ಗೆಲುವಿಗಾಗಿ ಮನೆ ತೊರೆಯುವ ಸಂಕಲ್ಪ ಮಾಡಿ

Team Udayavani, Mar 1, 2019, 7:26 AM IST

ರಾಯಚೂರು: ಲೋಕಸಭೆ ಚುನಾವಣೆಗೆ ಇನ್ನೂ 7 ವಾರ ಕೂಡ ಉಳಿದಿಲ್ಲ. ಚುನಾವಣೆ ಮುಗಿಯುವವರೆಗೂ ಮನೆ ಸೇರುವುದಿಲ್ಲ ಎಂದು ನಾನು ಈಗಾಗಲೇ ನಿರ್ಧರಿಸಿದ್ದು, ನೀವು ಕೂಡ ಪಕ್ಷದ ಗೆಲುವಿಗಾಗಿ ಮನೆ ತೊರೆಯುವ ಸಂಕಲ್ಪ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೋದಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅದಕ್ಕೂ ಮುನ್ನ ದೇಶಾದ್ಯಂತ ಏಕಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಂವಾದ ಕಾರ್ಯಕ್ರಮ ವೀಕ್ಷಿಸಿದರು. 

ದೇಶದ ಪ್ರಧಾನಿ ನರೇಂದ್ರ ಮೋದಿ ಕಳೆದ 5 ವರ್ಷದಿಂದ ರಜೆ ಇಲ್ಲದೇ ಶ್ರಮಿಸುತ್ತಿದ್ದಾರೆ. ನಾವು ಕನಿಷ್ಟ ಪಕ್ಷ ಚುನಾವಣೆ ವೇಳೆಯಲ್ಲಾದರೂ ಪಕ್ಷಕ್ಕಾಗಿ ಶ್ರಮಿಸಬೇಕು. ನಾನು ಈಗಾಗಲೇ 10-12 ದಿನಗಳಿಂದ ಪ್ರವಾಸ ಆರಂಭಿಸಿದ್ದೇನೆ. ಚುನಾವಣೆ ಮುಗಿಯುವವರೆಗೂ ಮನೆ ಸೇರುವುದಿಲ್ಲ. ನೀವು ಕೂಡ ಬಿಜೆಪಿ ಗೆಲುವಿಗಾಗಿ, ಪಕ್ಷ ಸಂಘಟನೆಗಾಗಿ ಮನೆ ತೊರೆಯಿರಿ ಎಂದರು. 

ಪ್ರಧಾನಿ ಮೋದಿಯವರ ಸಾಧನೆಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸವಾಗಬೇಕು. ಪ್ರತಿ ಕಾರ್ಯಕರ್ತರು ತಮ್ಮ ಮನೆ ಮೇಲೆ ಪಕ್ಷದ ಧ್ವಜ ಹಾರಿಸಬೇಕು. ಮಾ.2ರಂದು ಒಂದು ಸಾವಿರ ಬೈಕ್‌ಗಳ ಮೂಲಕ ರ್ಯಾಲಿ ನಡೆಸಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇನ್ನೂ ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ನಾವು ಅಧಿಕಾರ ಚುಕ್ಕಾಣಿ ಹಿಡಿಯಬಹುದಿತ್ತು. ಸಾಕಷ್ಟು ಕ್ಷೇತ್ರಗಳಲ್ಲಿ ಕಡಿಮೆ ಅಂತರದಲ್ಲಿ ಸೋಲನುಭವಿಸಿದ್ದೇವೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕರೆ ನೀಡಿದರು.

ರಾಜ್ಯ ಸಮಿತಿ ಮುಖಂಡ ಎನ್‌.ರವಿಕುಮಾರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ 4250ಕ್ಕೂ ಅಧಿಕ ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರೊಂದಿಗೆ ನೇರ ಸಂವಾದ ನಡೆಸಿದ್ದಾರೆ. ಇದು ದಾಖಲೆ ಕಾರ್ಯಕ್ರಮವಾಗಿದೆ. ಪ್ರಧಾನಿ ಮೋದಿ, ಅಮಿತ್‌ ಶಾ ದೇಶಾದ್ಯಂತ ಸಂಚರಿಸಿದರೆ, ಬಿಎಸ್‌ವೈ ಸೇರಿ ಅನೇಕ ನಾಯಕರು ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಅದರಂತೆ ಕಾರ್ಯಕರ್ತರು ನಿಮ್ಮ ನಿಮ್ಮ ಬೂತ್‌ ಮಟ್ಟದಲ್ಲಿ ಸಂಚರಿಸಿ ಪಕ್ಷ ಬಲಪಡಿಸಿ ಎಂದರು.

ರಾಯಚೂರು ಜಿಲ್ಲಾ ಉಸ್ತುವಾರಿ ಹಾಲಪ್ಪ ಆಚಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಶಾಸಕರಾದ ಶಿವರಾಜ ಪಾಟೀಲ, ಕೆ.ಶಿವನಗೌಡ ನಾಯಕ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್‌, ಎ.ಪಾಪಾರೆಡ್ಡಿ, ಶಿಸ್ತು ಸಮಿತಿ ಮುಖಂಡ ಎನ್‌. ಶಂಕ್ರಪ್ಪ, ಮುಖಂಡರಾದ ತ್ರಿವಿಕ್ರಮ ಜೋಶಿ, ಆರ್‌.ತಿಮ್ಮಯ್ಯ, ಅಶೋಕ ಗಸ್ತಿ, ದೊಡ್ಡಮಲ್ಲೇಶ, ರಮಾನಂದ ಯಾದವ, ಶಶಿಧರ ಮಸ್ಕಿ ಸೇರಿ ಇತರರು ಇದ್ದರು.

ಸಂಕಲ್ಪ ಯಾತ್ರೆ: ಲೋಕಸಭೆ ಚುನಾವಣೆ ಪ್ರಚಾರಾರ್ಥ ಬಿಜೆಪಿಯಿಂದ ಮೋದಿ ವಿಜಯ ಸಂಕಲ್ಪ ಯಾತ್ರೆ ನಡೆಸಲಾಯಿತು. ನಗರದ ಚಂದ್ರಮೌಳೇಶ್ವರ ವೃತ್ತದಿಂದ 100 ಮೀಟರ್‌ ಅಂತರದಲ್ಲಿರುವ ಖಾಸಗಿ ಹೋಟೆಲ್‌ವರೆಗೂ ಯಾತ್ರೆ ನಡೆಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿ ಗಣ್ಯರು ಪಾಲ್ಗೊಂಡಿದ್ದರು. ಇದನ್ನು ಬಸವೇಶ್ವರ ವೃತ್ತದಿಂದ ನಡೆಸುವ ಉದ್ದೇಶವಿತ್ತು. ಆದರೆ ಸಮಯಾಭವದಿಂದ ರದ್ದುಗೊಳಿಸಲಾಯಿತು.


ಈ ವಿಭಾಗದಿಂದ ಇನ್ನಷ್ಟು

  • ಮಾನ್ವಿ: ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಎಂದು ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ ಹೇಳಿದರು. ಪಟ್ಟಣದ...

  • ಚಿಂಚೋಳಿ: ಚಿಂಚೋಳಿ ಮೀಸಲು(ಪಜಾ)ವಿಧಾನಸಭಾ ಮತಕ್ಷೇತ್ರಕ್ಕೆ ಮೇ 19ರಂದು ಬೆಳಗ್ಗೆ 7:00ರಿಂದ ಸಂಜೆ 6:00ರ ವರೆಗೆ ನಡೆಯುವ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ...

  • ಲಿಂಗಸುಗೂರು: ಸರ್ಕಾರ ರೈತರು, ಜಾನುವಾರು ಸಾಕಾಣಿಕೆದಾರರ ಅನುಕೂಲಕ್ಕಾಗಿ ಹಲವು ಪರಿಕರಗಳನ್ನು ಒದಗಿಸಿದೆ. ಆದರೆ ಇಲ್ಲಿನ ಅಧಿಕಾರಿಗಳು ಅವುಗಳನ್ನು ಅರ್ಹರಿಗೆ...

  • ದೇವದುರ್ಗ: ರೈತರ ಜಾನುವಾರುಗಳಿಗೆ ಮೇವಿನ ಅಗತ್ಯವಿದೆ. ಹಾಗಾಗಿ ಅರಕೇರಾ ಗ್ರಾಮದಲ್ಲಿ ಮೇವಿನ ಬ್ಯಾಂಕ್‌ ಸ್ಥಾಪಿಸಲಾಗಿದೆ ಎಂದು ತಹಶೀಲ್ದಾರ್‌ ಮಲ್ಲಿಕಾರ್ಜುನ...

  • ಸಿಂಧನೂರು: ನಗರದಲ್ಲಿ ಕಳೆದ 7 ವರ್ಷದಿಂದ ಆರಂಭವಾದ 24x7 ಕುಡಿಯುವ ನೀರು, ಯುಜಿಡಿ ಹಾಗೂ ನಗರೋತ್ಥಾನ ರಸ್ತೆಗಳ ಕಾಮಗಾರಿಗಳು ಇಲ್ಲಿವರೆಗೂ ಪೂರ್ಣಗೊಂಡಿಲ್ಲ. ಅಧಿಕಾರಿಗಳು...

ಹೊಸ ಸೇರ್ಪಡೆ