ಭತ್ತದ ನೆಲದಲ್ಲಿ ಹುರುಳಿ ಚೆಲ್ಲುವ ಕಾಲ

ವರುಣನ ಅವಕೃಪೆಯಿಂದ ಜಿಲ್ಲೆಯಲ್ಲಿ ಹಸಿರ ಸಿರಿ ಮಾಯ • ಕೆಆರ್‌ಎಸ್‌ ನೀರು ತಮಿಳುನಾಡು ರೈತರ ಬೆಳೆಗಳಿಗೆ ಮೀಸಲು

Team Udayavani, Aug 2, 2019, 12:14 PM IST

ಮಂಡ್ಯ ತಾಲೂಕು ಗಾಣದಾಳು ರೈತಸಂಪರ್ಕ ಕೇಂದ್ರದಲ್ಲಿ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಪಾವಧಿ ಬೆಳೆ ಬೆಳೆಯುವಂತೆ ರೈತರಿಗೆ ಜಾಗೃತಿ ಮೂಡಿಸಲಾಯಿತು.

ಮಂಡ್ಯ: ಭತ್ತದ ಕಣಜ, ಕಬ್ಬಿಗರ ನಾಡು ಎಂಬೆಲ್ಲಾ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಹುರುಳಿ ಚೆಲ್ಲುವ ಕಾಲ ಮತ್ತೆ ಎದುರಾಗಿದೆ. ಮಳೆಯ ಪ್ರಮಾಣ ಕ್ಷೀಣಿಸುತ್ತಿರುವುದರಿಂದ ಭತ್ತ ಬೆಳೆಯಲು ಸಾಧ್ಯವಾಗದಂತಹ ವಾತಾವರಣ ಸೃಷ್ಟಿಯಾಗುತ್ತಲೇ ಇದೆ. ಕಳೆದ ವರ್ಷ ಉತ್ತಮ ವರ್ಷಧಾರೆಯಿಂದ ಹಸಿರ ಹೊದಿಕೆ ಹೊದ್ದಿದ್ದ ಜಿಲ್ಲೆ ಈ ಬಾರಿ ವರುಣನ ಅವಕೃಪೆಯಿಂದ ಮತ್ತೆ ಬರಡಾಗಿದೆ.

2014ರಿಂದ 2017ರವರೆಗೆ ಬರಗಾಲ ಎದುರಿಸಿದ್ದ ಮಂಡ್ಯ ಜಿಲ್ಲೆ ಕಳೆದ ವರ್ಷ ಉತ್ತಮ ವರ್ಷಧಾರೆಯಿಂದ ಜುಲೈ 17ಕ್ಕೇ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿ ಕೃಷಿ ಚಟುವಟಿಕೆಯೂ ಗರಿಗೆದರಿತ್ತು. ಭತ್ತ, ಕಬ್ಬು ಬೆಳೆದು ರೈತರು ನಷ್ಟದಿಂದ ಪಾರಾಗಿದ್ದರು. ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಆಶಾಭಾವನೆಯಲ್ಲಿದ್ದಾಗಲೇ ಮತ್ತೆ ಮಳೆ ಮಾಯವಾಗಿದೆ. ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆ ಈ ಬಾರಿ ಹುಸಿಯಾಗಿದೆ.

ಮುಂಗಾರು ಪೂರ್ವ ಹಾಗೂ ಮುಂಗಾರು ಎರಡೂ ಕೈಕೊಟ್ಟಿರುವುದರಿಂದ ಕೃಷಿ ಚಟುವಟಿಕೆ ಜಿಲ್ಲೆಯಲ್ಲಿ ನೀರಸವಾಗಿದೆ. ನೀರಿನ ಕೊರತೆಯಿಂದ ಭತ್ತ ಬೆಳೆಯಲು ಈ ಬಾರಿ ಅವಕಾಶವೇ ಇಲ್ಲದಂತಾಗಿದೆ. ನೀರಿಲ್ಲದ ಕಾರಣ ಹುರುಳಿ, ಅವರೆ, ಉದ್ದು, ಮುಸುಕಿನ ಜೋಳ, ರಾಗಿ ಬೆಳೆಗಳನ್ನು ಬೆಳೆಯುವುದು ರೈತರಿಗೆ ಅನಿವಾರ್ಯವಾಗಿದೆ.

ಮಳೆಗಾಗಿ ಕಾದುಕುಳಿತ ರೈತ: ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿದೆ. ಜಿಲ್ಲಾದ್ಯಂತ ಬಿತ್ತನೆ ಕುಂಠಿತಗೊಂಡಿದ್ದು, ಬಿತ್ತನೆಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿಟ್ಟುಕೊಂಡಿರುವ ರೈತರು ಮಳೆಗಾಗಿ ಕಾತರದಿಂದ ಎದುರು ನೋಡುತ್ತಿದ್ದಾರೆ.

ಕೆಆರ್‌ಎಸ್‌ ಜಲಾಶಯದಿಂದ ಮುಂಗಾರು ಹಂಗಾಮು ಬೆಳೆಗಳಿಗೆ ನೀರಂತೂ ಸಿಗುವುದಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಅವಧಿ ಬಹುತೇಕ ಪೂರ್ಣಗೊಂಡಿದೆ. ಮಳೆ ಕೊರತೆಯಿಂದ ಕೆಆರ್‌ಎಸ್‌ನಲ್ಲಿ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿದೆ. ನಮ್ಮ ರೈತರ ಬದುಕನ್ನು ಹಸನಾಗಿಸ ಬೇಕಿದ್ದ ಕಾವೇರಿ ನೀರನ್ನು ತಮಿಳುನಾಡು ರೈತರ ಬೆಳೆಗಳಿಗೆ ಮೀಸಲಿಟ್ಟು ನಿತ್ಯವೂ ಹರಿಸಲಾ ಗುತ್ತಿದೆ. ಜೀವನದಿ ನೆರೆ ರಾಜ್ಯದತ್ತ ಹರಿಯುತ್ತಿರು ವುದನ್ನು ಕಂಡು ರೈತರು ದಿಕ್ಕೆಟ್ಟು ಅಸಹಾಯಕರಾಗಿ ಕುಳಿತಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಶೇ.9.8 ರಷ್ಟು ಮಾತ್ರ ಬಿತ್ತನೆ ನಡೆದಿದೆ. ಮುಂಗಾರು ಹಂಗಾಮಿನಲ್ಲಿ ಈವರೆಗೆ 19297 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಇದರಲ್ಲಿ 893 ಹೆಕ್ಟೇರ್‌ ಏಕದಳ, 9174 ಹೆಕ್ಟೇರ್‌ ದ್ವಿದಳ, 2609 ಹೆಕ್ಟೇರ್‌ ಎಣ್ಣೆಕಾಳು ಹಾಗೂ 5146 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಬೆಳೆಯಲಾಗಿದೆ.

ಭತ್ತದ ಬಿತ್ತನೆ ಅವಧಿ ಪೂರ್ಣ: ಪ್ರಸಕ್ತ ಸಾಲಿನಲ್ಲಿ ಭತ್ತದ ಬಿತ್ತನೆ ಅವಧಿ ಶೇ.80ರಷ್ಟು ಮುಗಿದುಹೋಗಿದೆ. ಕೆರೆ-ಕಟ್ಟೆ, ಕೊಳವೆ ಬಾವಿ ಆಶ್ರಿತ ಪ್ರದೇಶದಲ್ಲಿರುವವರು ಭತ್ತದ ಸಸಿ ಮಡಿ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಕೃಷಿ ಇಲಾಖೆ ಪ್ರಕಾರ ಶ್ರೀರಂಗಪಟ್ಟಣ ತಾಲೂಕಿನಲ್ಲಿ 22 ಹೆಕ್ಟೇರ್‌ ಹೊರತುಪಡಿಸಿದರೆ, ಜಿಲ್ಲೆಯ ಯಾವ ಭಾಗದಲ್ಲೂ ಭತ್ತದ ಬಿತ್ತನೆ ನಡೆದಿಲ್ಲ. ನಾಲೆಗಳಿಗೆ ನೀರು ಹರಿಸುವ ಸಾಧ್ಯತೆಗಳು ಇಲ್ಲದಿರುವುದರಿಂದ ಕೃಷಿ ಇಲಾಖೆ ಭತ್ತದ ಬಿತ್ತನೆ ಬೀಜಗಳನ್ನು ವಿತರಿಸಿಲ್ಲ. ರಾಗಿ, ಮುಸುಕಿನ ಜೋಳ ಬಿತ್ತನೆ ಬೀಜಗಳನ್ನು ಪಡೆದುಕೊಂಡಿರುವ ರೈತರು ಅದಕ್ಕೂ ಮಳೆ ಬೀಳುವುದನ್ನೇ ಎದುರು ನೋಡುತ್ತಿದ್ದಾರೆ.

ಮುಂಗಾರಿನಲ್ಲಿ ಜಿಲ್ಲೆಯ 99 ಹೆಕ್ಟೇರ್‌ನಲ್ಲಿ ಜೋಳ, 315 ಹೆಕ್ಟೇರ್‌ನಲ್ಲಿ ರಾಗಿ, 415 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆ ನಡೆದಿದೆ. 382 ಹೆಕ್ಟೇರ್‌ನಲ್ಲಿ ತೊಗರಿ, 393 ಹೆಕ್ಟೇರ್‌ನಲ್ಲಿ ಉದ್ದು, 308 ಹೆಕ್ಟೇರ್‌ನಲ್ಲಿ ಹೆಸರು, 7971 ಹೆಕ್ಟೇರ್‌ನಲ್ಲಿ ಅಲಸಂದೆ, 119 ಹೆಕ್ಟೇರ್‌ನಲ್ಲಿ ಅವರೆ, 2447 ಹೆಕ್ಟೇರ್‌ನಲ್ಲಿ ಎಳ್ಳು ಬೆಳೆ ಬಿತ್ತನೆ ಮಾಡಿದ್ದು, ಅವೆಲ್ಲವೂ ಈಗ ಕಟಾವಿನ ಹಂತ ತಲುಪಿವೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ವರೆಗೆ ಈ ಬೆಳೆಗಳನ್ನು ಬೆಳೆಯಲಾಗುವುದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೀರ್ಘಾವಧಿ ಭತ್ತ ಬೆಳೆಯಲಾಗದು: ಮುಂಗಾರು ಮಳೆ ಕೈಕೊಟ್ಟಿದ್ದು, ಒಮ್ಮೆ ಹಿಂಗಾರು ಮಳೆ ಉತ್ತಮವಾಗಿ ಬಿದ್ದಲ್ಲಿ ಆಗ ರೈತರು ದೀರ್ಘಾವಧಿ, ಮಧ್ಯಮಾವಧಿ ಭತ್ತದ ಬೆಳೆಯನ್ನು ಬೆಳೆಯದೆ ಅಲ್ಪಾವಧಿ ತಳಿಯ ಬೆಳೆಗಳನ್ನು ಮಾತ್ರ ಬೆಳೆಯಬಹುದು. ದೀರ್ಘಾವಧಿ, ಮಧ್ಯಮಾವಧಿ ಭತ್ತದ ಬೆಳೆ ಬೆಳೆದರೆ ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿ ಚಳಿಯ ಹೊಡೆತಕ್ಕೆ ಸಿಲುಕಿ ಜೊಳ್ಳಾಗಬಹುದು. ಇಳುವರಿ ಕುಂಠಿತಗೊಳ್ಳುವ ಸಾಧ್ಯತೆಗಳಿರುತ್ತದೆ. ಆ ಸಮಯದಲ್ಲಿ ಮುಸುಕಿನ ಜೋಳ, ರಾಗಿ, ಹುರುಳಿ, ಅವರೆ, ಎಣ್ಣೆಕಾಳು ಬೆಳೆಗಳನ್ನು ಬೆಳೆಯುವುದಕ್ಕೆ ಹೆಚ್ಚು ಅವಕಾಶವಿದೆ.

ಕೃಷಿ ಇಲಾಖೆಯಲ್ಲಿ 12 ಸಾವಿರ ಮೆಟ್ರಿಕ್‌ ಟನ್‌ ಗೊಬ್ಬರವಿದೆ. ರಾಗಿ 400 ಕ್ವಿಂಟಾಲ್ನಷ್ಟು ದಾಸ್ತಾನಿದ್ದು 64 ಕ್ವಿಂಟಾಲ್ನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಕೆ.ಆರ್‌.ಪೇಟೆ, ಮಳವಳ್ಳಿ ತಾಲೂಕುಗಳಲ್ಲಿ ಮುಸುಕಿನ ಜೋಳವನ್ನು ಬೆಳೆಯಲಾಗುತ್ತಿದ್ದು, ಇದುವರೆಗೂ 14 ಕ್ವಿಂಟಾಲ್ನಷ್ಟು ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ವಿತರಿಸಲಾಗಿದೆ.

ಮುಂಗಾರು ಹವಾಮಾನ ಜಾಗೃತಿ ಯೋಜನೆ: ಮುಂಗಾರು ಮಳೆ ಕೊರತೆಯ ಸಂದರ್ಭದಲ್ಲಿ ಕಬ್ಬು, ಭತ್ತ ಹೊರತುಪಡಿಸಿ ಪರ್ಯಾಯ ಬೆಳೆಗಳನ್ನು ಬೆಳೆಯುವುದಕ್ಕೆ ರೈತರನ್ನು ಪ್ರೇರೇಪಿಸಲು ಮುಂಗಾರು ಹಂಗಾಮಿನಲ್ಲಿ ಪರ್ಯಾಯ ಬೆಳೆ ಜಾಗೃತಿ ಅಭಿಯಾನವನ್ನು ಕೃಷಿ ಇಲಾಖೆ ಹಮ್ಮಿಕೊಂಡಿದೆ. ಈಗಾಗಲೇ 700 ಹಳ್ಳಿಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಹಾಲಿನ ಡೈರಿ, ಸಂತೆಗಳ ಬಳಿ ಕರಪತ್ರಗಳನ್ನು ಹಂಚುವ, ಆಟೋಗಳಲ್ಲಿ ಪ್ರಚಾರ ನಡೆಸುವುದ ರೊಂದಿಗೆ ಅಭಿಯಾನ ನಡೆಸಲಾಗುತ್ತಿದೆ.

ಶೇ.25ರಷ್ಟು ಪರಿಹಾರ:
ಫ‌ಸಲ್ ಭೀಮಾ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡರೆ ರೈತರಿಗೆ ಬೆಳೆ ಬೆಳೆಯದಿ ದ್ದರೂ ಶೇ.25ರಷ್ಟು ಪರಿಹಾರ ಹಣ ದೊರಕಲಿದೆ. ಜಿಲ್ಲೆಯಲ್ಲಿ 11 ಸಾವಿರ ರೈತರು ಹಲಸಂದೆ, ಎಳ್ಳು ಬೆಳೆಗಳಿಗೆ ವಿಮೆ ಮಾಡಿಸಿಕೊಂಡಿದ್ದು, ಆ.14ರವರೆಗೆ ರಾಗಿ ಮತ್ತು ಭತ್ತದ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ರೈತರ ಸಿರಿ ಯೋಜನೆಯಡಿ ಸಿರಿಧಾನ್ಯಗಳನ್ನು ಬೆಳೆಯುವುದಕ್ಕೆ ಉತ್ತೇಜನ ನೀಡಲಾಗುತ್ತಿದ್ದು, ಇಲಾಖೆಯಿಂದ 10 ಸಾವಿರ ರೂ. ಸಬ್ಸಿಡಿ ನೀಡಲಾ ಗುತ್ತಿದ್ದು, ಇದನ್ನು ಆಶ್ರಯಿಸುವಂತೆ ಕೃಷಿ ಇಲಾಖೆ ಯಿಂದ ರೈತರಿಗೆ ತಿಳಿವಳಿಕೆ ನೀಡಲಾಗುತ್ತಿದೆ.

ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕುಸಿತ:

ತಮಿಳುನಾಡಿಗೆ ನೀರು ಹರಿಯಬಿಟ್ಟಿರುವ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಅಣೆಕಟ್ಟೆಯ ನೀರಿನಮಟ್ಟ ಕುಸಿಯುತ್ತಾ ಸಾಗಿದೆ. ಪ್ರಸ್ತುತ ಅಣೆಕಟ್ಟೆಯಲ್ಲಿ 84.50 ಅಡಿ ನೀರು ಸಂಗ್ರಹ ವಾಗಿದೆ. ಜಲಾಶಯಕ್ಕೆ 6511 ಕ್ಯೂಸೆಕ್‌ ನೀರು ಹರಿದುಬರುತ್ತಿದ್ದರೆ ಅಣೆಕಟ್ಟೆಯಿಂದ ಹೊರಕ್ಕೆ 9972 ಕ್ಯೂಸೆಕ್‌ ನೀರನ್ನು ಹರಿಯಬಿಡಲಾಗಿದೆ.

ಇದರಲ್ಲಿ 7061 ಕ್ಯೂಸೆಕ್‌ ನೀರನ್ನು ನದಿಗೂ ಹಾಗೂ 2911 ಕ್ಯೂಸೆಕ್‌ ನೀರನ್ನು ನಾಲೆಗಳಿಗೂ ಹರಿಸಲಾಗುತ್ತಿದೆ. ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 96 ಅಡಿ ಇದ್ದಾಗ ನಾಲೆಗಳಿಗೆ ಸುಲಭವಾಗಿ ನೀರು ಹರಿಸಲು ಸಾಧ್ಯವಾಗುವುದು ಎಂಬುದನ್ನು ಆಧರಿಸಿ ಅಣೆಕಟ್ಟೆಯ ನೀರಿನ ಮಟ್ಟ ನಿರ್ದಿಷ್ಟ ಹಂತ ತಲುಪಿದಾಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ನೀರಿನ ಬೇಡಿಕೆ ಇಡಬಹುದು. ಆದರೆ, ಮಳೆಯ ಕಣ್ಣಾಮುಚ್ಚಾಲೆಯಾಟದಲ್ಲಿ ಜಲಾಶಯ ಆ ಹಂತ ತಲುಪುವುದು ಈ ಬಾರಿ ಕಷ್ಟಸಾಧ್ಯವಾಗಿದೆ.

 

● ಮಂಡ್ಯ ಮಂಜುನಾಥ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ