ಸಕಲೇಶಪುರದಲ್ಲಿ ಅಪಘಾತ: ಕಟಪಾಡಿ ಯುವಕ ಸಾವು

Team Udayavani, Jun 25, 2019, 9:30 AM IST

ಕಾಪು: ಹಾಸನ ಜಿಲ್ಲೆಯ ಸಕಲೇಶಪುರದ ರಾ. ಹೆ. 75ರ ಕುಂಬಾರಕಟ್ಟೆ ಬಳಿ ರವಿವಾರ ಕ್ರೂಸರ್‌ ಮತ್ತು ಬುಲೆಟ್‌ ಮುಖಾಮಖೀ ಢಿಕ್ಕಿ ಹೊಡೆದು ಕಟಪಾಡಿಯ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಟಪಾಡಿ ಅಗ್ರಹಾರ ನಿವಾಸಿ, ಮೆಸ್ಕಾಂನ ನಿವೃತ್ತ ಉದ್ಯೋಗಿ ಶ್ರೀನಿವಾಸ ಪೂಜಾರಿ-ಅರುಣಾ ದಂಪತಿ ಪುತ್ರ ಶ್ರವಣ್‌ ಪೂಜಾರಿ (27) ಮೃತಪಟ್ಟವರು. ಡಿಪ್ಲೊಮಾ ಎಂಜಿನಿಯರ್‌ ಆಗಿದ್ದ ಶ್ರವಣ್‌, ಬೆಂಗಳೂರಿನ ಮಲ್ಟಿನ್ಯಾಶನಲ್‌ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದರು. ಉದ್ಯೋಗಕ್ಕೆ ಹಾಜರಾಗಲೆಂದು ರವಿವಾರ ಕಟಪಾಡಿಯಿಂದ ಬೆಂಗಳೂರಿಗೆ ಬುಲೆಟ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಹಿಂದಿನ ಉದ್ಯೋಗ ತೊರೆದು ಬಂದಿದ್ದರು
ಡಿಪ್ಲೊಮಾ ಮುಗಿಸಿದ ಕೂಡಲೇ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ಅವರು ಎರಡು ವರ್ಷ ದುಡಿದು ಬಳಿಕ ರಾಜೀನಾಮೆ ನೀಡಿ ಊರಿಗೆ ಮರಳಿದ್ದರು. ಬಳಿಕ ಬೆಂಗಳೂರಿನ 24*7 ಮಲ್ಟಿ ನ್ಯಾಶನಲ್‌ ಕಂಪೆನಿಯಿಂದ ಒಳ್ಳೆಯ ಆಫರ್‌ನೊಂದಿಗೆ ಉದ್ಯೋಗ ಸಿಕ್ಕಿದ್ದು, ಅದಕ್ಕೆ ಸೇರಲೆಂದು ಹೊರಟಿದ್ದರು. ಒಂದು ವಾರದ ತರಬೇತಿ ಮುಗಿಸಿ ಶುಕ್ರವಾರ ಕಟಪಾಡಿಗೆ ಬಂದಿದ್ದ ಅವರು ಶನಿವಾರ ಮನೆಯವರ ಜತೆಯಲ್ಲಿ ಊರಿನ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಜೂ. 24ರಂದು ಕೆಲಸಕ್ಕೆ ಹಾಜರಾಗಬೇಕಿತ್ತು.

ಬುಲೆಟ್‌ ಜತೆಗೆ ಕೊನೆಗೊಂಡ ಬದುಕು ಶ್ರವಣ್‌ಗೆ ತನ್ನ ಬುಲೆಟ್‌ ಬಗ್ಗೆ ಅತಿಯಾದ ವ್ಯಾಮೋಹವಿತ್ತು. ಬೆಂಗಳೂರಿನಲ್ಲಿ ಕಚೇರಿ ಮತ್ತು ಪಿಜಿ ನಡುವೆ 15 ಕಿ. ಮೀ. ಅಂತರ‌ವಿದ್ದ ಹಿನ್ನೆಲೆಯಲ್ಲಿ ಊರಿನಲ್ಲಿದ್ದ ಬುಲೆಟ್‌ ಅನ್ನು ಕೊಂಡೊಯ್ಯುತ್ತಿದ್ದರು.

ಕ್ರಿಯಾ ಶೀಲರಾಗಿದ್ದರು
ಅಗ್ರಹಾರ ಶ್ರೀ ದುರ್ಗಾಪರ ಮೇಶ್ವರಿ ಚೆಂಡೆ ಬಳಗದ ಸದಸ್ಯನಾಗಿದ್ದ ಇವರು, ಕಾಪು ಕಲಾಭಿಮಾನಿ ಸಂಘದ ಪದಾಧಿಕಾರಿಯಾಗಿದ್ದರು. ಇತ್ತೀಚೆಗೆ ಕಾಪುನಲ್ಲಿ ನಡೆದಿದ್ದ ಫೆಡರೇಟೆಡ್‌ ಚೆಸ್‌ ಟೂರ್ನಮೆಂಟ್‌ ಆಯೋಜನೆಯಲ್ಲಿ ಸಕ್ರಿಯರಾಗಿದ್ದರು. ಹಿಂದೂ ಜಾಗರಣ ವೇದಿಕೆಯಲ್ಲೂ ಮುಂಚೂಣಿಯಲ್ಲಿದ್ದ ಅವರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ತೊಡಗಿಸಿ ಕೊಂಡಿದ್ದರು. ಅವಿವಾಹಿತರಾಗಿದ್ದ ಶ್ರವಣ್‌ ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಸೋಮವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ನೆರವೇರಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ