ಕುಂಟುತ್ತಾ ಸಾಗುತ್ತಿದೆ 40 ಲ.ರೂ. ವೆಚ್ಚದ ಬೃಹತ್‌ ಯೋಜನೆ

Team Udayavani, Dec 24, 2018, 2:30 AM IST

ಕಾಪು: ಕಾಪು – ಬಂಟಕಲ್‌ – ಶಂಕರಪುರ ರಸ್ತೆಯ ಇನ್ನಂಜೆ ಉಂಡಾರಿನಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಯೊಂದು ಶಿಲಾನ್ಯಾಸಗೊಂಡು ವರ್ಷ ಕಳೆದರೂ ಇನ್ನು ಕೂಡ ಪೂರ್ಣಗೊಳ್ಳದೇ ಉಳಿದು ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಪು – ಬಂಟಕಲ್‌ ಲೋಕೋಪಯೋಗಿ ರಸ್ತೆ ನಡುವಿನ ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ತೀರಾ ನಾದುರಸ್ತಿಯಲ್ಲಿದ್ದ ಸೇತುವೆಯ ಪುನರ್‌ ನಿರ್ಮಾಣಕ್ಕೆ 2017ರ ಅಕ್ಟೋಬರ್‌ 12ರಂದು ಶಿಲಾನ್ಯಾಸ ನಡೆಸಲಾಗಿತ್ತು. ಕಾಪು ಕ್ಷೇತ್ರದ ಹಿಂದಿನ ಶಾಸಕ ವಿನಯಕುಮಾರ್‌ ಸೊರಕೆಯವರ ಶಿಫಾರಸ್ಸಿನಂತೆ ನಬಾರ್ಡ್‌ ಆರ್‌ಐಡಿಎಫ್‌ – 22ರಂತೆ ಈ ಸೇತುವೆ ರಚನೆಗೆ 40 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿತ್ತು.

ಶಿಲಾನ್ಯಾಸ ನಡೆದ ದಿನದಂದೇ ಆರಂಭಗೊಂಡಿದ್ದ ಸೇತುವೆ ರಚನೆ ಕಾಮಗಾರಿಯು ಇಲಾಖಾ ನಿಯಮದಂತೆ 6 ತಿಂಗಳಲ್ಲಿ ಅಂದರೆ ಎಪ್ರಿಲ್‌ ತಿಂಗಳೊಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಸ್ಥಳೀಯರ ಒತ್ತಡ ಮತ್ತು ಶಾಸಕರ ನಿರ್ದೇಶನದಂತೆ ಉಂಡಾರು ದೇಗುಲದ ಜೀರ್ಣೋದ್ಧಾರ – ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಂಪರ್ಕಕ್ಕೆ ಅನುಗುಣವಾಗಿ ತರಾತುರಿಯಾಗಿ ಅರೆ ಬರೆ ಸೇತುವೆ ರಚನೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಾರ್ವಜನಿಕ ಅನುಕೂಲಕ್ಕೆ ಬಿಟ್ಟುಕೊಟ್ಟಿದ್ದರು.

ಅರೆಬರೆ ಪೂರ್ಣಗೊಂಡ ಸೇತುವೆಯನ್ನು ಒಮ್ಮೆ ಸಾರ್ವಜನಿಕ ಸಂಪರ್ಕಕ್ಕೆ ಒದಗಿಸಿಕೊಟ್ಟ ಬಳಿಕ ಗುತ್ತಿಗೆದಾರರು 8 ತಿಂಗಳು ಕಳೆದರೂ ಕಾಮಗಾರಿ ಮುಗಿಸುವತ್ತಲೂ ಯೋಚಿಸಿಲ್ಲ. ಕಳೆದ ಮಳೆಗಾಲದ ಸಂದರ್ಭ ನೀರಿನ ಒಳ ಹರಿವಿಗೆ ತೊಂದರೆ ಉಂಟಾದಾಗ ನೀರಿನ ಹರಿವಿಗೆ ಸಮರ್ಪಕ ವ್ಯವಸ್ಥೆ ಮಾಡಿಕೊಡಲಾಗಿದ್ದು, ಸೇತುವೆ ಮತ್ತು ರಸ್ತೆಯ ನಡುವಿನ ಸಂಪರ್ಕಕ್ಕೆ ಜಲ್ಲಿ ಹಾಕಿ ಸಮತಟ್ಟುಗೊಳಿಸಲಾಗಿತ್ತು.

ಏನೇನು ಕಾಮಗಾರಿ ಬಾಕಿ ? 
ಉಂಡಾರು ಸೇತುವೆ ನಿರ್ಮಾಣದ ಕಾಮಗಾರಿ ಆರಂಭಗೊಂಡು 14 ತಿಂಗಳು ಕಳೆದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸೇತುವೆ ರಚನೆಯಾಗಿದ್ದರೂ ಅದರ ಬದಿಯ ದಂಡೆ ನಿರ್ಮಾಣವಾಗಿಲ್ಲ. ಪಕ್ಕದ ಸ್ಲ್ಯಾಬ್‌ಗಳಿಗೆ ಭದ್ರತಾ ಗೋಡೆ, ಸೇತುವೆ ಪ್ರವೇಶಿಸುವ ಎರಡೂ ಬದಿಯ ರಸ್ತೆಗಳ ನಡುವೆ ಸಮರ್ಪಕ ರೀತಿಯಲ್ಲಿ ಡಾಮರು, ಕಾಂಕ್ರೀಟ್‌ ಆಗಲಿ, ನೂತನ ಸೇತುವೆ ಮತ್ತು ಅದಕ್ಕೆ ತಾಗಿಕೊಂಡಿರುವ ರಸ್ತೆ ನಡುವಿನ ಕಾಮಗಾರಿ ಪೂರ್ಣಗೊಂಡಿಲ್ಲ. ಸೇತುವೆಗೆ ತಾಗಿಕೊಂಡಂತೆ ದೈವದ ಗುಡಿಯೊಂದು ಇದ್ದು, ಗುತ್ತಿಗೆದಾರರು ಅದನ್ನೇ ಕಾರಣವಾಗಿಟ್ಟುಕೊಂಡು ಕಾಮಗಾರಿ ಪೂರ್ಣಗೊಳಿಸಲು ನೆಪ ಹುಡುಕುತ್ತಿದ್ದಾರೆ. ಆರಂಭದಲ್ಲಿ ದೈವದ ಕಲ್ಲು ಬೇರೆಡೆಗೆ ಸ್ಥಳಾಂತರಿಸಿಕೊಡುವುದಾಗಿ ಗುತ್ತಿಗೆದಾರರೇ ಭರವಸೆ ನೀಡಿದ್ದು, ಅದರಂತೆ ದೈವದ ಗುಡಿ ಸ್ಥಳಾಂತರಿಸಲು ಮನೆಯವರೂ ಒಪ್ಪಿಗೆ ನೀಡಿದ್ದಾರೆ. ಆದರೆ ಅದಕ್ಕೂ ಗುತ್ತಿಗೆದಾರರು ಸಮರ್ಪಕವಾಗಿ ಸ್ಪಂದ‌ನೆ ನೀಡಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ನೊಟೀಸ್‌
ಕಾಮಗಾರಿ ಪೂರ್ಣಗೊಳಿಸದೇ ಇರುವ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರಿಂದ ದೂರುಗಳು ಬಂದಿವೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದಲೇ ಈ ರೀತಿ ಆಗಿದೆ ಎನ್ನುವುದರ ಬಗ್ಗೆ ಮನವರಿಕೆಯಾಗಿದೆ. ಈ ಬಗ್ಗೆ ಗುತ್ತಿಗೆದಾರ ಮಹಮ್ಮದ್‌ ಆಲಿ ಹೆಜಮಾಡಿ ಅವರಿಗೆ ನೊಟೀಸ್‌ ಜಾರಿ ಮಾಡಲಾಗಿದೆ. ಮತ್ತು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಡಿ. 25ರಿಂದ ಕೆಲಸ ಮುಂದುವರಿಸಿ, ಪೂರ್ಣಗೊಳಿಸಿಕೊಡುವುದಾಗಿ ಗುತ್ತಿಗೆದಾರ ಭರವಸೆ ನೀಡಿದ್ದಾರೆ. ಇಲ್ಲದಿದ್ದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
– ಕೆ.ಎಸ್‌. ಚಂದ್ರಶೇಖರ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ