ಮಾರುಕಟ್ಟೆಯಲ್ಲಿ ಗೌರಿ-ಗಣೇಶ ಹಬ್ಬದ ಸಡಗರ

Team Udayavani, Sep 2, 2019, 3:42 PM IST

ನಗರದ ಹಳೆ ಬಸ್‌ ನಿಲ್ದಾಣದಲ್ಲಿ ವ್ಯಾಪಾರಕ್ಕೆ ಇಟ್ಟಿದ್ದ ಚೆಂಡು ಹೂ ಮತ್ತು ಸೇವಂತಿ ಹೂವಿನ ರಾಶಿ.

ಕೋಲಾರ: ಈ ಬಾರಿ ಗೌರಿ-ಗಣೇಶ ಹಬ್ಬಗಳೆರಡೂ ಒಂದೇ ದಿನ ಬಂದಿದ್ದು, ದಿನಸಿ ದುಬಾರಿಯಾದರೂ ಹೂ, ಹಣ್ಣಿನ ದರ ಸ್ವಲ್ಪ ಕಡಿಮೆಯಾಗಿದ್ದರಿಂದ ಜನಸಾಮಾನ್ಯರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮಾರುಕಟ್ಟೆಯಲ್ಲಿ ಭಾನುವಾರ ಹಬ್ಬದ ಖರೀದಿ ಜೋರಾಗಿಯೇ ನಡೆಯಿತು.

ಗೌರಿಹಬ್ಬ ಕೆಲವೊಂದು ಸಮುದಾಯಗಳಿಗೆ ಸೀಮಿತವಾಗಿದ್ದು, ಗಣೇಶನ ಹಬ್ಬ ಪ್ರತಿಯೊಬ್ಬರೂ ಆಚರಣೆ ಮಾಡುತ್ತಾರೆ. ಜೊತೆಗೆ ಗಲ್ಲಿಗೊಂದರಂತೆ ಸಾಮೂಹಿಕ ಗಣಪನ ಮೂರ್ತಿಗಳ ಪ್ರತಿಷ್ಠಾಪನೆ ನಡೆಯುತ್ತಿದೆ. ಎಲ್ಲಿ ನೋಡಿದರೂ ಗಣಪನ ಪ್ರತಿಷ್ಠಾಪನೆ ಸಿದ್ಧತೆ ಕಂಡುಬಂತು. ಗೌರಿ ಹಬ್ಬವನ್ನು ಬೆಳಗ್ಗೆ 9.10 ಗಂಟೆಯೊಳಗೆ ಮುಗಿಸಿ, ನಂತರ ಇಡೀ ದಿನ ಗಣಪನ ಹಬ್ಬ ಆಚರಣೆಗೆ ಮಹಿಳೆಯರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಂಚಾರ ಬಂದ್‌: ಹಬ್ಬದ ಖರೀದಿಗೆಂದೇ ಖ್ಯಾತಿ ಪಡೆದ ದೊಡ್ಡಪೇಟೆಯಲ್ಲಿ ಹಣ್ಣು, ಹೂವು, ದಿನಸಿ ಅಂಗಡಿಗಳು ತಲೆಎತ್ತಿದ್ದರಿಂದ ಸಂಚಾರ ಬಂದ್‌ ಮಾಡಲಾಗಿತ್ತು. ಸಾಲುಸಾಲು ಹಣ್ಣಿನ ಅಂಗಡಿಗಳು, ಫ‌ುಟ್ಪಾತ್‌ಗಳಲ್ಲಿ ಹೂವು, ಬಾಳೆಕಂದು, ಗಣೇಶನ ಮೂರ್ತಿ ಅಲಂಕರಿಸಲು ಬೇಕಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ವ್ಯಾಪಾರಿಗಳು, ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ದೊಡ್ಡಪೇಟೆ, ಎಂ.ಜಿ.ರಸ್ತೆಯಿಂದ ಪ್ರವೇಶ ಮಾರ್ಗ, ಕಾಳಮ್ಮ ಗುಡಿ ಸಮೀಪ ರಸ್ತೆಗಳನ್ನು ಸಂಚಾರಿ ಪೊಲೀಸರು ಬಂದ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲೇ ಹಣ್ಣಿನ ಅಂಗಡಿಗಳು ತಾತ್ಕಾಲಿಕವಾಗಿ ಟೆಂಟ್ ಹಾಕಿದ್ದವು.

ವ್ಯಾಪಾರದ ಭರಾಟೆ: ಇದರೊಂದಿಗೆ ನಗರದ ಹಳೇ ಬಸ್‌ ನಿಲ್ದಾಣದ ಹೂವಿನ ಮಾರುಕಟ್ಟೆ, ರಂಗಮಂದಿರ ಮುಂಭಾಗದ ರಸ್ತೆಯಲ್ಲೂ ಹಬ್ಬದ ವ್ಯಾಪಾರ ಜೋರಾಗಿತ್ತು. ಇಲ್ಲಿ ತರಹೇವಾರಿ ಹೂ ರಾಶಿ ಹಾಕಿ ಮಾರುತ್ತಿದ್ದರೆ, ರಂಗಮಂದಿರದ ಮುಂಭಾಗದ ರಸ್ತೆಯಲ್ಲಿ ಎಲ್ಲಿ ನೋಡಿದರೂ ಹಣ್ಣು, ಬಾಳೆಗಿಡ, ಪ್ಲಾಸ್ಟಿಕ್‌ ಹೂಗಳದ್ದೇ ಕಾರುಬಾರು. ಹಬ್ಬದ ಖರೀದಿಗೆ ಬಂದಿದ್ದ ಗ್ರಾಹಕರ ವಾಹನಗಳ ಸಂಚಾರ ದಟ್ಟಣೆ, ವ್ಯಾಪಾರಿಗಳು, ಗ್ರಾಹಕರು ಹೆಚ್ಚು ಸೇರಿದ್ದರಿಂದ ಹಳೇ ಬಸ್‌ ನಿಲ್ದಾಣ ರಸ್ತೆಯಲ್ಲಿ ಬಸ್‌ಗಳ ಸಂಚಾರ ನಿಷೇಧಿಸಲಾಗಿತ್ತು.

ಪರಿಸರ ಸ್ನೇಹಿ ಗಣೇಶನ ಮೂರ್ತಿ: ಈ ಬಾರಿ ನಗರದ ಬಾಲಕರ ಕಾಲೇಜು ಮತ್ತು ಸರ್ವಜ್ಞ ಪಾರ್ಕ್‌ ನಡುವಿನ ರಸ್ತೆಯಲ್ಲಿ ಗಣೇಶ ಮೂರ್ತಿಗಳ ಅಂಗಡಿಗಳಿಗೆ ವ್ಯವಸ್ಥೆ ಮಾಡಿದ್ದು, ಗಣೇಶನ ಮೂರ್ತಿಯನ್ನು ಕೊಳ್ಳಲು ತಾಲೂಕಿನ ವಿವಿಧೆಡೆಗಳಿಂದ ಆಯೋಜಕರು ಆಗಮಿಸಿದ್ದರು. ಇದರಿಂದ ರಸ್ತೆ ಸಂಪೂರ್ಣ ಜನಸಂದಣಿಯಿಂದ ಕೂಡಿತ್ತು.

ಪಿಒಪಿ ಗಣಪನ ಮಾರಾಟ ನಿಷೇಧಿಸಿರುವುದರಿಂದ ಈ ಬಾರಿ ಗಣಪನ ಮೂರ್ತಿಗಳ ಬೆಲೆ ಮತ್ತಷ್ಟು ಬೆಲೆ ಏರಿಕೆ ಕಂಡಿದೆ, ಜತೆಗೆ ನಾಗರಿಕರು ಪರಿಸರ ಸ್ನೇಹಿ ಗಣಪನನ್ನೇ ಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುವುದು ಪರಿಸರ ಸಂರಕ್ಷಣೆಯಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ.

ಜನರ ಆಶಯಕ್ಕೆ ತಕ್ಕಂತೆ ಬರೀ ಜೇಡಿ ಮಣ್ಣಿನಿಂದ ಮಾಡಿದ ಮತ್ತು ಬಣ್ಣ ಲೇಪಿಸದ ಗಣಪನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದ್ದು, ಕಲಾವಿದರೂ ಇಂತಹ ಮೂರ್ತಿಗಳನ್ನೇ ಹೆಚ್ಚು ತಯಾರಿಸಿ ವ್ಯಾಪಾರಕ್ಕಿಟ್ಟಿದ್ದಾರೆ. ದೊಡ್ಡ ಗಾತ್ರದ ಗಣಪತಿಗಳನ್ನು ಹೆಚ್ಚಾಗಿ ಮಾರುಕಟ್ಟೆಯಲ್ಲಿಟ್ಟಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿ ಬೀದಿಯಲ್ಲೂ ಗಣಪನ ಪ್ರತಿಷ್ಠಾಪಿಸುವುದರಿಂದಾಗಿ ಇವೂ ತಮ್ಮ ಬೆಲೆ ಏರಿಸಿಕೊಂಡು ಬೀಗುತ್ತಿವೆ.

ಗ್ರಾಹಕರಿಗೆ ಸಮಾಧಾನ ತಂದ ಹೂವು ದರ:

ವರಮಹಾಲಕ್ಷ್ಮಿಹಬ್ಬದ ಸಂದರ್ಭದಲ್ಲಿ ದಿಢೀರ್‌ ಬೆಲೆ ಏರಿಸಿಕೊಂಡು ಬೀಗಿದ್ದ ಹೂ ಬೆಲೆ ಇದೀಗ ಸಾಕಷ್ಟು ಕುಸಿತ ಕಂಡಿದೆ, ಹೊರ ರಾಜ್ಯಗಳ ಹೂ ಮಾರುಕಟ್ಟೆಗೆ ಬಂದಿರುವುದರಿಂದ ವರಮಹಾ ಲಕ್ಷ್ಮಿಹಬ್ಬದ ಸಂದರ್ಭದಲ್ಲಿ 280 ರೂ. ಕೆ.ಜಿ.ಗೆ ಬೆಲೆ ಏರಿಸಿಕೊಂಡಿದ್ದ ಬಟನ್‌ ರೋಸ್‌ ಈಗ 100 ರೂ.ಗೆ ಇಳಿದಿದೆ, ಸೇವಂತಿ ಕೆ.ಜಿ.ಗೆ 160 ರೂ. ಇದ್ದು, ಮಲ್ಲಿಗೆ 600 ರೂ. ಇದ್ದರೆ ಕನಕಾಂಬರ ಒಂದು ಸಾವಿರ ದಾಟಿದೆ. ಅಕ್ಕಿ, ಬೆಲ್ಲ, ಶೇಂಗಾ, ಎಣ್ಣೆಗಳಲ್ಲಿ ಅಂತಹ ವ್ಯತ್ಯಾಸ ಕಂಡು ಬಾರದಿದ್ದರೂ, ಬೆಲೆ ಏರಿಕೆ ನಾಗರಿಕರ ಜೇಬಿಗೆ ಕತ್ತರಿ ಹಾಕಿರುವುದಂತೂ ದಿಟ. ಒಂದೆಡೆ ಹಬ್ಬದ ಸಂಭ್ರಮವಾದರೆ ಮತ್ತೂಂದೆಡೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವವರಿಗೆ ಬೆಲೆ ಏರಿಕೆಯ ತಾಪ ಕಣ್ಣೀರು ತರಿಸಿದ್ದರೂ, ಸಂಪ್ರದಾಯ ಬದ್ಧವಾಗಿ ಹಬ್ಬ ಆಚರಿಸಬೇಕೆಂಬ ಅನಿವಾರ್ಯತೆ ಜಿಲ್ಲೆಯ ಜನರದ್ದಾಗಿದೆ.

 

● ಕೆ.ಎಸ್‌.ಗಣೇಶ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ