಿದರೆ ನಿಜವಾಗಲೂ ಅವರ ಸಮಾಜಮುಖೀ ಪ್ರೀತಿ ಎಂಥದ್ದು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು. 

ಪ್ರಾಸ್ತಾವಿಕವಾಗಿ ಮಾತನಾಡಿ ಸಾಮೂಹಿಕ ವಿವಾಹದ ರೂವಾರಿ ಅಫತಾಬ್‌ ಪಟೇಲ್‌(ಪಪ್ಪು) ಪಟೇಲ್‌, ನಮ್ಮ ತಂದೆ, ತಾಯಿಯರ ಹಾಗೂ ಅಲ್ಲಾನ ಆಶೀರ್ವಾದದಿಂದ ನಮ್ಮ ಕೈಲಾದಷ್ಟು ಮಟ್ಟಿಗೆ ಬಡವರಿಗೆ ಸಹಾಯ ಮಾಡುತ್ತಿದ್ದೇವೆ. ತಾಲೂಕಿನ ಬಡ ಮುಸ್ಲಿಂ ಪಾಲಕರ ಮಕ್ಕಳ ಮದುವೆ ಮಾಡುವ ಮೂಲಕ ಅವರ ಕುಟುಂಬದ ಬಹು ದೊಡ್ಡ ಭಾರ ಇಳಿಸುವ ಕೆಲಸ ಮಾಡುತ್ತಿದ್ದೇವೆ.

ಯಾವುದೇ ಸ್ವಾರ್ಥ ಬಯಸದೇ ಮಾಡುವ ಪರೋಪಕಾರವನ್ನು ದೇವರು ಮೆಚ್ಚಿದರೆ ಸಾಕು. ಇಂತಹ ವೈಭವದ ಕಾರ್ಯ ಮಾಡಲು ಜನರ ಪ್ರೀತಿಯೇ ಕಾರಣ ಎಂದು ಹೇಳಿದರು. 

ರಜಾಕ್‌ ಪಟೇಲ್‌, ಜಿಪಂ ಮಾಜಿ ಅಧ್ಯಕ್ಷ ನೀತಿನ್‌ ಗುತ್ತೇದಾರ, ಜಿಪಂ ಮಾಜಿ ಸದಸ್ಯ ಮತಿನ್‌ ಪಟೇಲ್‌, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಮೇಲ್ವಿಚಾರಕಿ ನಿಂಗಮ್ಮ ಬಡದಾಳ, ಮಲ್ಲಪ್ಪ ಗುಣಾರಿ, ಮಹಾಂತೇಶ ಪಾಟೀಲ, ಚಿಂಟು ಪಟೇಲ್‌, ಮದನಬಾಯಿ ಶೇಟ್‌ ಮುಂಬೈ, ಶರಣು ಶೆಟ್ಟಿ, ಸಂತೋಷ ದಾಮಾ, ದಯಾನಂದ ದೊಡಮನಿ, ಎಸ್‌.ವೈ.ಪಾಟೀಲ, ಸಿದ್ದಯ್ಯಸ್ವಾಮಿ, ಅರುಣಕುಮಾರ ಪಾಟೀಲ ಗೊಬ್ಬೂರ, ನಾಗೇಶ ಕೊಳ್ಳಿ, ಮಹಾದೇವಪ್ಪ ಕರೂಟಿ, ಜಗನ್ನಾಥ ಶೇಗಜಿ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ