370, 35ಎ ವಿಧಿ ರದ್ದು: ಬಿಜೆಪಿ ವಿಜಯೋತ್ಸವ

ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಐತಿಹಾಸಿಕ ನಿರ್ಧಾರ • ಒಕ್ಕೂಟದಡಿ ಎಲ್ಲಾ ರಾಜ್ಯಗಳು ಸಮಾನ

Team Udayavani, Aug 6, 2019, 4:50 PM IST

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾಮನಗರದಲ್ಲಿ ವಿಜಯೋತ್ಸವ ಆಚರಿಸಿದರು.

ರಾಮನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ರಮದಿಂದ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಆಚರಿಸಿದರು.

ಸೋಮವಾರ ಸಂಜೆ ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಪಟಾಕಿ ಸಿಡಿಸಿ, ನಾಗರಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.

ಮಳೆ ನಡುವೆಯೂ ಸಂಭ್ರಮ: ತ್ರಿವರ್ಣ ಧ್ವಜವನ್ನು ಹಿಡಿದ ಕಾರ್ಯಕರ್ತರು, ಜಿನುಗುತ್ತಿದ್ದ ಮಳೆಯ ನಡುವೆಯೂ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ಷಾ ಪರ ಘೋಷಣೆಗಳನ್ನು ಕೂಗಿ, ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಿರ್ಧಾರ ಐತಿಹಾಸಿಕ ಎಂದು ಸಂಭ್ರಮಿಸಿದರು.

ಎಲ್ಲರಿಗೂ ಒಂದೇ ಕಾನೂನು: ಈ ವೇಳೆ ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಪ್ರವೀಣ್‌ಗೌಡ ಮಾತನಾಡಿ, ಭಾರತ ಒಂದು ಒಕ್ಕೂಟ ವ್ಯವಸ್ಥೆಯಲ್ಲಿದೆ. ಒಕ್ಕೂಟದಡಿ ಎಲ್ಲಾ ರಾಜ್ಯಗಳು ಸಹ ಸಮಾನ. ಎಲ್ಲಾ ದೇಶವಾಸಿಗಳು ಸಮಾನರು. ಎಲ್ಲರಿಗೂ ಒಂದೇ ಕಾನೂನು. ಇದೇ ಆಶಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಅಮಿತ್‌ ಷಾ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ಮತ್ತು 35(ಎ)ನೇ ವಿಧಿಯನ್ನು ರದ್ದು ಮಾಡಿದ್ದಾರೆ. ಇದಕ್ಕೆ ರಾಷ್ಟ್ರಪತಿಗಳು ಸಹ ಅಂಕಿತ ಹಾಕಿದ್ದಾರೆ. ಸ್ವತಂತ್ರ ಭಾರತದಲ್ಲಿ ಇದೊಂದು ಐತಿಹಾಸಿಕ ದಿನ. ಜಮ್ಮು ಮತ್ತು ಕಾಶ್ಮೀರ ಸಹ ಇತರ ರಾಜ್ಯಗಳಂತೆ ಒಂದೇ ಸಂವಿಧಾನದಡಿ ಬರಬೇಕು ಎಂಬ ದೇಶವಾಸಿಗಳ ದಶಕಗಳ ಆಶಯ ಈಡೇರಿದೆ ಎಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ: ಉಗ್ರರ ತಾಣವಾಗಿದ್ದ ಜಮ್ಮು ಮತ್ತು ಕಾಶ್ಮೀರ ಇನ್ನು ಮುಂದೆ ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಡಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲಸಬೇಕು ಎಂಬುದು ಆ ನೆಲದಲ್ಲಿ ವಾಸಿಸುತ್ತಿರುವ ನಾಗರಿಕರ ಆಶಯವಿದೆ. ಆದರೆ, ಪಾಕಿಸ್ತಾನದ ಕುತಂತ್ರ ಮತ್ತು ಭಯೋತ್ಪಾದಕರಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಮೋದಿ ಅವರ ಆಡಳಿತದಲ್ಲಿ ಇದೀಗ ಜಮ್ಮ ಮತ್ತು ಕಾಶ್ಮೀರದಲ್ಲಿ ಎಲ್ಲವೂ ಸರಿಹೋಗಲಿದೆ ಎಂಬ ವಿಶ್ವಾಸವಿದೆ ಎಂದರು.

ಎಲ್ಲಾ ಸದಸ್ಯರಿಗೆ ಅಭಿನಂದನೆ: ವಿಶೇಷ ಸ್ಥಾನದ ಮಾನದ ರದ್ದತಿಯಂತಹ ಮಹತ್ವದ ನಿರ್ಧಾರವನ್ನು ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ಷಾ ಹಾಗೂ ಇವರೊಂದಿಗೆ ಸಹಕರಿಸಿದ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದರು.

ವಿಜಯೋತ್ಸವದಲ್ಲಿ ನಗರ ಮಹಿಳಾ ಬಿಜೆಪಿ ಘಟಕದ ಅಧ್ಯಕ್ಷೆ ಚಂದ್ರಕಲಾ, ನಗರಸಭೆಯ ಮಾಜಿ ಅಧ್ಯಕ್ಷ ಬಿ.ನಾಗೇಶ್‌, ನಗರ ಬಿಜೆಪಿ ಘಟಕದ ಅಧ್ಯಕ್ಷ ಮಂಜು, ಪ್ರಮುಖರಾದ ಭರತ್‌ರಾಜು, ರಮೇಶ್‌, ಚಂದ್ರಶೇಖರ ರೆಡ್ಡಿ, ಲೋಕೇಶ್‌, ಚನ್ನಪ್ಪ, ಅನಿಲ್ಕುಮಾರ್‌, ವಿನೋದ್‌ ಭಗತ್‌ ಮುಂತಾದವರು ಭಾಗವಹಿಸಿದ್ದರು.

ಸೈನಿಕರಿಂದ ಮಾತ್ರ ಜಮ್ಮು-ಕಾಶ್ಮೀರ ಉಳಿವು:

ಸೈನಿಕರಿಂದ ಮಾತ್ರ ಜಮ್ಮು -ಕಾಶ್ಮೀರ ಉಳಿದಿದೆ ಹೊರತು, ಯಾವುದೇ ರಾಜಕೀಯ ವ್ಯಕ್ತಿಗಳು ಅಥವಾ ಪಕ್ಷಗಳಿಂದ ಅಲ್ಲ. ರಾಜಕೀಯ ಇಚ್ಛಾಶಕ್ತಿ ಇಲ್ಲದೇ 370, 35ಎ ವಿಧಿ ರದ್ದಿಗೆ ಅಸಾಧ್ಯವಾಗಿತ್ತು. ಬಿಜೆಪಿ ಸರ್ಕಾರ 370ನೇ ವಿಧಿಯನ್ನು ಕಿತ್ತು ಹಾಕಿರುವುದು ಐತಿಹಾಸಿಕ ದಿನವಾಗಿದೆ ಎಂದು ಪತಂಜಲಿ ಯೋಗದ ಪುಟ್ಟರಾಜು ತಿಳಿಸಿದರು. ಕೇಂದ್ರ ಸರ್ಕಾರ ಸಂವಿಧಾನದ 370 ಮತ್ತು 35 ಎ ವಿಧಿಯನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಹಿಂದು ಜಾಗರಣ ವೇದಿಕೆ ಹಾಗೂ ಆರ್‌ಎಸ್‌ಎಸ್‌ ಯ ಕಾರ್ಯಕರ್ತರು ನಡೆಸಿದ ಸಂಭ್ರಮ ಆಚರಣೆಯಲ್ಲಿ ಮಾತನಾಡಿದ ಅವರು, 1954ರಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊಡುವ 370ನೇ ವಿಧಿಯನ್ನು ಯಾರ ಅನುಮತಿ ಇಲ್ಲದೇ ಅಂದಿನ ಪ್ರಧಾನಿ ನೆಹರೂ ನೀಡಿದರು. ಅಂದಿನಿಂದ ಇಂದಿನವರೆಗೂ ಜಮ್ಮು-ಕಾಶ್ಮೀರ ಸೈನಿಕರಿಂದ ಉಳಿದಿದೆ. ಕೇಂದ್ರ ಸರ್ಕಾರ 370ನೇ ವಿಧಿಯನ್ನು ಕಿತ್ತು ಹಾಕಿರುವುದು ಐತಿಹಾಸಿಕ ಮಹತ್ವದ ದಿನವಾಗಿದೆ. ಎಲ್ಲಾ ಭಾರತೀಯರು ತಲೆ ಎತ್ತಿ ನಿಲ್ಲುವ ದಿನ ಎಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಶಿವರಾಮು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶ್ರೀನಿವಾಸು, ವಿನಯ್‌, ಹಿಂದು ಜಾಗರಣ ವೇದಿಕೆಯ ಪದಾಧಿಕಾರಿಗಳು, ಆರ್‌ಎಸ್‌ಎಸ್‌ ಸ್ವಯಂಸೇವಕರು ಹಾಜರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ