ಬಿಮಾ ಯೋಜನೆ ಜಾಗೃತಿ ಮೂಡಿಸಿ

Team Udayavani, Nov 13, 2019, 4:11 PM IST

ಮಂಡ್ಯ: ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ಸರ್ಕಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ 2019-20ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ನಡೆದ ಜಿಲ್ಲಾ ಬೆಳೆ ವಿಮಾ ಯೋಜನೆ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಸದರಿ ಯೋಜನೆ ಬಗ್ಗೆ ಜಿಲ್ಲಾದ್ಯಂತ ವ್ಯಾಪಕ ಪ್ರಚಾರ ಕೈಗೊಂಡು ಹೆಚ್ಚಿನ ಸಂಖ್ಯೆಯ ರೈತರು ಈ ಯೋಜನೆಯಡಿ ಭಾಗವಹಿಸಲು ಕ್ರಮ ವಹಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳೆ ವಿಮೆ ಕಡ್ಡಾಯ: ಬೆಳೆ ಸಾಲ ಪಡೆದ ರೈತರಿಗೆ ಬೆಳೆ ವಿಮೆ ಕಡ್ಡಾಯವಾಗಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಇಚ್ಛೆಯುಳ್ಳ ಬೆಳೆ ಸಾಲ ಪಡೆಯದ ರೈತರು ಈ ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ , ಖಾತೆ, ಬ್ಯಾಂಕ್‌ ಪಾಸ್‌ ಪುಸ್ತಕ , ಕಂದಾಯ ರಶೀದಿ, ಆಧಾರ್‌ ನೋಂದಣಿ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆ ನೀಡಬೇಕು ಎಂದು ಹೇಳಿದರು.

ಪರ್ಯಾಯ ಬೆಳೆ: ರೈತರು ಆರ್ಥಿಕವಾಗಿ ಸಬಲರಾಗಲು ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಬೇಕು. ಕೃಷಿ ಅರಣ್ಯ ಯೋಜನೆಯ ಅಧಿಕಾರಿಗಳು ರೈತರಿಗೆಮಾಹಿತಿ ನೀಡ ಬೇಕು ಎಂದು ಸೂಚಿಸಿದರು.

ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ: ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್‌. ಚಂದ್ರಶೇಖರ್‌ ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ ಭತ್ತ (ನೀರಾವರಿ) ಹಾಗೂ ರಾಗಿ(ನೀರಾವರಿ) ಬೆಳೆಗಳಿಗೆ ರೈತರು ವಿಮಾ ಪ್ರಸ್ತಾವನೆ ಸಲ್ಲಿಸಲು ಡಿ. 16 ಕೊನೆಯ ದಿನವಾಗಿದೆ. ರಾಗಿ(ಮಳೆ ಆಶ್ರಿತ) ಬೆಳೆಗೆ ನ. 14, ಹುರುಳಿ( ಮಳೆ ಆಶ್ರಿತ) ಹಾಗೂ ಟೊಮೆಟೋ ಬೆಳೆಗೆ ನ.30 ವಿಮಾ ಪ್ರಸ್ತಾವನೆ ಸಲ್ಲಿಸಲು ಕೊನೆಯ ದಿನವಾಗಿದೆ.

ಬೇಸಿಗೆ ಹಂಗಾಮಿನಲ್ಲಿ ಭತ್ತ(ನೀರಾವರಿ), ರಾಗಿ(ನೀರಾವರಿ) ಹಾಗೂ ಟೊಮೆಟೋ ಬೆಳೆಗಳಿಗೆ ಫೆ.29ರವರಗೆ ರೈತರು ವಿಮಾ ಪ್ರಸ್ತಾವನೆ ಸಲ್ಲಿಸಲು ಅವಕಾಶವಿದೆ ಎಂದರು. ಆಸಕ್ತ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಗಳು, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ಧನುಷ್‌, ಜಿಲ್ಲಾ ಮಾಗದರ್ಶಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕದರಪ್ಪ, ವಾರ್ತಾಧಿಕಾರಿ ಹರೀಶ್‌, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಮ್ಮ ಹಾಗೂ ವಿಮಾಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿ ತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ