ನಗರಾದ್ಯಂತ ಬ್ಯಾಂಕ್ ಬಂದ್: ಪರದಾಡಿದ ಗ್ರಾಹಕ
Team Udayavani, Mar 16, 2021, 12:30 PM IST
ಮಂಡ್ಯ: ಬ್ಯಾಂಕುಗಳ ವಿಲೀನ ಹಾಗೂ ಖಾಸಗೀಕರಣ ವಿರೋಧಿ ಸಿ ಸೋಮವಾರ ಬ್ಯಾಂಕ್ ನೌಕರರು ಬ್ಯಾಂಕ್‌ಗಳನ್ನು ಬಂದ್ ಮಾಡಿ ಮುಷ್ಕರ ನಡೆಸಿದರು. ನಗರದ ವಿವಿಧ ಬ್ಯಾಂಕ್‌ಗಳ ನೌಕರರು ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಎಸ್‌ಬಿಐ ಬ್ಯಾಂಕ್ ಮುಂದೆ ಜಮಾಯಿಸಿ ಪ್ರತಿಭಟಿಸಿದರು.
ಸುಧಾರಣೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಬ್ಯಾಂಕ್‌ಗಳ ವಿಲೀನ ಹಾಗೂ ಖಾಸಗೀಕರಣ ಮಾಡಲಾಗುತ್ತಿದೆ. ಸಾರ್ವಜನಿಕ ಬ್ಯಾಂಕ್‌ಗಳ ಖಾಸಗೀಕರಣ, ಆಸ್ತಿ ವಸೂಲಿ ಬ್ಯಾಂಕ್ ಸ್ಥಾಪನೆ, ಜೀವ ವಿಮೆ ನಿಗಮದಲ್ಲಿ ಬಂಡವಾಳ ಹಿಂತೆಗೆತ, ಸಾಮಾನ್ಯ ವಿಮೆ ಕಂಪನಿಯ ಖಾಸಗೀಕರಣ, ಶೇ.74ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಗಳಿಂದ ಪ್ರತಿಗಾಮಿ ಕ್ರಮಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಖಾಸಗೀಕರಣ ಬೇಡ:1969ರಿಂದ ದೇಶದಲ್ಲಿ ಬ್ಯಾಂಕ್‌ಗಳು ಸ್ಥಾಪನೆಗೊಂಡು ಗ್ರಾಹಕ ಸ್ನೇಹಿಯಾಗಿವೆ. ಖಾಸಗೀಕರಣ ಮಾಡಿದರೆ ಬ್ಯಾಂಕ್‌ಗಳ ಮೇಲೆ ಗ್ರಾಹಕರು ವಿಶ್ವಾಸ ಕಳೆದುಕೊಳ್ಳ ಲಿದ್ದಾರೆ. ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ಬರಲಿದೆ. ಉದ್ಯೋಗಾವಕಾಶ, ಮೀಸಲಾತಿಯಂಥ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಲಿದೆ. ಬ್ಯಾಂಕ್‌ಗಳ ಮುಚ್ಚುವಿಕೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಲಿದ್ದಾರೆ. ಹೀಗಾಗಿ ಖಾಸಗೀಕರಣ, ವಿಲೀನ ಕೈಬಿಡಬೇಕು ಎಂದು ಒತ್ತಾಯಿಸಿದರು.
ವಾಪಸ್ ಪಡೆಯಿರಿ: 2008ರಲ್ಲಿ ಜಾಗತಿಕ ಬ್ಯಾಂಕಿಂಗ್ ಕುಸಿತದ ವೇಳೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಯಾವುದೇ ಹಾನಿಯಾಗಿರಲಿಲ್ಲ. ಯುರೋಪಿಯನ್, ಅಮೆರಿಕಾದ ಖಾಸಗಿ ಬ್ಯಾಂಕ್‌ಗಳು ತರಗೆಲೆಯಂತೆ ಕುಸಿಯುತ್ತಿದ್ದಾಗ ಆ ದೇಶದ ಸರ್ಕಾರಗಳು ಹಣ ನೀಡಿ ಮೇಲೆತ್ತಲು ಪ್ರಯತ್ನಿಸುತ್ತಿದ್ದ ಸಂದರ್ಭಗಳು ಕಣ್ಣ ಮುಂದೆ ಇವೆ. ಆದರೆ, ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬ್ಯಾಂಕ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಠೇವಣಿ ಮೊತ್ತ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಕ್ರಮಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್ ಅಧಿಕಾರಿಗಳಾದ ಸಂತೋಷ್, ಭುವನ್, ಚಂದನ್, ರಾಘು, ಗಿರೀಶ್, ಪವನ್‌ಕುಮಾರ್, ಬಿಂದು, ಪ್ರಿಯ ಮತ್ತಿತರರಿದ್ದರು. ಮುಷ್ಕರದ ಮಾಹಿತಿ ಇಲ್ಲದೇ ಆಗಮನ : ವಿವಿಧ ಬೇಡಿಕೆ ಈಡೇರಿಕೆಗೆ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ನಗರದ ಎಲ್ಲಾ ಬ್ಯಾಂಕ್ ಬಂದ್ ಆಗಿದ್ದವು. ಕೆಲವೊಂದು ಬ್ಯಾಂಕ್‌ಗಳಲ್ಲಿ ನೌಕರರು ಬಾಗಿಲು ಹಾಕಿಕೊಂಡು ಕರ್ತವ್ಯ ನಿರ್ವಹಿಸಿದರು. ಬ್ಯಾಂಕ್ ಮುಷ್ಕರ ಬಗ್ಗೆ ಮಾಹಿತಿ ಇಲ್ಲದ ಗ್ರಾಹಕರು ಸೋಮವಾರ ಬೆಳಗ್ಗೆ ಬ್ಯಾಂಕ್‌ಗಳಿಗೆ ಲಗ್ಗೆ ಇಟ್ಟಿದ್ದರು. ಆದರೆ ಬ್ಯಾಂಕ್ ಸೇವೆ ಸಿಗದ ಕಾರಣ ಗ್ರಾಹಕರು ವಾಪಸ್ ತೆರಳುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು. ಅಲ್ಲದೆ, ಕೆಲವು ಎಟಿಎಂಗಳಲ್ಲಿ ಹಣ ಇಲ್ಲದ ಪರಿಣಾಮ ಹಣಕ್ಕಾಗಿ ಗ್ರಾಹಕರು ಎಟಿಎಂಗಳ ಮುಂದೆ ಕ್ಯೂ ನಿಂತಿದ್ದ ದೃಶ್ಯಗಳು ಕಂಡು ಬಂದವು.