ಕುದುರೆ ಸಾಕಾಣಿಕೆ ಕಟ್ಟಡ ತೆರವಿಗೆ 3 ತಿಂಗಳ ಗಡುವು

Team Udayavani, Jul 2, 2018, 3:03 PM IST

ಮೈಸೂರು: ರೇಸ್‌ಕ್ಲಬ್‌ ಆವರಣದಲ್ಲಿ ಕುದುರೆ ಸಾಕಾಣಿಕೆಗೆ ನಿರ್ಮಿಸಿರುವ ಕಟ್ಟಡಗಳನ್ನು ಮೂರು ತಿಂಗಳೊಳಗೆ ತೆರವು ಮಾಡದಿದ್ದಲ್ಲಿ, ರೇಸ್‌ ಕ್ಲಬ್‌ಗ ನೀಡಿರುವ ವಿದ್ಯುತ್‌, ನೀರು ಸರಬರಾಜು ಸ್ಥಗಿತಗೊಳಿಸುವ ಜತೆಗೆ ಬಾರ್‌ ಲೈಸೆನ್ಸ್‌ ರದ್ದುಗೊಳಿಸುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಎಚ್ಚರಿಕೆ ನೀಡಿದರು.

ನಗರದ ಚಾಮುಂಡಿಬೆಟ್ಟದ ತಪ್ಪಲಿ ನಲ್ಲಿರುವ ರೇಸ್‌ಕೋರ್ಸ್‌ ಮೈದಾನಕ್ಕೆ ಭಾನುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ರೇಸ್‌ಕೋರ್ಸ್‌ನಲ್ಲಿ ಕುದುರೆಗಳನ್ನು ಓಡಿಸಲು ಮಾತ್ರ ಸರ್ಕಾರದಿಂದ ಜಾಗ ನೀಡಲಾಗಿದೆ. ರೇಸ್‌ ಕೋರ್ಸ್‌ನಿಂದ ಹೊರಗೆ ಕುದುರೆಗಳ ಪಾಲನೆ ಮಾಡಿ ಆಯಾ ದಿನಕ್ಕೆ ಬೇಕಾದ ಕುದುರೆಗಳನ್ನು ತಂದು ರೇಸ್‌ ನಡೆಸ ಬೇಕೆಂಬ ಸೂಚನೆ ನೀಡಲಾಗಿದೆ. ಹೀಗಾಗಿ ರೇಸ್‌ಕೋರ್ಸ್‌ನಲ್ಲಿ ಕುದುರೆಗಳ ಸಾಕಾಣಿಕೆಗೆ ಅವಕಾಶವಿಲ್ಲ, ಹೀಗಿದ್ದರೂ ಇಲ್ಲಿ ಅಗತ್ಯಕ್ಕಿಂತ ಹೆಚ್ಚು ಕುದುರುಗಳಿವೆ.

ಆದ್ದರಿಂದ ಈ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಕಾನೂನು ರೀತಿಯಲ್ಲಿ ಅವಕಾಶವಿಲ್ಲದಿದ್ದರೂ, ರೇಸ್‌ಕೋರ್ಸ್‌ನಲ್ಲಿ 600ಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇವುಗಳ ಮಾಲಿಕರು
ಎಷ್ಟೇ ಪ್ರಬಲರಾಗಿದ್ದರೂ, ಯಾವುದೇ ಪ್ರಭಾವಕ್ಕೊಳಗಾಗದೆ ಈ ಕಟ್ಟಡಗಳನ್ನು ತೆರವು ಮಾಡಿಸುತ್ತೇನೆ ಎಂದು ಹೇಳಿದರು.
 
3 ತಿಂಗಳ ಗಡುವು: ರೇಸ್‌ಕೋರ್ಸ್‌ನಲ್ಲಿ 110 ಕುದುರೆಗಳಿಗೆ ಮಾತ್ರ ಸ್ಥಳಾವಕಾಶ ವಿದ್ದು ಈಗ 600 ಕುದುರೆಗಳಿವೆ. ಇವುಗಳ ಉಸ್ತುವಾರಿಗಾಗಿ 1800 ಮಂದಿ ಸಿಬ್ಬಂದಿ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿರುವ ಕುದುರೆಗಳನ್ನು ಹಾಗೂ ಅವುಗಳ ಉಸ್ತುವಾರಿ ನೋಡುಕೊಳ್ಳುತ್ತಿರುವವರನ್ನು ಸ್ಥಳಾಂತರಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಅಲ್ಲದೆ ರೇಸ್‌ಕೋರ್ಸ್‌ನಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವು ಮಾಡುವಂತೆ ನಗರ ಪಾಲಿಕೆ ಅಧಿಕಾರಿಗಳಿಗೆ
ಸೂಚಿಸಿದ್ದು, ಕಟ್ಟಡಗಳ ಮಾಲಿಕರಿಗೆ 3 ತಿಂಗಳ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ಕುದುರೆ ಸಾಕಾಣಿಕೆಗೆ
ಕಟ್ಟಿರುವ ಶಾಶ್ವತ ಕಟ್ಟಡಗಳನ್ನು ತೆರವು ಗೊಳಿಸದಿದ್ದರೆ ಕ್ಲಬ್‌ಗ ನೀಡುವ ವಿದ್ಯುತ್‌, ನೀರು ಸರಬರಾಜು ಸ್ಥಗಿತ ಗೊಳಿಸುವ ಜತೆಗೆ ಇಲ್ಲಿನ ಬಾರ್‌ ಲೈಸೆನ್ಸ್‌ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ ಕುದುರೆ ವಾಸದ ಮನೆಯ ಪರಿಸ್ಥಿತಿಯನ್ನು ಪರಿಶೀಲಿಸಿದ ಸಚಿವರು, ಅವುಗಳ ಅವ್ಯವಸ್ಥೆಯ ಬಗ್ಗೆ
ಸ್ಥಳದಲ್ಲಿದ್ದ ನಗರ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ಒಂದು ವಾರದೊಳಗೆ ಕುದುರೆ ಮನೆಗಳ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ನಿಮ್ಮನ್ನು ಎತ್ತಂಗಡಿ ಮಾಡಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದರು. ಈ ವೇಳೆ ಮಾಜಿ ಮೇಯರ್‌ ಎಂ.ಜೆ. ರವಿಕುಮಾರ್‌, ಪಾಲಿಕೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದ.

ನಗರದ ಕೇಂದ್ರ ಭಾಗದಲ್ಲಿರುವ ಈ ಜಾಗದಲ್ಲಿ ಅನಧಿಕೃತವಾಗಿ ಯಾವುದೇ ಕಟ್ಟಡಗಳನ್ನು ನಿರ್ಮಿಸಬಾರದು. ನಗರಕ್ಕೆ ಸ್ವತ್ಛ ಗಾಳಿ ನೀಡುವ ಜಾಗವಾಗಿ ಉಳಿಸಬೇಕೆಂಬುದು ನನ್ನ ಉದ್ದೇಶ. ಹೀಗಾಗಿ ಯಾವುದೇ
ಒತ್ತಡ ಬಂದರೂ ಅದನ್ನು ಎದುರಿಸಲು ಸಿದ್ದ. ಈ ಸ್ಥಳವನ್ನು ಮಾದರಿ ಗ್ರೀನರಿ ಜಾಗವಾಗಿ ಮಾಡುತ್ತೇವೆ.
 ಸಾ.ರಾ.ಮಹೇಶ್‌, ಪ್ರವಾಸೋದ್ಯಮ ಸಚಿವ

ದೇಶದಲ್ಲಿ ಎಲ್ಲೂ ಕುದುರೆ ಸಾಕಾಣಿಕೆ ಮತ್ತು ರೇಸ್‌ ಕೋರ್ಸ್‌ ಜಾಗ ಪ್ರತ್ಯೇಕವಾಗಿಲ್ಲ. ವಿದೇಶಗಳಲ್ಲಿ ಮಾತ್ರ ಈ ರೀತಿ ನೋಡಲು ಸಾಧ್ಯ. ಕುದುರೆಗಳ ಸಾಕಾಣಿಕೆಗೆ ಮುಕ್ತ ಜಾಗ ಹಾಗೂ 2000 ಮೀ. ಟ್ರ್ಯಾಕ್‌ನಲ್ಲಿ ಅಭ್ಯಾಸ
ಮಾಡಬೇಕು. ಈಜುಕೊಳದಲ್ಲಿ ಈಜುವ ತರಬೇತಿ ನೀಡಬೇಕು. ಇಷ್ಟೆಲ್ಲಾ ಸವಲತ್ತುಗಳಿಗೆ ಸರ್ಕಾರದ
ಸಹಕಾರ ಬೇಕಿದೆ.
 ಅನಂತರಾಜೇ ಅರಸ್‌, ಕಾರ್ಯದರ್ಶಿ, ಮೈಸೂರು ರೇಸ್‌ ಕ್ಲಬ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ