ಅಂಗವಿಕಲರ ಪ್ರಮಾಣಪತ್ರ ಪರಿಶೀಲನೆಗೆ ಕ್ರಮ

ಅರ್ಹರಿಗೆ ನ್ಯಾಯ ಒದಗಿಸಲು ತಾಕೀತು

Team Udayavani, Jun 16, 2019, 4:40 PM IST

ಸೊರಬ: ಶಾಸಕ ಕುಮಾರ್‌ ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ತ್ತೈಮಾಸಿಕ ಕೆಡಿಪಿ ಸಭೆ ನಡೆಯಿತು.

ಸೊರಬ: ತಾಲೂಕಿನಾದ್ಯಂತ ಅಂಕವಿಕಲರಿಗೆ ದೊರೆಯುತ್ತಿರುವ ಸರ್ಕಾರದ ಯೋಜನೆಗಳನ್ನು ಅರ್ಹರಲ್ಲದವರು ಪಡೆಯುತ್ತಿರುವ ಬಗ್ಗೆ ಮಾಹಿತಿ ಇರುವುದರಿಂದ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಅಂಗವಿಕಲರ ಪ್ರಮಾಣ ಪತ್ರ ಪರಿಶೀಲಿಸಲು ಶೀಘ್ರದಲ್ಲೇ ಸಮಾವೇಶ ಹಮ್ಮಿಕೊಳ್ಳುವಂತೆ ತಹಶೀಲ್ದಾರ್‌, ಇಒ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕ ಕುಮಾರ್‌ ಬಂಗಾರಪ್ಪ ಸೂಚಿಸಿದರು.

ಪಟ್ಟಣದ ರಂಗ ಮಂದಿರದಲ್ಲಿ ಶನಿವಾರ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುಮಾರು 2632 ಜನರು ಅಂಗವಿಕಲರಿಗೆ ಸಂಬಂಧಪಟ್ಟ ಇಲಾಖೆ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಿಸಿದೆ. ಇದರಲ್ಲಿ ಅರ್ಧದಷ್ಟು ಜನರು ಅರ್ಹರಲ್ಲದವರು ಅಂಗವಿಕಲ ಪ್ರಮಾಣ ಪತ್ರ ಪಡೆದಿದ್ದಾರೆ. ಆರು ಕೈ ಬೆರಳು ಹೊಂದಿದವರಿಗೆ ಅಂಗವಿಕಲ ಗುರುತಿನ ಚೀಟಿ ವಿತರಿಸಲಾಗಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಅಭ್ಯರ್ಥಿ ದೇಹ ಪರಿಶೀಲನೆ ಮಾಡಿ ವಿಚಾರಣೆ ಮಾಡುವ ವೈದ್ಯರ ಲೋಪವು ಮೇಲ್ನೋಟಕ್ಕೆ ಕಂಡು ಬರುವುದರಿಂದ ವೈದ್ಯರ ಸಮ್ಮುಖದಲ್ಲಿ ತಾಲೂಕಿನ ಎಲ್ಲ ಅಂಗವಿಕಲರನ್ನು ಒಟ್ಟುಗೂಡಿಸಿ ಪ್ರಮಾಣಪತ್ರ ಪರಿಶೀಲಿಸಿ, ಅನರ್ಹರಿಗೆ ದೊರೆತಿರುವ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಅರ್ಹರಿಗೆ ನ್ಯಾಯ ಒದಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವರ್ಷದಿಂದ ವರ್ಷಕ್ಕೆ ಮಳೆ ಕೊರತೆ ಎದುರಾಗುತ್ತಿರುವುದರಿಂದ ಕಾಂಪೌಂಡ್‌ ಹೊಂದಿರುವ ಸರ್ಕಾರಿ ಕಟ್ಟಡಗಳ ಆವರಣದಲ್ಲಿ ಹಸಿರೀಕಣ ಮಾಡಲು ಅರಣ್ಯಾಧಿಕಾರಿಗಳು ನಿಗಾ ವಹಿಸಬೇಕು. ಸಂಪೂರ್ಣ ಅರಣ್ಯ ಹೆಚ್ಚಿಸಲು ಸರ್ಕಾರಿ ಕಟ್ಟಡಗಳ ಆವರಣ ಹಾಗೂ ಬಯಲು ಪ್ರದೇಶದಲ್ಲಿ ಸಸಿ ನೆಡಿಸಲು ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ಗ್ರಾಪಂ ಸಹಕಾರ ಪಡೆದು ನೀರಿನ ವ್ಯವಸ್ಥೆ ಮಾಡಿಕೊಂಡು ಗಿಡಗಳನ್ನು ಸಂರಕ್ಷಿಸಲು ಆದ್ಯತೆ ನೀಡುವಂತೆ ಅರಣ್ಯಾಧಿಕಾರಿಗಳು ಸೂಚಿಸಿದರು.

ನಾಮ ನಿರ್ದೇಶನ ಸದಸ್ಯ ಪರಸಪ್ಪ ಕೊಡಕಣಿ ಮಾತನಾಡಿ, ಈಗಾಗಲೇ ಹಸಿರೀಕರಣವನ್ನು ಎಷ್ಟು ಪ್ರಮಾಣದಲ್ಲಿ ಮಾಡಲಾಗಿದೆ. ನೆಟ್ಟಿರುವ ಗಿಡಗಳಲ್ಲಿ ಎಷ್ಟು ನಾಶವಾಗಿವೆ. ಎಷ್ಟು ಗಿಡಗಳನ್ನು ಸಂರಕ್ಷಣೆ ಮಾಡಲಾಗಿದೆ ಎಂದು ಮುಂದಿನ ಕೆಡಿಪಿ ಸಭೆಯಲ್ಲಿ ಅಂಕಿ-ಅಂಶಗಳ ಮಾಹಿತಿ ನೀಡಿ ಎಂದು ಮನವಿ ಮಾಡಿದರು.

ಸರ್ಕಾರಿ ಶಾಲಾ- ಕಾಲೇಜುಗಳ ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟದ ಮರಳನ್ನು ಬಳಸುತ್ತಿಲ್ಲ. ಇದರಿಂದ ಕೆಲವೇ ದಿನಗಳಲ್ಲಿ ಗೋಡೆ ಬಿರುಕು ಕಾಣಿಸಿಕೊಂಡು ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಬಿಇಒ ಮಂಜುನಾಥ್‌ ಸಭೆಯ ಗಮನಕ್ಕೆ ತಂದಾಗ ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ಮಾಡುವಂತಿಲ್ಲ. ಕಾಮಗಾರಿ ಪ್ರಾರಂಭಿಸುವ ಮುನ್ನ ಸಂಬಂಧಪಟ್ಟ ಶಾಲಾ ಮುಖ್ಯಸ್ಥರೊಂದಿಗೆ ಚರ್ಚಿಸಿ, ಸಲಹೆ ಪಡೆಯುವಂತೆ ಸೂಚಿಸಿದ ಶಾಸಕರು, ತಾಲೂಕಿನ ಚಿಟ್ಟೂರು, ಹರೀಶಿ, ಹಳೇಸೊರಬ ಗ್ರಾಮಗಳಲ್ಲಿ ಪಿಯು ಕಾಲೇಜು ಹಾಗೂ ಚಂದ್ರಗುತ್ತಿ ಗ್ರಾಮದಲ್ಲಿ ಪದವಿ ಕಾಲೇಜು ಸ್ಥಾಪನೆ ಬಗ್ಗೆ ಚಿಂತನೆ ನಡೆಸಲಾಗಿದ್ದು, ಕಂದಾಯ ಅಧಿಕಾರಿಗಳು ನಿವೇಶನಕ್ಕೆ ಸ್ಥಳ ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದರು.

ತಾಪಂ ಅಧ್ಯಕ್ಷೆ ನಯನಾ, ಉಪಾಧ್ಯಕ್ಷ ಸುರೇಶ್‌ ಹಾವಣ್ಣನವರ್‌, ಜಿಪಂ ಸದಸ್ಯರಾದ ಸತೀಶ್‌, ತಾರಾ ಶಿವಾನಂದಪ್ಪ, ಶಿವಲಿಂಗಗೌಡ, ರಾಜೇಶ್ವರಿ ಗಣಪತಿ, ಇಒ ಸಿದ್ದಲಿಂಗಯ್ಯ, ತಹಶೀಲ್ದಾರ್‌ ಶ್ರೀಧರಮೂರ್ತಿ ಮತ್ತಿತರರು ಇದ್ದರು.

ಜಿಲ್ಲಾ ಅಂಗವಿಕಲ ಕಲ್ಯಾಣ ಸಂಪರ್ಕ ಅಧಿಕಾರಿ ಲೋಕೇಶ್‌ ಕಚೇರಿಗೆ ಕುಡಿದು ಬರುತ್ತಿರುವ ಬಗ್ಗೆ ಮಾಹಿತಿ ತಿಳಿದಿದ್ದ ಶಾಸಕರು, ಕುಡಿಯಲು ನಿನಗೆ ಏನಾಗಿದೆ. ಎಷ್ಟು ಜನ ಅಂಗವಿಕಲರಿದ್ದಾರೆ ಮಾಹಿತಿ ನೀಡು ಎಂದು ಕೇಳಿದಾಗ ತಡಬಡಾಯಿಸಿದರು. ಆಕ್ರೋಶಗೊಂಡ ಶಾಸಕರು, ಸಭೆಗೆ ನೀರು ಕುಡಿದು ಬಂದಿಯೋ ಅಥವಾ ಎಣ್ಣೆ ಕುಡಿದು ಬಂದಿರುವೆಯಾ ಎಂದು ತರಾಟೆಗೆ ತೆಗೆದುಕೊಂಡರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ