“ಕಾಲಮಿತಿಯಲ್ಲಿ ಪೂರೈಸದಿದ್ದರೆ ನವಯುಗ ವಜಾ’

ಪಡುಬಿದ್ರಿ ಸೇತುವೆ, ಕುಂದಾಪುರ ಮೇಲ್ಸೇತುವೆ

Team Udayavani, Nov 6, 2019, 4:22 AM IST

ಉಡುಪಿ: ಕಾಲಮಿತಿಯೊಳಗೆ ಪಡುಬಿದ್ರಿ ಸೇತುವೆ ಹಾಗೂ ಕುಂದಾಪುರ ಫ್ಲೈ ಓವರ್‌ಗಳು ಪೂರ್ಣಗೊಳ್ಳದಿದ್ದರೆ ನವಯುಗ ಸಂಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯಿಂದ ವಜಾಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

ಅವರು ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಡುಬಿದ್ರಿ ಸೇತುವೆಯನ್ನು ಜ. 15ರೊಳಗೆ ಹಾಗೂ ಕುಂದಾಪುರದ ಶಾಸ್ತ್ರಿ ಸರ್ಕಲ್‌ ಮೇಲ್ಸೇತುವೆಯನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸದಿದ್ದರೆ ಸಾಸ್ತಾನ ಟೋಲ್‌ ಗೇಟ್‌ನಲ್ಲಿ ಸುಂಕ ವಸೂಲಿಗೆ ಅವಕಾಶ ನೀಡುವುದಿಲ್ಲ. ಈ ಕುರಿತು ಕುಂದಾಪುರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದವರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ಸ್ಮಾರ್ಟ್‌ ಸಿಗ್ನಲ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದ ತಂಡ ರಾ.ಹೆ. 66ರ ಕುರಿತು ಸರ್ವೇ ನಡೆಸಿ ಸಮಸ್ಯೆಗಳ ಕುರಿತು ವರದಿ ಸಲ್ಲಿಸಿದೆ. ಅಪಘಾತ ವಲಯಗಳು, ಚರಂಡಿ ಹಾಗೂ ಬೀದಿ ದೀಪಗಳ ಸಮಸ್ಯೆಗಳ ಕುರಿತು ಉಲ್ಲೇಖೀಸಲಾಗಿದೆ. ಅದನ್ನು ರಾ.ಹೆ. ಪ್ರಾಧಿಕಾರದ ಅಧಿಕಾರಿಗಳ ಮೂಲಕ ಗುತ್ತಿಗೆ ಸಂಸ್ಥೆಗೆ ನೀಡಲಾಗಿದೆ. ಸಮಸ್ಯೆ ನಿವಾರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ನಗರ ಪ್ರದೇಶದಲ್ಲಿ ಟ್ರಾಫಿಕ್‌ ಜಾಮ್‌ ನಿವಾರಿಸಲು ಸ್ಮಾರ್ಟ್‌ ಟ್ರಾಫಿಕ್‌ ಸಿಗ್ನಲ್‌ ಆಳವಡಿಸಲಾಗುತ್ತದೆ ಎಂದರು.

ಪಾರ್ಕಿಂಗ್‌ ಸಮಸ್ಯೆ
ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಸಾಕಷ್ಟು ಇದೆ. ವಾಣಿಜ್ಯ ಕಟ್ಟಡಗಳಿಗೆ ಸ್ಥಳೀಯಾಡಳಿತದಿಂದ ಅನುಮತಿ ಪಡೆಯುವಾಗ ನೆಲಮಾಳಿಗೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವುದಾಗಿ ನೀಲ ನಕಾಶೆಯಲ್ಲಿ ಉಲ್ಲೇಖೀಸುತ್ತಾರೆ. ಬಳಿಕ ಪಾರ್ಕಿಂಗ್‌ ಪ್ರದೇಶದಲ್ಲೂ ಅಂಗಡಿ ತೆರೆಯುತ್ತಾರೆ. ಅದು ಸಮಸ್ಯೆಗೆ ಕಾರಣ. ಮುಂದಿನ ದಿನಗಳಲ್ಲಿ ಸ್ಥಳೀಯಾಡಳಿತದ ಅನುಮತಿ ದುರುಪಯೋಗಪಡಿಸಿಕೊಂಡವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ವಾರಾಹಿ ಯೋಜನೆ
ಉಡುಪಿ ನಗರಕ್ಕೆ ವಾರಾಹಿಯಿಂದ ಕುಡಿಯುವ ನೀರು ತರುವ ಯೋಜನೆ ಪ್ರಗತಿಯಲ್ಲಿ ಇದೆ. ಈಗಾಗಲೇ ಕುಡಿಯುವ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಒಂದು ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ. ಕಾಮಗಾರಿ ಪ್ರಾರಂಭಗೊಂಡ 15 ತಿಂಗಳೊಳಗಾಗಿ ಕೆಲಸ ಪೂರ್ಣಗೊಳಿಸಬೇಕಾಗಿದೆ ಎಂದರು.

ಹೆಜಮಾಡಿ ಬಂದರು
ಹೆಜಮಾಡಿ ಬಂದರು ಕಾಮಗಾರಿ ಯನ್ನು ಶೀಘ್ರ ಪ್ರಾರಂಭಿಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಹೆಚ್ಚುವರಿಯಾಗಿ ಖಾಸಗಿ ಜಾಗದ ಅಗತ್ಯವಿದ್ದು, ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ಖಾದರ್‌ ಶಾ ಮೊದಲಾದವರು ಉಪಸ್ಥಿತರಿದ್ದರು.

ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ಪ್ರಶಸ್ತಿ ಘೋಷಣೆ
ಉಡುಪಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಇಬ್ಬರಿಗೆ ನಾಡಿನ ಖ್ಯಾತ ಪತ್ರಕರ್ತ ದಿ| ಎಂ.ವಿ. ಕಾಮತ್‌ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಗಣೇಶಪ್ರಸಾದ್‌ ಪಾಂಡೇಲು ತಿಳಿಸಿದ್ದಾರೆ.

ಬ್ರಹ್ಮಗಿರಿ ಐಎಂಎ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಾಸ್ತಾನ ಮತ್ತು ಪಡುಬಿದಿರೆ ಟೋಲ್‌ ಗೇಟ್‌ಗಳಲ್ಲಿ ಪತ್ರಕರ್ತರ ವಾಹನಗಳಿಗೆ ಶುಲ್ಕ ವಿನಾಯತಿ ನೀಡಲು ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಾದ ಖಲೀಲ್‌ ಕಾರ್ಕಳ ಅವರಿಗೆ ವೈದ್ಯಕೀಯ ಸಹಾಯಧನವನ್ನು ವಿತರಿಸಲಾಯಿತು. ಇತ್ತೀಚೆಗೆ ನಿಧನರಾದ ಪತ್ರಕರ್ತ ಸುಭಾಶ್ಚಂದ್ರ ಕೆದೂರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯದರ್ಶಿ ಸಂತೋಷ್‌ ಸರಳೇಬೆಟ್ಟು ವಾರ್ಷಿಕ ವರದಿಯನ್ನು ಮಂಡಿಸಿದರು, ಕೋಶಾಧಿಕಾರಿ ದಿವಾಕರ ಭಂಡಾರಿ ಆರ್ಥಿಕ ಮತ್ತು ಕ್ರೀಡಾ ವರದಿಯನ್ನು ಮಂಡಿಸಿದರು. ವೇದಿಕೆಯಲ್ಲಿ ರಾಜ್ಯ ಸಂಘ ಸದಸ್ಯ ಕಿರಣ್‌ ಮಂಜನಬೈಲು, ಜಿಲ್ಲಾ ಉಪಾಧ್ಯಕ್ಷರಾದ ಕೆ.ಸಿ.ರಾಜೇಶ್‌ ಕುಂದಾಪುರ, ಉದಯಕುಮಾರ್‌ ಶೆಟ್ಟಿ ಹೆಬ್ರಿ, ರಾಮಚಂದ್ರ ಆಚಾರ್ಯ ಪಡುಬಿದ್ರಿ, ಶರೀಫ್ ಕಾರ್ಕಳ, ಕ್ರೀಡಾ ಕಾರ್ಯದರ್ಶಿ ಹರೀಶ್‌ ಪಾಲೇಚ್ಚರ್‌, ಜ. ಕಾರ್ಯದರ್ಶಿ ಮೈಕಲ್‌ ರೋಡ್ರಿಗಸ್‌, ಕಾರ್ಯಕಾರಿ ಸದಸ್ಯರಾದ ಪುಂಡಲೀಕ ಮರಾಠೆ ಶಿರ್ವ, ಮಝರ್‌ ಕುಂದಾಪುರ, ನಾಗರಾಜ ರಾಯಪ್ಪನಮಠ, ಗಣೇಶ ಉಪಸ್ಥಿತರಿದ್ದರು. ಚೇತನ್‌ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ