ಅಂಕ ಗಳಿಕೆಯೇ ಪ್ರತಿಭೆಯಲ್ಲ

ಮಕ್ಕಳಲ್ಲಿನ ಕಲೆ-ಸಂಗೀತ-ನೃತ್ಯ-ಚಿತ್ರಕಲೆ-ಕ್ರೀಡಾ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಿ

Team Udayavani, Sep 8, 2019, 12:06 PM IST

ಮಾನ್ವಿ: ಪಟ್ಟಣದ ಗಾಂಧಿ ಸ್ಮಾರಕ ಶಾಲೆಯಲ್ಲಿ ನಡೆದ ಮಾನ್ವಿ ಪೂರ್ವ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮವನ್ನು ಪುರಸಭೆ ಸದಸ್ಯ ರಾಜಾಮಹೇಂದ್ರ ನಾಯಕ ಉದ್ಘಾಟಿಸಿದರು.

ಮಾನ್ವಿ: ಕೇವಲ ಹೆಚ್ಚು ಅಂಕ ಗಳಿಕೆಯೊಂದೇ ಪ್ರತಿಭೆಯಲ್ಲ ಎಂದು ಪುರಸಭೆ ಸದಸ್ಯ ರಾಜಾ ಮಹೇಂದ್ರ ನಾಯಕ ಹೇಳಿದರು.

ಶಿಕ್ಷಣ ಇಲಾಖೆ ಮತ್ತು ಗಾಂಧಿ ಸ್ಮಾರಕ ಶಾಲೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಗಾಂಧಿ ಸ್ಮಾರಕ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಮಾನ್ವಿ ಪೂರ್ವ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳನ್ನು ಕೇವಲ ಅಂಕ ಗಳಿಕೆಗೆ ಸೀಮಿತಗೊಳಿಸದೆ ಇತರೆ ಚಟುವಟಿಕೆಗಳಲ್ಲಿ ತೊಡಗಲು ಅವಕಾಶ ಮಾಡಿಕೊಡಬೇಕು. ಅನೇಕ ಮಕ್ಕಳಲ್ಲಿ ಕ್ರೀಡೆ, ನೃತ್ಯ, ಸಂಗೀತ, ಚಿತ್ರಕಲೆ, ಅಭಿನಯ ಸೇರಿ ಇತರೆ ಪ್ರತಿಭೆ ಇರುತ್ತದೆ. ಅವುಗಳನ್ನು ಪಾಲಕರು, ಶಿಕ್ಷಕರು ಗುರುತಿಸಿ ತರಬೇತಿ ನೀಡಿ ಪ್ರೋತ್ಸಾಹಿಸಬೇಕು ಎಂದರು.

ಪಾಲಕರು ಸಹ ಮಕ್ಕಳ ಆಸಕ್ತಿ ತಿಳಿದುಕೊಳ್ಳದೆ ಕೇವಲ ಓದು ಬರಹಕ್ಕೆ ಅವರನ್ನು ಕಟ್ಟಿ ಹಾಕುತ್ತಾರೆ. ಇನ್ನು ಕೆಲ ಮಕ್ಕಳು ಮೊಬೈಲ್, ಟಿವಿ ಎಂದು ಅನಾವಶ್ಯಕ ಸಮಯ ವ್ಯರ್ಥ ಮಾಡುತ್ತಾರೆ. ಇದು ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಸರ್ಕಾರವೇ ಮುಂದಾಗಿ ಶಿಕ್ಷಣ ಇಲಾಖೆ ಮೂಲಕ ಇಂತಹ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಂದ ವಿವಿಧ ಮಾದರಿಯ ಸ್ಪರ್ಧೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.

20ಕ್ಕೂ ಅಧಿಕ ಶಾಲಾ ಮಕ್ಕಳು ಭಾಗವಹಿಸಿದ್ದರು. ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭರತನಾಟ್ಯ, ಪ್ರಬಂಧ ಸ್ಪರ್ಧೆ, ಆಶು ಭಾಷಣ ಸ್ಪರ್ಧೆ, ಮಣ್ಣಿನ ಮೂರ್ತಿಗಳ ತಯಾರಿಕೆ ಸ್ಪರ್ಧೆ, ಚಿತ್ರಕಲೆ ಸೇರಿದಂತೆ ಅನೇಕ ಮಾದರಿ ಸ್ಪರ್ಧೆ ನಡೆದವು. ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವಿಜೇತ ಮಕ್ಕಳು ಮುಂದೆ ನಡೆಯುವ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಬಿಸಿಯೂಟ ಯೋಜನಾ ಅಧಿಕಾರಿ ಸುರೇಶ ನಾಯಕ, ಪುರಸಭೆ ಸದಸ್ಯರಾದ ವನಿತ ಶಿವರಾಜ, ರೇವಣಸಿದ್ದಯ್ಯ, ಬಸವರಾಜ ಭಜಂತ್ರಿ, ನಿವೃತ್ತ ಮುಖ್ಯ ಗುರು ಸುರೇಂದ್ರರೆಡ್ಡಿ, ಗಾಂಧಿ ಸ್ಮಾರಕ ಶಾಲೆ ಮುಖ್ಯಗುರು ರಾಮಲಿಂಗಪ್ಪ, ಟಿ.ಜಾತಪ್ಪ, ರಾಚಮ್ಮ ಇತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ