ವುಶು ಕಲಿತರೆ ಉದ್ಯೋಗದಲ್ಲಿ ಮೀಸಲಾತಿ

Team Udayavani, Jul 13, 2019, 3:00 AM IST

ಮೈಸೂರು: ರಾಜ್ಯ ಮಟ್ಟದ 18ನೇ ವುಶು ಚಾಂಪಿಯನ್‌ ಶಿಪ್‌ಗೆ ಶುಕ್ರವಾರ ಚಾಲನೆ ನೀಡಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

ಮೈಸೂರು ವುಶು ಸಂಸ್ಥೆ ಕರ್ನಾಟಕ ರಾಜ್ಯ ವುಶು ಸಂಸ್ಥೆಯ ಸಹಯೋಗದಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ನಾಲ್ಕು ದಿನಗಳ ರಾಜ್ಯ ಮಟ್ಟದ ಪಂದ್ಯಾವಳಿಗೆ ಮಹಾಪೌರರಾದ ಪುಷ್ಪಲತಾ ಜಗನ್ನಾಥ್‌ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಉತ್ತಮ ಪ್ರದರ್ಶನ ನೀಡುವತ್ತ ತಮ್ಮ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದರು.

ಮೈಸೂರು ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎ.ಧರ್ಮ ಮಾತನಾಡಿ, ಸಾಂಸ್ಕೃತಿಕ ನಗರಿಯಲ್ಲಿ 2ನೇ ಬಾರಿಗೆ ರಾಜ್ಯಮಟ್ಟದ ವುಶು ಪಾಂದ್ಯಾವಳಿ ಆಯೋಜಿಸಲಾಗಿದ್ದು, ಫೈಟರ್‌ಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ದಸರಾ ಕ್ರೀಡಾಕೂಟದಲ್ಲಿಯೂ ವುಶು ಪಂದ್ಯಾವಳಿ ಏರ್ಪಡಿಸಲಾಗಿತ್ತು ಎಂದರು.

ವಿದ್ಯಾರ್ಥಿಗಳಿಗೆ ವುಶು ಬಗ್ಗೆ ಹೆಚ್ಚಿನ ಅರಿವಿಲ್ಲ. ಇದನ್ನು ಕಲಿತರಿಗೆ ವಿದ್ಯಾರ್ಥಿಗಳಿಗೆ ಅನೇಕ ಅನುಕೂಲವಿದೆ. ಸರ್ಕಾರಿ ಉದ್ಯೋಗದಲ್ಲಿ ಮೀಸಲು ಇದ್ದು, ವಿದ್ಯಾರ್ಥಿ ವೇತನ ಸಿಗುತ್ತದೆ. ಎಂಜಿನಿಯರಿಂಗ್‌, ವೈದ್ಯಕೀಯ ಸೀಟು ದೊರೆಯುತ್ತಿದ್ದೆ. ಆದ್ದರಿಂದ ವಿದ್ಯಾರ್ಥಿಗಳು ಈ ಕ್ರೀಡೆಯ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಭಾರತೀಯ ವುಶು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಮನೀಶ್‌ ಕಾಕರ್‌, ವಿಶ್ವಮಾನವ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಎಂ.ಜೆ.ಸುರೇಶ್‌ ಗೌಡ, ವಕೀಲರಾದ ಶೋಭಾ, ಅಪೋಲೋ ಆಸ್ಪತ್ರೆಯ ವೈದ್ಯ ಡಾ.ನಾರಾಯಣ ಹೆಗಡೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್‌, ಅಶೋಕ ಡಿ.ಮೊಕಾಶಿ, ಸಂಗಮೇಶ್‌ ಲಾಯದಗುಂಡಿ ಮುಂತಾದವರು ಭಾಗವಹಿಸಿದ್ದರು.

ಏನಿದು ವುಶು ಕ್ರೀಡೆ?: ಸೈಕಂಡೊ, ಜುಡೋ, ಕಲರಿ, ಕುಂಗ್‌ಫ‌ು, ಕರಾಟೆ, ಕುಸ್ತಿಯನ್ನು ಒಳಗೊಂಡಿರುವ ವುಶು ಮಿಶ್ರ ಸಮರಕಲೆ. ಸ್ಯಾನ್‌ಶೋ ಮತ್ತು ಆ್ಯಕ್ಷನ್‌ ಎರಡೂ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ನಾಲ್ಕು ದಿನಗಳ ರಾಜ್ಯ ಮಟ್ಟದ ವುಶು ಚಾಂಪಿಯನ್‌ ಶಿಪ್‌ನಲ್ಲಿ ಸಬ್‌ ಜೂನಿಯರ್‌ನಲ್ಲಿ ಬಾಲಕ-ಬಾಲಕಿಯರು ಮತ್ತು ಸೀನಿಯರ್‌ ವಿಭಾಗದಲ್ಲಿ ಮಹಿಳೆಯರು-ಪುರುಷರು ಪ್ರತ್ಯೇಕವಾಗಿ ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಶುಕ್ರವಾರ ಮೊದಲನೇ ಹಂತದ ಪಂದ್ಯಗಳು ನಡೆದವು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ