ಸಂತನೋದಿದ ಶಾಲೆಯ ಸಂತನೇ ಖರೀದಿಸಿ ಮುನ್ನಡೆಸುವ ಶಾಲೆ

129ವರ್ಷ ಇತಿಹಾಸ ಹೊಂದಿರುವ ಕೆಮುಂಡೇಲು ಅನುದಾನಿತ ಹಿ. ಪ್ರಾ. ಶಾಲೆ

Team Udayavani, Nov 13, 2019, 5:37 AM IST

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಶಾಲೆ ಸ್ಥಾಪನೆ 1890
ದಿ | ಧೂಮಪ್ಪ ಮಾಸ್ಟರ್‌ ಅವರ ಮನೆಯಿಂದ ಪ್ರಾರಂಭ

ಪಡುಬಿದ್ರಿ: ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಎಲ್ಲೂರು ಸುತ್ತಮುತ್ತಲಿನ ಗ್ರಾಮದ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಗೈದು ಇಂದಿಗೂ ಆಂಗ್ಲ ಮಾಧ್ಯಮ ಹಾವಳಿಯ ಮದ್ಯೆ ತಲೆ ಎತ್ತಿ ನಿಂತಿರುವ ಕನ್ನಡ ಮಾಧ್ಯಮದ ಕೆಮುಂಡೇಲು ಅನುದಾನಿತ ಹಿ. ಪ್ರಾ. ಶಾಲೆಯು 129ವರ್ಷಗಳ ಸಾರ್ಥಕತೆಯೊಂದಿಗೆ ಗಮನೀಯವಾಗಿ ಮುಂದುವರಿದಿದೆ.

ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಂತಹಾ ಚುರುಕುಮತಿಯ ಸಂತನಿಗೆ ಪೂರ್ವಾಶ್ರಮದ ಹಯವದನನಾಗಿರುತ್ತಲೇ ಅಕ್ಷರ ಜ್ಞಾನವನ್ನು ಬೋಧಿಸಿದ ವಿದ್ಯಾದೇಗುಲವಿದು. ಇದೀಗ ಅಂತಹಾ ಅಸಾಮಾನ್ಯ ಸಂತನೇ ತಾನೋದಿದ ಶಾಲೆಯನ್ನು ಶ್ರೀ ಪೂರ್ಣ ಟ್ರಸ್ಟ್‌ ಮೂಲಕ 2010ರಲ್ಲಿ ಖರೀದಿಸಿ ಸುಮಾರು 1ಕೋಟಿಗೂ ಮಿಕ್ಕಿ ಧನರಾಶಿಯನ್ನು ಶಾಲೆಯ ಅಭಿವೃದ್ದಿಗಾಗಿ ಪೋಣಿಸಿದ್ದಾರೆ.

ಶಾಲೆಯ ವಿವಿಧ ಸಾಧಕರು
ವಿಶ್ವ ವಿಖ್ಯಾತಿಯನ್ನೂ ಪಡೆದಿರುವ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಹಿತ ನಂದಿಕೂರು ಜನ ಜಾಗೃತಿ ಸಮಿತಿಯ ಗೌರವಾಧ್ಯಕ್ಷ, ದುಬೈ ಉದ್ಯಮಿ ಬಾಲಕೃಷ್ಣ ಶೆಟ್ಟಿ, ಉಡುಪಿಯ ಖ್ಯಾತ ನ್ಯಾಯವಾದಿ ಪ್ರದೀಪ್‌ ಕುಮಾರ್‌, ಖ್ಯಾತ ಹೃದ್ರೋಗ ತಜ್ಞ ಡಾ | ಕೆ. ಜಿ.ಸುರೇಶ್‌ ರಾವ್‌, ವೈದ್ಯಕೀಯ ಕ್ಷೇತ್ರದಲ್ಲಿನ ಡಾ | ಭವಾನಿ ಶಂಕರ್‌, ಡಾ | ಹಿಲ್ಡಾ ಫೆರ್ನಾಂಡಿಸ್‌, ಆಕಾಶವಾಣಿಯ ಕಾನ್ಸೆಪಾr ಫೆರ್ನಾಂಡಿಸ್‌ ಸಹಿತ ವಿವಿದೆಡೆಗಳಲ್ಲಿ ಈ ಶಾಲಾ ಹಳೆ ವಿದ್ಯಾರ್ಥಿಗಳು ಇನ್ನಷ್ಟು ಕ್ಷೇತ್ರದಲ್ಲಿ ಹೆಸರುವಾಸಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ 116 ವಿದ್ಯಾರ್ಥಿಗಳು
ಕೆಮುಂಡೇಲು ಶಾಲೆಯು ಕೇವಲ 9ವಿದ್ಯಾರ್ಥಿಗಳಿಂದ ದಿ | ಧೂಮಪ್ಪ ಮಾಸ್ಟರ್‌ ಅವರ ಮನೆಯಿಂದ ಆರಂಭಗೊಂಡಿತ್ತು. ಮುಂದೆ 380 ವಿದ್ಯಾರ್ಥಿಗಳು 8 ಶಿಕ್ಷಕರ ಸಹಿತ ಉಚ್ಛ್ರಾಯ ಸ್ತಿತಿಯಲ್ಲಿದ್ದ ಈ ಶಾಲೆಯು ಕಾಲ ಗತಿಯಲ್ಲಿ 32 ವಿದ್ಯಾರ್ಥಿ ಬಲವನ್ನು ಹೊಂದಿದ್ದಾಗ ಅನಿವಾರ್ಯವಾಗಿ ಶ್ರೀ ಸುಗುಣೇಂದ್ರ ತೀರ್ಥರ ತೆಕ್ಕೆಗೆ ಈ ಶಾಲೆ ಸೇರಿಕೊಂಡಿತು. ಮುಂದೆ 2015ರಲ್ಲಿ 80ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿ ಇದೀಗ 116ಸಂಖ್ಯಾಬಲದೊಂದಿಗೆ ಮುನ್ನಡೆದಿದೆ.

ಮಠದಿಂದಲೇ ಗೌರವ ಧನ
ಅನುದಾನಿತ ಶಾಲೆಯಾದರೂ ಯಾವುದೇ ಸರಕಾರಿ ಸಂಬಳ ಪಡೆವ ಶಿಕ್ಷಕರಿಲ್ಲಿಲ್ಲ. ಪುತ್ತಿಗೆ ಮಠದಿಂದಲೇ ಗೌರವ ಧನದ ಸಂಭಾವನೆಯನ್ನು ಪಡೆಯುತ್ತಾ 7ಮಂದಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದೂ ಅತಿಶಯೋಕ್ತಿಯಲ್ಲ.

ಶ್ರೀ ಪುತ್ತಿಗೆ ಮಠದಿಂದಲೇ ನಡೆಸಲ್ಪಡುತ್ತಿರುವ ಶಾಲೆಯಲ್ಲಿ 80 ವಿದ್ಯಾರ್ಥಿ ಗಳಿದ್ದಾಗ ಈ ಶಾಲೆಗೆ ಸೇರಿಕೊಂಡಿದ್ದೆ. ಶಾಲೆಗೆ ವಾಹನವೊಂದನ್ನೂ ಶ್ರೀಗಳು ಹೊಂದಿಸಿಕೊಟ್ಟಿದ್ದಾರೆ. ಒಂದನೇ ತರಗತಿಗೆ ಪ್ರತಿಬಾರಿ ಸುಮಾರು 25ವಿದ್ಯಾರ್ಥಿಗಳ ಸೇರ್ಪಡೆಯಾಗುತ್ತಿದ್ದು ಅವರೆಲ್ಲರ ಹೆಸರಲ್ಲಿ ರಾಷ್ಟ್ರೀಕೃತ ಬ್ಯಾಂಕಲ್ಲಿ ತಲಾ 2000ರೂ. ಗಳ ಠೇವಣಿಯನ್ನು ನಾನೇ ಮಾಡುತ್ತಿರುವೆನು. ಇದು ವಿದ್ಯಾರ್ಥಿಯು 10ನೇ ತರಗತಿಯನ್ನು ತೇರ್ಗಡೆ ಹೊಂದಿದಾಗ ಅವನ ಕೈ ಸೇರುತ್ತದೆ. ವಿದ್ಯಾರ್ಥಿ ಸಂಖ್ಯೆಯನ್ನು ಹೆಚ್ಚಿಸುವ ಪ್ರೋತ್ಸಾಹಕ ಕ್ರಮವಾಗಿ ಇದನ್ನು ಮುಂದುವರಿಸಿದ್ದೇನೆ.
– ಜಗನ್ನಾಥ ಶೆಟ್ಟಿ, ಮುಖ್ಯ ಶಿಕ್ಷಕ

ಶಾಲೆ ಮುಚ್ಚುವ ಹಂತದಲ್ಲಿದ್ದಾಗ ತಮ್ಮ ಜೀವಿತಾವಧಿಯಲ್ಲಿ ತೆರೆಗೆ ಸರಿದು ಹೋಗಕೂಡದು ಎಂಬ ದೃಷ್ಟಿಯಿಂದ ನಾವೇ ಖರೀದಿಸಿದ್ದೇವೆ. ಇದೀಗ ಶಾಲಾಭಿವೃದ್ದಿಗೆ ಸುಮಾರು 2ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದನ್ನು ಮುಂದೆ ಹಳೆ ವಿದ್ಯಾರ್ಥಿಗಳು, ವಿದ್ಯಾಪ್ರೇಮಿಗಳ ಸಹಕಾರದೊಂದಿಗೆಪೂರೈಸಲಾಗುವುದೆಂದಿದ್ದಾರೆ.
-“ಹಯವದನ’ ಶ್ರೀ ಸುಗುಣೇಂದ್ರ ತೀರ್ಥರು, ಹಳೆ ವಿದ್ಯಾರ್ಥಿ

-  ಆರಾಮ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ