ಅನಧಿಕೃತ ಮರಳು ದಾಸ್ತಾನು ಪುನರಾವರ್ತನೆಯಾದಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ

Team Udayavani, Nov 14, 2019, 5:54 AM IST

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದನ್ನು ಮನಗಂಡು ಜಿಲ್ಲೆಯಲ್ಲಿ ಲಭ್ಯವಿರುವ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸಲು, ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಹಾಗೂ ಬಜೆ ಡ್ಯಾಂನಲ್ಲಿ ಹೂಳೆತ್ತಿ,ಈ ಹೂಳಿನಲ್ಲಿ ದೊರಕುವ ಮರಳನ್ನು ಬೇರ್ಪಡಿಸಿ ಸಾಗಾಟ ಮಾಡಲು ಅನುಮತಿ ನೀಡಿರುವ ಪರವಾನಿಗೆದಾರರು ಅಥವಾ ಇತರರು ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿರುತ್ತದೆ.

ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ವಿರುದ್ಧ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಆರಂಭವಾದ ನಂತರ ನ್ಯಾಯಾಲಯದಲ್ಲಿ ಎಂ.ಎಂ.ಡಿ.ಆರ್‌. ಆ್ಯಕ್ಟ್  ರಡಿಯಲ್ಲಿ ಹಾಗೂ ಕರ್ನಾಟಕ ಉಪ ಖನಿಜ ರಿಯಾಯತಿ ನಿಯಮಾವಳಿ 1994ರ ಅನ್ವಯ 23 ಖಾಸಗಿ ದೂರು ದಾಖಲಿಸಲಾಗಿರುತ್ತದೆ.

ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ಬಗ್ಗೆ ಮಾಹಿತಿ ಬರುತ್ತಿರುವುದರಿಂದ ಸಂಬಂಧಿಸಿದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಸಾರ್ವಜನಿಕರು ಅಗತ್ಯವಿರುವಷ್ಟು ಮರಳನ್ನು ಮಾತ್ರ ಸಾಗಾಟ ಪರವಾನಿಗೆಯೊಂದಿಗೆ ದಾಸ್ತಾನಿರಿಸಲು ಸೂಚಿಸಲಾಗಿದೆ. ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ ಅಥವಾ ದಾಸ್ತಾನು ಪುನರಾವರ್ತಿತವಾದಲ್ಲಿ ನಿಯಮಾನುಸಾರ ಗೂಂಡಾ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ