15 ಬೂತ್‌ನಲ್ಲಿ ಆನ್‌ಲೈನ್‌ ನೇರ ಪ್ರಸಾರ, 10 ಬೂತ್‌ನಲ್ಲಿ ವಿಡಿಯೋ

Team Udayavani, Apr 18, 2019, 3:00 AM IST

ಎಚ್‌.ಡಿ.ಕೋಟೆ: ತಾಲೂಕಿನಲ್ಲಿ ಗುರುವಾರ ನಡೆಯುವ ಲೋಕಸಭೆ ಚುನಾವಣೆಗೆ ತಾಲೂಕು ಆಡಳಿತ ನ್ಯಾಯಸಮ್ಮತ, ಶಾಂತಿಯುತ, ಪಾರದರ್ಶಕ ಮತದಾನಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

ತಾಲೂಕು ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಸೇರಿದ್ದು, ಚುನಾವಣೆ ಸಂಬಂಧ ಪಟ್ಟಣದ ಸೇಂಟ್‌ ಮೇರಿಸ್‌ ಕಾನ್ವೆಂಟ್‌ನಲ್ಲಿ ಮಸ್ಟರಿಂಗ್‌ ಕಾರ್ಯ ನಡೆಯಿತು. 284 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈ ಪೈಕಿ 57 ಮತಗಟ್ಟೆಗಳನ್ನು ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆ ಕೇಂದ್ರಗಳೆಂದು ಗುರುತಿಸಲಾಗಿದೆ. ಇಂತಹ ಮತಗಟ್ಟೆಗಳಿಗೆ ಓರ್ವ ಹೆಚ್ಚುವರಿ ಮತಗಟ್ಟೆ ಅಧಿಕಾರಿ ಸಹಿತ ಹೆಚ್ಚಿನ ಪೊಲೀಸ್‌ ಬಿಗಿಭದ್ರತೆ ಒದಗಿಸಲಾಗಿದೆ.

ಬುಧವಾರ ಬೆಳಗ್ಗೆಯಿಂದಲೇ ಚುನಾವಣೆ ಸಂಬಂಧ ಮಸ್ಟರಿಂಗ್‌ ಕೇಂದ್ರದ ಬಳಿ ಚುನಾವಣೆ ಮತಗಟ್ಟೆಗಳಿಗೆ ತೆರಳಲು ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿ ತಾವು ಕರ್ತವ್ಯಕ್ಕೆ ನಿಯೋಜನೆ ಗೊಂಡಿರುವ ಮತಗಟ್ಟೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ದೃಶ್ಯ ಕಂಡು ಬಂತು.

ಒಟ್ಟು 284 ಕೇಂದ್ರಗಳಿಗೆ 1329 ಅಧಿಕಾರಿ ನಿಯೋಜನೆಗೊಂಡಿದ್ದು, 1200ಕ್ಕೂ ಹೆಚ್ಚು ಮತದಾನ ಇರುವ ಮತಗಟ್ಟೆಗಳಿಗೆ ಓರ್ವ ಹೆಚ್ಚುವರಿ ಅಧಿಕಾರಿಯನ್ನು ನಿಯೋಜಿಸಲಾಗಿದೆ. 57 ಸೂಕ್ಷ್ಮ ಮತ ಕೇಂದ್ರಗಳಲ್ಲಿ 15 ಮತಗಟ್ಟೆಗಳಲ್ಲಿ ಅನ್‌ಲೈನ್‌ ನೇರ ಪ್ರಸಾರ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು 10 ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರಿಕರಣ ಇರಲಿದೆ ಎಂದು ಚುನಾವಣಾಧಿಕಾರಿ ಅಭಿಲಾಶ್‌ ಶರ್ಮ ತಿಳಿಸಿದ್ದಾರೆ.

ಸಖಿ, ಬುಡಕಟ್ಟು ಮತಗಟ್ಟೆ: ಕಾಡಂಚಿನ‌ ಗಿರಿಜನರು ಮತದಾನದಿಂದ ದೂರ ಉಳಿಬಾರದೆಂದು ತಾಲೂಕಿನ ಭೀಮನಹಳ್ಳಿ ವಸತಿ ಶಾಲೆ, ಸೋಳ್ಳೆಪುರ ಗಿರಿಜನ ಹಾಡಿ ಹಾಗೂ ಪೆಂಜಳ್ಳಿ ಗಿರಿಜನ ಹಾಡಿಗಳಲ್ಲಿ ಬುಡಕಟ್ಟು ಸಾಂಪ್ರದಾಯಿಕ (ಟ್ರೈಬಲ್‌ ಯತ್ನಿಕ್‌) ಮತಗಟ್ಟೆ ಸ್ಥಾಪಿಸಲಾಗಿದೆ.

ಇನ್ನು ಮತದಾರನ್ನು ಮತಗಟ್ಟೆಗೆ ಸೆಳೆಯಲು ಎಚ್‌.ಡಿ.ಕೋಟೆ ಪಟ್ಟಣದ ಉರ್ದು ಶಾಲೆ ಸೇರಿದಂತೆ ಆಯ್ದ ಗ್ರಾಮಗಳಲ್ಲಿ ಪಿಂಕ್‌(ಸಖಿ) ಮತಗಟ್ಟೆ ತೆರೆಯಲಾಗಿದ್ದು, ಈ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿ ಸಿಬ್ಬಂದಿ ಎಲ್ಲರೂ ಮಹಿಳೆ ಇದ್ದು, ಕಾರ್ಯ ನಿರ್ವಹಿಸಲಿದ್ದಾರೆ. ಭದ್ರತೆಗೆ 600ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.

ಭದ್ರತೆ: ಚಾಮರಾಜನರ ಈ ಬಾರಿ ತೀವ್ರ ಕುತೂಹಲ ಮೂಡಿಸಿದ್ದು, ಕ್ಷೇತ್ರವಾರು ರಾಜಕೀಯ ಪಕ್ಷಗಳಲ್ಲಿ ಜಿದ್ದಾಜಿದ್ದಿನ ವಾತಾವರಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮೈಸೂರು ಹೆಚ್ಚುವರಿ ಎಸ್‌ಪಿ ಉಸ್ತುವಾರಿಯಲ್ಲಿ ಒರ್ವ ಡಿವೈಎಸ್ಪಿ ನೇತೃತ್ವದಲ್ಲಿ ಇಬ್ಬರು ಇನ್ಸ್‌ಪೆಕ್ಟರ್‌, 20 ಸಬ್‌ಇನ್ಸ್‌ಪೆಕ್ಟರ್‌ ಸಹಿತ 2 ಕೆಎಸ್‌ಆರ್‌ಪಿ ತುಕಡಿ, 3 ಡಿಆರ್‌ ತುಕಡಿಗಳನ್ನು ಸೇರಿದಂತೆ ಪ್ರತಿ ಮತಗಟ್ಟೆಗೆ ಒರ್ವ ಪ್ಯಾರಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 600 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಹರೀಶ್‌ಕುಮಾರ್‌ ತಿಳಿಸಿದ್ದಾರೆ.

ಸಾರಿಗೆ: ತಾಲೂಕಿನಲ್ಲಿ 284 ಮತಗಟ್ಟೆಗಳಿಗೆ ತೆರೆಳಲು 64 ಮಾರ್ಗಗಳನ್ನಾಗಿ ವಿಂಗಡಿಸಿದ್ದು, ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ತೆರಳಲು 40 ಕೆಎಸ್‌ಆರ್‌ಟಿಸಿ ಬಸ್‌, 15 ವಿಂಗರ್‌, 9 ಜೀಪ್‌ಗ್ಳನ್ನು ಒದಗಿಸಲಾಗಿದೆ.

ಅಂಚೆ ಮತದಾನಕ್ಕೆ ವ್ಯವಸ್ಥೆ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತದಾನ ಮಾಡಲು ಮಸ್ಟರಿಂಗ್‌ ಕೇಂದ್ರದ ಬಳಿ 3 ಮಟಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದ್ದು, ಈಗಾಗಲೇ 787 ಅಂಚೆ ಮತ ಪತ್ರ ಮತ್ತು 215 ಇಡಿಸಿ ಮತ ಪತ್ರ ವಿತರಿಸಲಾಗಿದೆ. ಮಧ್ಯಾಹ್ನ 3 ಗಂಟೆ ನಂತರ ಸಕಲ ಸಿದ್ದತೆಯೊಂದಿಗೆ ಮತಗಟ್ಟೆ ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಮತದಾನದ ಇವಿಯಂ ಯಂತ್ರ ಮತ್ತು ಮತದಾನಕ್ಕೆ ಬೇಕಾದ ವಸ್ತುಗಳೊಂದಿಗೆ ತೆರಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ