ಮರಳಿನ ಕೊರತೆ: ಅರೆಹೊಟ್ಟೆಯಲ್ಲೇ ವರ್ಷಾಚರಣೆ!

ಉಡುಪಿ ಜಿಲ್ಲೆ: ಇನ್ನು 15 ದಿನಗಳಲ್ಲಿ ಈ ವರ್ಷದ ಮರಳುಗಾರಿಕೆಗೆ ವಿದಾಯ

Team Udayavani, May 18, 2019, 6:00 AM IST

ಉಡುಪಿ: ಸಾಮಾನ್ಯವಾಗಿ ಹಲವು ಸಂತಸ ಸಂಗತಿಗಳಿಗೆ ವರ್ಷಾಚರಣೆ ಮಾಡುವ ಸಂಪ್ರದಾಯವಿದೆ. ಆದರೆ, ಉಡುಪಿ ಮರಳು ರಹಿತ ಜಿಲ್ಲೆಯಾಗಿ ವರ್ಷಾಚರಣೆಗೆ ಸಜ್ಜಾಗುತ್ತಿದೆ. ಈ ವರ್ಷದ ಮರಳು ಗಾರಿಕೆ 15 ದಿನಗಳಲ್ಲಿ ಮುಗಿಯಲಿದ್ದು, ಇನ್ನೇನಿದ್ದರೂ ಮುಂದಿನ ವರ್ಷ ಮರಳಿನ ಕನಸು ಕಾಣಬೇಕಿದೆ.

ಜೂ. 1ರಿಂದ ಜು. 31ರ ವರೆಗೆ ಮೀನುಗಾರಿಕೆ ನಿಷೇಧದ ಅವಧಿ. ಈ ಅವಧಿಯಲ್ಲಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ತೆಗೆಯುವಂತಿಲ್ಲ. ಹಾಗಾಗಿ ಮರಳು ತೆಗೆಯುವುದೇನಿದ್ದರೂ ಮೇ 31 ರವರೆಗೆ ಮಾತ್ರ. ಆದರೆ ಆ ಅವಕಾಶ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಮೇ 15 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಏಳು ಸದಸ್ಯರ ಮರಳು ಸಮಿತಿ ಸಭೆ ನಡೆದು ಮರಳು ತೆಗೆಯುವ ಕುರಿತು ಇರುವ ಮಾರ್ಗದರ್ಶಿ ಸೂತ್ರಗಳ ಚರ್ಚೆ ನಡೆಯಿತು. ಯಾರೆಲ್ಲ ಅರ್ಜಿ ಸಲ್ಲಿಸಿದ್ದಾರೆ ಇತ್ಯಾದಿ ಮಾಹಿತಿಗಳನ್ನು ಮುಂದಿನ ಸಭೆಗೆ ಮಂಡಿಸಲು ಜಿಲ್ಲಾಧಿಕಾರಿಯವರು ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಮೇ 23ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಇರುವುದರಿಂದ ಸದ್ಯಕ್ಕೆ ಸಭೆ ನಡೆಯುವ ಸಾಧ್ಯತೆ ಇಲ್ಲವಾಗಿದೆ.

ಬಳಿಕ ಸಭೆ ನಡೆದರೂ ಮೇ 31 ರೊಳಗೆ ಅವಕಾಶ ಸಿಗುವುದು ತೀರಾ ಕಷ್ಟ ಎಂಬಂತಾಗಿದ್ದು, ಒಂದು ವರ್ಷವಿಡೀ ಕೋರ್ಟು, ಪೀಠ, ಅಪೀಲು, ಆದೇಶ, ತೀರ್ಪು, ಪ್ರತಿಭಟನೆ, ಮೀಟಿಂಗ್‌, ರೈಡು, ತನಿಖೆ, ಪರಿಶೀಲನೆ, ತಪಾಸನೆ, ಪತ್ರ ರವಾನೆ, ನಿಯಮಾವಳಿ, ಮಂತ್ರಿಗಳು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ದಿಲ್ಲಿಗೆ-ಬೆಂಗಳೂರಿಗೆ ಎಂದೇ ಮುಗಿದು ಹೋಗಿದೆ ಎಂಬುದು ಜನಸಾಮಾನ್ಯರ ಅಳಲು.

ವರ್ಷದ ಪ್ರಯತ್ನವೆಲ್ಲ ವ್ಯರ್ಥ!
ಮರಳುಗಾರಿಕೆಗೆ ಪ್ರತಿ ವರ್ಷ ಗುತ್ತಿಗೆಯನ್ನು ಹೊಸದಾಗಿ ವಹಿಸಿಕೊಡಬೇಕು. ಆದ್ದರಿಂದ ಈ ವರ್ಷ ಇದುವರೆಗೆ ನಡೆಸಿದ ಪ್ರಯತ್ನಗಳು ಮುಂದಿನ ವರ್ಷಕ್ಕೆ ಪ್ರಯೋಜನಕ್ಕೆ ಬರುವುದಿಲ್ಲ. ಮುಂದಿನ ವರ್ಷ ಎಲ್ಲಿ? ಯಾರು ಮರಳುಗಾರಿಕೆ ನಡೆಸಬಹುದೆಂದು ಗುರುತು ಹಾಕಿಕೊಡಬೇಕು. ಮುಂದೆ ಆಗಸ್ಟ್‌ 1ರ ಅನಂತರ ಮರಳುಗಾರಿಕೆ ನಡೆಸಬಹುದು. ಅದಕ್ಕೂ ಈಗಲೇ ಕೆಲಸ ಆರಂಭವಾಗಬೇಕು. ಇಲ್ಲವಾದರೆ ಮುಂದಿನ ವರ್ಷವೂ ಕಷ್ಟ ಎನ್ನುತ್ತಾರೆ ಹಲವರು.

ಮರಳು ಸಮಿತಿ ಸಭೆಯಲ್ಲಿ ವಸ್ತುಸ್ಥಿತಿ ಮತ್ತು ನಿಯಮಾವಳಿ ಬಗ್ಗೆ ಚರ್ಚೆ ನಡೆಸಲಾಯಿತು. ಎಷ್ಟು ಜನರಿಗೆ ಪರವಾನಿಗೆ ಕೊಡಬೇಕು? ಎಷ್ಟು ಜನರು ಅರ್ಹರು ಇದ್ದಾರೆ? ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಎಷ್ಟು ಪ್ರಮಾಣದ ಮರಳು ಸಿಗಬಹುದು? ಎಂದು ಚರ್ಚಿಸಿದ್ದೇವೆ. ಮೀನುಗಾರಿಕೆ ನಿಷೇಧದ ಅವಧಿ ಆರಂಭವಾಗುವುದರಿಂದ ಇನ್ನು ಹತ್ತು ದಿನಗಳಲ್ಲಿ ಏನು ಮಾಡಬೇಕು ಎಂಬ ಚರ್ಚೆ ಬಂದಾಗ, ಸಮಿತಿಯ ಓರ್ವ ಸದಸ್ಯರು ಮಾತ್ರ ಏನಾದರೂ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಉಳಿದವರು ಈ ಅವಧಿಯಲ್ಲಿ ಮಾಡುವುದು ಕಷ್ಟ ಎಂದರು. ಮೇ 27ರ ಬಳಿಕ ಮತ್ತೆ ಸಭೆ ನಡೆಸುತ್ತೇವೆ. ಒಟ್ಟಾರೆ ಆ. 1ರಿಂದ ಮರಳುಗಾರಿಕೆ ಆರಂಭಿಸಲು ಪೂರಕವಾದ ನಿರ್ಣಯವನ್ನು ನಿಯಮಾವಳಿ ವ್ಯಾಪ್ತಿಯಲ್ಲಿ ತಳೆಯುತ್ತೇವೆ.
– ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿಗಳು, ಉಡುಪಿ
5,000 ಮೆ.ಟನ್‌ ಮರಳು ದಾಸ್ತಾನು

ಮರಳು ಸಮಿತಿ ಸಭೆಯಲ್ಲಿ ಮರಳುಗಾರಿಕೆ ಕುರಿತು ಇರುವ ನಿಯಮಾವಳಿಗಳ ಬಗ್ಗೆ ಚರ್ಚೆ ಆಗಿದೆ. ಮುಂದಿನ ಸಭೆಯಲ್ಲಿ ನಿರ್ಣಯ ತಳೆಯಬಹುದು. ನನ್ನನ್ನು ಸಿಆರ್‌ಝಡ್‌ ವ್ಯಾಪ್ತಿಗೆ ಕೇವಲ ಅನುಷ್ಠಾನಾಧಿಕಾರಿ ಎಂದು ನಿಯುಕ್ತಿಗೊಳಿಸಲಾಗಿದೆ. ಸಿಆರ್‌ಝಡ್‌ ವ್ಯಾಪ್ತಿ ಗಣಿಇಲಾಖಾ ವ್ಯಾಪ್ತಿಗೆ ಬರದು. ಇಲ್ಲಿ ಏನಿದ್ದರೂ ಮರಳು ದಿಣ್ಣೆಗಳನ್ನು ತೆರವುಗೊಳಿಸುವುದು ಮಾತ್ರ. ನಾನ್‌ ಸಿಆರ್‌ಝಡ್‌ ವ್ಯಾಪ್ತಿಗೆ ನಾನು ಸದಸ್ಯ ಕಾರ್ಯದರ್ಶಿ. ನಾನ್‌ ಸಿಆರ್‌ಝಡ್‌ ವ್ಯಾಪ್ತಿಯ ಕುಂದಾಪುರ ತಾಲೂಕಿನ ಮೊಳಹಳ್ಳಿ, ಕಕ್ಕುಂಜೆ, ಉಡುಪಿಯ ಬೆಳ್ಳಂಪಳ್ಳಿ, ಹಲುವಳ್ಳಿ ಈ ನಾಲ್ಕು ಕಡೆ ಮರಳುತೆಗೆಯಲಾಗುತ್ತಿದೆ. ಹಿಂದಿನ ವರದಿಯಂತೆ ಕೆಆರ್‌ಡಿಎಲ್ (ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಗಮ) ದಾಸ್ತಾನಿನಲ್ಲಿ 5,000 ಮೆಟ್ರಿಕ್‌ ಟನ್‌ ಮರಳಿತ್ತು. ಮರಳಿನ ಗುಣಮಟ್ಟದ ಬಗ್ಗೆ ಜನರಿಂದ ಆಕ್ಷೇಪವಿದೆ. ಈ ಮರಳನ್ನು ಸಾರ್ವಜನಿಕರಿಗೆ, ಸರಕಾರಿ ಯೋಜನೆಗಳಿಗೆ ಕೊಡುತ್ತಿದ್ದೇವೆ.
– ರಾನ್ಜಿ ನಾಯಕ್‌, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ
ಜಿಲ್ಲೆಯ ಆರ್ಥಿಕತೆ ಕುಸಿತ

ಒಂದು ವರ್ಷದಿಂದ ಅಗತ್ಯವಿದ್ದಷ್ಟು ಮರಳು ದೊರೆಯದ ಸ್ಥಿತಿ ನಿರ್ಮಾಣವಾಗಿರುವುದರಿಂದ ಕಟ್ಟಡ ನಿರ್ಮಾಣ ಕ್ಷೇತ್ರದ ಚಟುವಟಿಕೆಗಳು ಶೇ. 70 ರಷ್ಟು ಸ್ಥಗಿತಗೊಂಡಿವೆ. ಹೊಸವಸತಿ ಸಮುಚ್ಚಯ ನಿರ್ಮಾಣ ಯೋಜನೆಗಳೂ ವೇಗ ಕಳೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಇದಕ್ಕೆಹೊಂದಿಕೊಂಡ ಕ್ಷೇತ್ರಗಳ ಚಟುವಟಿಕೆಗಳೂ ಕುಸಿದು, ಜಿಲ್ಲೆಯ ಆರ್ಥಿಕತೆಗೆ ಪೆಟ್ಟು ಬಿದ್ದಿರುವುದು ಸ್ಪಷ್ಟ.

ಹಠ ಹಿಡಿದರೆ ಮಾತ್ರ ಸಾಧ್ಯ

ಮೇ 31 ರೊಳಗೆ ಮರಳುಗಾರಿಕೆ ಆರಂಭವಾಗುವ ಸಾಧ್ಯತೆ ಕಡಿಮೆ ಇದೆ. ಆದರೆ ಆಗಸ್ಟ್‌ ತಿಂಗಳಲ್ಲಿ ಮರಳುಗಾರಿಕೆ ಆರಂಭವಾಗಬೇಕೆಂದರೂ ಇಂದಿನಿಂದಲೇ ಸಿದ್ಧತೆ ಆರಂಭವಾಗಬೇಕಿದೆ. ಕೂಡಲೇ ಜಿಲ್ಲಾಧಿಕಾರಿಗಳು ಹಠ ಹಿಡಿದು ಸಿಬಂದಿಯಿಂದ ಮಾಹಿತಿ ಪಡೆದು, ಕೈಗೊಳ್ಳಬೇಕಾದ ಎಲ್ಲ ಪ್ರಕ್ರಿಯೆ ಪೂರೈಸಿದರೆ ಮಾತ್ರ ಆಗಸ್ಟ್‌ 1ರಿಂದ ಮರಳು ಜನರಿಗೆ ಸಿಗಬಹುದು. ಇಲ್ಲವಾದರೆ ಮತ್ತೆ ಕೆಲವು ತಿಂಗಳು ಮರಳುಗಾರಿಕೆ ನಡೆಸುವುದು ಸಾಧ್ಯವಿಲ್ಲ.

ಸಮಸ್ಯೆ ಇನ್ನೂ ಬಗೆಹರಿಯುತ್ತಲೇ ಇದೆ!

ಮರಳು ಸಮಸ್ಯೆ ಆರಂಭವಾದ ಮೇಲೆ ಇವರು ಎರಡನೇ ಜಿಲ್ಲಾಧಿಕಾರಿ. ಮೊದಲನೇ ಜಿಲ್ಲಾಧಿಕಾರಿಯವರ ಕಾಲದಲ್ಲಿ ಮೊದಲ ಬಾರಿ ಮರಳು ಸಮಸ್ಯೆ ಇನ್ನಿಲ್ಲದಂತೆ ಉಲ್ಬಣಿಸಿತು. ಅಷ್ಟರಲ್ಲಿ ಅವರ ವರ್ಗಾವಣೆಯಾಯಿತು. ಈಗ ಹೊಸ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಬಂದ ಮೇಲೆ ಸಮಸ್ಯೆ ತತ್‌ಕ್ಷಣ ಬಗೆಹರಿದೀತು ಎಂಬ ನಿರೀಕ್ಷೆ ಜನರಿಗಿತ್ತು. ಆದರೆ ಚುನಾವಣೆಯ ಸಿದ್ಧತೆ, ನಿರ್ವಹಣೆಯ ಲೆಕ್ಕದಲ್ಲಿ ಇನ್ನೂ ಬಗೆಹರಿದಿಲ್ಲ. ಈಗಲಾದರೂ ಸಭೆ ನಡೆಸಿದ ಹಿನ್ನೆಲೆಯಲ್ಲಿ ಬಗೆಹರಿಯುವ ಸಾಧ್ಯತೆ ಗೋಚರಿಸಿದೆ. ಅವರು ಎಷ್ಟು ತುರ್ತಾಗಿ ಕ್ರಮ ಕೈಗೊಳ್ಳುವವರೆಂದು ಕಾದು ನೋಡಬೇಕಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ