ಮಕ್ಕಳ ಅನ್ನ ಕಿತ್ತುಕೊಂಡ ಪಾಪದ ಸರ್ಕಾರ: ಡಾ.ಕಲ್ಲಡ್ಕ ಪ್ರಭಾಕರ ಭಟ್‌

Team Udayavani, May 16, 2019, 3:00 AM IST

ಮೈಸೂರು: ಜನ ವಿರೋಧಿಯಾಗಿರುವ ರಾಜ್ಯದ ಸಮ್ಮಿಶ್ರ ಸರ್ಕಾರ ಯಾವತ್ತೋ ಬದಲಾಗಬೇಕಿತ್ತು. ಲೋಕಸಭಾ ಚುನಾವಣಾ ಫ‌ಲಿತಾಂಶದ ನಂತರವಾದರೂ ಈ ಸರ್ಕಾರ ಬದಲಾಗಲಿ ಎಂಬುದು ರಾಜ್ಯದ ಜನರ ಆಶಯವಾಗಿದೆ ಎಂದು ಆರೆಸ್ಸೆಸ್‌ನ ಹಿರಿಯ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದರು.

ಬುಧವಾರ ಮೈಸೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಂತಹ ಸರ್ಕಾರ ಇದ್ದರೆ, ರಾಜ್ಯದ ಆರು ಕೋಟಿ ಜನರು ಬದುಕಲಾಗುತ್ತಾ? ಇಂಥಾ ಸರ್ಕಾರ ಇಟ್ಕೊಂಡು ಮಾಡೋದೇನು? ಈ ಸರ್ಕಾರ ಯಾವತ್ತೋ ಬದಲಾಗಬೇಕಿತ್ತು ಎಂದರು.

22ಕ್ಕಿಂತ ಹೆಚ್ಚು ಸ್ಥಾನ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 22ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಅದು ಸತ್ಯ ಆಗುತ್ತೆ. ಕರಾವಳಿಯಲ್ಲೂ ಬಿಜೆಪಿ ದೊಡ್ಡ ಅಂತರದಿಂದ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುತ್ತೂರಿನ ಶ್ರೀರಾಮ ವಿದ್ಯಾಕೇಂದ್ರದ ಶಾಲೆಗೆ ಈ ಸರ್ಕಾರದಿಂದ ಏನು ಒಳ್ಳೆಯದಾಗುತ್ತೆ?, ಮಕ್ಕಳ ಅನ್ನ ಕಿತ್ತುಕೊಂಡು ಪಾಪದ ಕೆಲಸ ಮಾಡಿದವರ ನೇತೃತ್ವದಲ್ಲೇ ಈ ಸರ್ಕಾರ ನಡೆಯುತ್ತಿದೆ. ಇದು ಅದೇ ಕಂಪನಿಯ ಸರ್ಕಾರ, ಇವರಿದ್ದಾಗ ಶಾಲೆಗೆ ಎಲ್ಲಿ ಒಳ್ಳೆಯದಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ, ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಸಂವಿಧಾನಕ್ಕೆ ವಿರುದ್ಧವಾಗಿ ಯಾವ ಸರ್ಕಾರವನ್ನೂ ವಜಾ ಮಾಡಬಾರದು. ಆದರೆ, ಗೂಂಡಾಗಿರಿ ಮಾಡಿ ಅರಾಜಕತೆ ಸೃಷ್ಟಿ ಮಾಡುವ ಸರ್ಕಾರ ಇರಬಾರದು ಎಂದರು.

ಹಿಂದೆ ಆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡುವ ಕಮ್ಯೂನಿಸ್ಟ್‌ ಸರ್ಕಾರವಿತ್ತು. ಅವರು ಬೇಡ ಎಂದು ಪಶ್ಚಿಮಬಂಗಾಳದ ಜನ ಮಮತಾ ದೀದಿ ಸರ್ಕಾರವನ್ನು ಅಧಿಕಾರಕ್ಕೆ ತಂದರು, ಇವರೂ ಅದೇ ರೀತಿ ಹೋಗುತ್ತಿರುವುದು ಸರಿಯಲ್ಲ ಎಂದರು.

ಯಾವುದೇ ಸಂದರ್ಭದಲ್ಲೂ ವ್ಯಕ್ತಿಗೆ ಮಾತಿನ ಸ್ವಾತಂತ್ರ್ಯವಿದೆ. ಹಾಗೆಂದು ಕೆಟ್ಟರೀತಿಯಲ್ಲಿ ಮಾತನಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಆದರೆ, ಮಾತನಾಡಲೇಬಾರದು ಎನ್ನುವ ಮಮತಾ ಸರ್ಕಾರ ಜನವಿರೋಧಿ, ಸರ್ವಾಧಿಕಾರವಾಗುತ್ತೆ. ತಮ್ಮ ಸರ್ಕಾರ ಏನೂ ಮಾಡಿಲ್ಲ. ಬಿಜೆಪಿ ಇದರ ಲಾಭ ಪಡೆಯಬಾರದು ಎಂದು ಈ ರೀತಿ ಹಿಂಸಾಚಾರಕ್ಕೆ ಇಳಿದಿದ್ದಾರೆ. ಅದೇ ಅವರಿಗೆ ತಿರುಗೇಟಾಗುತ್ತದೆ ಎಂದು ಹೇಳಿದರು.

ನಾಥೂರಾಮ್‌ ಗೂಡ್ಸೆಯನ್ನು ನಟ ಕಮಲಹಾಸನ್‌, ಮೊದಲ ಹಿಂದೂ ಭಯೋತ್ಪಾದಕ ಎಂದಿರುವ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ಅವರು, ಬಹಳ ಜನ ಈ ರೀತಿಯಾಗಿ ಹುಚ್ಚು ಹುಚ್ಚಾಗಿ ಮಾತನಾಡುತ್ತಾರೆ ಅಂಥದ್ದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಆರೆಸ್ಸೆಸ್‌ನವರ್ಯಾರು ಆಕಾಂಕ್ಷಿಗಳಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಆರೆಸ್ಸೆಸ್‌ನವರ್ಯಾರು ಆಕಾಂಕ್ಷಿಗಳಿಲ್ಲ. ರಾಜ್ಯದ ಬಿಜೆಪಿ ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. ಚುನಾವಣಾ ರಾಜಕೀಯ ಪ್ರಕ್ರಿಯೆಯಲ್ಲಿ ಸಂಘದವರಿಲ್ಲ ಎಂದು ಡಾ.ಕಲ್ಲಡ್ಕ ಪ್ರಭಾಕರ ಭಟ್‌ ಸ್ಪಷ್ಟಪಡಿಸಿದರು. ಆಡ್ವಾಣಿ, ಮುರಳಿ ಮನೋಹರ ಜೋಶಿ ಅವರು ದೊಡ್ಡ ಪ್ರಮಾಣದಲ್ಲಿ ಸಂಘಟನೆ ಕಟ್ಟಿದ್ದರಿಂದಲೇ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.

ಕಳೆದ ಬಾರಿ ಬಿಜೆಪಿ ಸರ್ಕಾರ ರಚನೆಯಾಗುವಲ್ಲೂ ಅವರಿಬ್ಬರ ಆಶೀರ್ವಾದವಿದೆ. ಆಡ್ವಾಣಿ, ಮುರಳಿ ಮನೋಹರ ಜೋಶಿ ಅವರನ್ನು ಪಕ್ಷ ಮೂಲೆಗುಂಪು ಮಾಡಿಲ್ಲ. ಈ ಬಗ್ಗೆ ಅಡ್ವಾಣಿ ಅವರು ಎಲ್ಲೂ ಹೇಳಿಲ್ಲ. ಮಾಧ್ಯಮಗಳು ಇಲ್ಲದ್ದನ್ನು ಸೃಷ್ಟಿ ಮಾಡಬಾರದು. ಯಾವುದೇ ವಯಸ್ಸಿನ ನಂತರ ವಿರಾಮ ಬೇಕಾಗುತ್ತೆ. ಹೀಗಾಗಿ ಸಾಕು ಎನಿಸಿರಬಹುದು ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ