
ಕೋಲಾರಕ್ಕೆ ಏ.5 ರಂದು ರಾಹುಲ್, ಕಾಂಗ್ರೆಸ್ ಶಕ್ತಿ ಪ್ರದರ್ಶನ
Team Udayavani, Mar 29, 2023, 6:45 AM IST

ಬೆಂಗಳೂರು: ರಾಹುಲ್‌ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹತೆ ಬಳಿಕ ಮೊದಲ ಬಾರಿಗೆ ಎ. 5ರಂದು ಕೋಲಾರದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ.
ಕೋಲಾರ ಹೊರವಲಯದ ಟಮಕ ಬಳಿ ಸಮಾವೇಶಕ್ಕೆ ಸ್ಥಳ ನಿಗದಿಯಾಗಿದ್ದು, 2 ಲಕ್ಷ ಜನರನ್ನು ಸೇರಿಸಲು ನಿರ್ಧರಿಸಲಾಗಿದೆ. ಇದೊಂದು ರೀತಿಯಲ್ಲಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡುವ ಸಮಾವೇಶವೂ ಆಗಲಿದೆ ಎಂದು ಹೇಳಲಾಗಿದೆ.
ಕೋಲಾರದಲ್ಲಿ ಕಳೆದ ಲೋಕಸಭೆ ಚುನಾವಣೆ ವೇಳೆ ಮಾಡಿದ ಭಾಷಣ ಹಿನ್ನೆಲೆಯಲ್ಲಿ ರಾಹುಲ್ ಲೋಕಸಭೆ ಸದಸ್ಯತ್ವ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಅದೇ ನೆಲದಲ್ಲಿ ಬೃಹತ್ ಸಮಾವೇಶ ಮಾಡಿ ಸಂದೇಶ ರವಾನಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ರಾಹುಲ್‌ಗಾಂಧಿ ಸಮಾವೇಶಕ್ಕೆ ಪೂರ್ವಭಾವಿಯಾಗಿ ಮಾ. 29ರಿಂದ ಎ. 3ರ ವರೆಗೆ ಪ್ರತೀ ತಾಲೂಕಿನಲ್ಲಿ ಮುಖಂಡರ ಸಭೆ ನಡೆಸಲಾಗುತ್ತಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಕೇಂದ್ರೀಕೃತವಾಗಿಟ್ಟುಕೊಂಡು ಸಮಾವೇಶ ಮಾಡಲಾಗುತ್ತಿದೆಯಾದರೂ ರಾಮನಗರ, ತುಮಕೂರು, ಬೆಂಗಳೂರು ನಗರದಿಂದಲೂ ಸಮಾವೇಶಕ್ಕೆ ಜನರನ್ನು ಕರೆತರಲು ನಿರ್ದೇಶನ ನೀಡಲಾಗಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
