ಸುವಿಧಾ ಸ್ಯಾನಿಟರಿ ಪ್ಯಾಡ್‌ ಕೊರತೆ

ಪಿಎಂ ಜನೌಷಧ ಕೇಂದ್ರದಲ್ಲಿ ಸಿಗುತ್ತಿಲ್ಲ ಪ್ಯಾಡ್‌ಮಹಿಳೆಯರು-ಯುವತಿಯರ ಪರದಾಟ

Team Udayavani, Sep 30, 2019, 12:16 PM IST

ಸಿದ್ದಯ್ಯ ಪಾಟೀಲ
ಸುರಪುರ: ಮಹಿಳೆಯರ ಆರೋಗ್ಯದ ಶುಚಿತ್ವ ಕಾಪಾಡಿಕೊಳ್ಳಲು ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರದಲ್ಲಿ ಸುವಿಧಾ ಸ್ಯಾನಿಟರಿ ಪ್ಯಾಡ್‌ ಕೊರತೆ ಉಂಟಾಗಿದ್ದು, ಖಾಸಗಿ ಔಷಧಾಲಯಗಳಲ್ಲೂ ಸಮರ್ಪಕವಾಗಿ ದೊರೆಯುತ್ತಿಲ್ಲ. ಹೀಗಾಗಿ ಯುವತಿಯರು, ಮಹಿಳೆಯರು ಪರದಾಡುವಂತಾಗಿದೆ.

ಲೋಕಾಸಭಾ ಚುನಾವಣಾ ಸಂದರ್ಭದಲ್ಲಿ ಘೋಷಿಸಿದಂತೆ ಕೇಂದ್ರ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ಮಹಿಳೆಯರ ಆರೋಗ್ಯದ ಶುಚಿತ್ವದ ಹಿನ್ನೆಲೆಯಲ್ಲಿ ಹೊಸ ಹೆಜ್ಜೆಯಿಟ್ಟು ಅಗ್ಗದ ದರದಲ್ಲಿ ಪಿಎಂ ಜನೌಷಧ ಕೇಂದ್ರಗಳಿಗೆ ಸುವಿಧಾ ಹೆಸರಿನ ಸ್ಯಾನಿಟರಿ ಪ್ಯಾಡ್‌ಗಳನ್ನು ಸರಬರಾಜು ಮಾಡುತ್ತಿತ್ತು. ಇದರಿಂದ ಅತ್ಯಂತ ಕಡಿಮೆ ದರದ ಸ್ಯಾನಿಟರಿ ಪ್ಯಾಡ್‌ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಯಿತು.

ದುಬಾರಿ ಬೆಲೆ: ಈ ಮೊದಲು ಖಾಸಗಿ ಔಷಧಾಲಯಗಳಲ್ಲಿ ದುಬಾರಿ ದರದಲ್ಲಿ ಪ್ಯಾಡ್‌ ಗಳು ದೊರೆಯುತ್ತಿದ್ದವು. ಬಡ ಮಹಿಳೆಯರಿಗೆ ನಿಲುಕದ ತುತ್ತಾಗಿತ್ತು. ಇದರಿಂದಾಗಿ ಬಡ ಯುವತಿಯರು-ಮಹಿಳೆಯರು ಕೊಳ್ಳಲು ಹಿಂದೇಟು ಹಾಕುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅಗ್ಗದ ಬೆಲೆ: ಕೇಂದ್ರ ಸರಕಾರವೂ ಬಡವರಿಗೆ ಕೈಗೆಟಕುವ ಅಗ್ಗದ ದರದಲ್ಲಿ ಪ್ಯಾಡ್‌ಗಳನ್ನು ಸರಬರಾಜು ಮಾಡಲಾಗುತ್ತಿತ್ತು. 4 ಪ್ಯಾಡ್‌ ಹೊಂದಿರುವ ಒಂದು ಪ್ಯಾಕೆಟ್‌ 10 ರೂ.ಗೆ ಲಭ್ಯವಾಗುತ್ತಿತ್ತು. ಇದನ್ನು ಇನ್ನಷ್ಟು ಅಗ್ಗಕ್ಕೆ ಇಳಿಸಿ 1 ರೂ.ಗೆ ಪ್ಯಾಡ್‌ ಲಭ್ಯವಾಗುವಂತೆ ಮಹಿಳೆಯರಿಗೆ ಅನುಕೂಲ ಕಲ್ಪಿಸಿಕೊಡಲಾಗಿತ್ತು.

ಸಿಗದಾದ ಸುವಿಧಾ: ಪಟ್ಟಣದಲ್ಲಿ ಕಳೆದ 15-20 ದಿನಗಳಿಂದ ಪ್ಯಾಡ್‌ಗಳ ಕೊರತೆ ಉಂಟಾಗಿದೆ. ನಿತ್ಯ ಪಿಎಂ ಜನೌಷಧ ಕೇಂದ್ರಗಳಿಗೆ ಮಹಿಳೆಯರು, ಯುವತಿಯರು ತಿರುಗುತ್ತಿದ್ದು, ನಿರಾಶಾಭಾವದಿಂದ ಹಿಂದಿರುಗುತ್ತಿದ್ದಾರೆ. ಬಂದ ಮಹಿಳೆಯರಿಗೆ ಉತ್ತರಿಸುವುದೇ ಜನೌಷಧ ಕೇಂದ್ರಗಳ ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಹಿಳೆಯರಿಗೆ ತೊಂದರೆ: ಶಾಲಾ-ಕಾಲೇಜು, ವಸತಿ ನಿಲಯಗಳಿಗೆ ಆರೋಗ್ಯ ಇಲಾಖೆಯಿಂದಲೇ ಪ್ಯಾಡ್‌ಗಳನ್ನು ಪೂರೈಸಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿನಿಯರಿಗೆ ಕೊರತೆಯುಂಟಾಗಿಲ್ಲ. ಆದರೆ, ಸಾಮಾನ್ಯ ಮಹಿಳೆಯರಿಗೆ, ಯುವತಿಯರಿಗೆ ತೊಂದರೆಯಾಗಿದೆ. ಮಹಿಳೆಯರು ಬಾಯಿಬಿಟ್ಟು ಎಲ್ಲಿ ಹೇಳಿಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ದರದಲ್ಲಿ ಖಾಸಗಿ ಔಷಧ ಅಂಗಡಿಗಳಲ್ಲಿ ಸಿಗುವ ಪ್ಯಾಡ್‌ಗಳ ಖರಿದೀಸಲಾಗುತ್ತಿಲ್ಲ. ಇದು ಬಡ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಬೇಡಿಕೆಯಷ್ಟು ಪೂರೈಸುತ್ತಿಲ್ಲ: ಪ್ರತಿ ತಿಂಗಳು ಏನಿಲ್ಲವೆಂದರೂ 70ರಿಂದ 80 ಸಾವಿರ ಪ್ಯಾಡ್‌ಗಳು ಮಾರಾಟವಾಗುತ್ತಿದ್ದವು. ಇತ್ತೀಚಿಗೆ ಮುಂಗಡವಾಗಿ ಬುಕ್‌ ಮಾಡಿದ್ದರೂ ಕೂಡ ಶೇ. ಅರ್ಧಕ್ಕಿಂತಲೂ ಕಡಿಮೆ ಪೂರೈಸುತ್ತಿದ್ದಾರೆ. ಕೆಲದಿನಗಳಿಂದ ಅದು ಕೂಡ ಸಂಪೂರ್ಣವಾಗಿ ನಿಂತು ಹೋಗಿದೆ. ಇದರಿಂದ ಮಹಿಳೆಯರು ನಿತ್ಯ ಅಂಗಡಿಗೆ ಅಲೆದಾಡುವುದು ಮಾತ್ರ ನಿಂತಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ