ನಿಂಜೂರು: ಸಾರ್ವಜನಿಕರಿಂದ ಏಟು ತಿಂದ ಚಿರತೆ ಸಾವು

Team Udayavani, Jun 1, 2017, 10:35 AM IST

ಕಾರ್ಕಳ: ಚಿರತೆಯೊಂದು ಕೊಟ್ಟಿಗೆಗೆ ನುಗ್ಗಿ ಹಸು ಮತ್ತು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ ಘಟನೆ ತಾಲೂಕಿನ ನಿಂಜೂರು ಗ್ರಾಮದ ಮಲ್ಲಿಬೆಟ್ಟುವಿನಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ. ಇದೇ ವೇಳೆ ಸಾರ್ವಜನಿಕರ ರೋಷಕ್ಕೆ ತುತ್ತಾದ ಚಿರತೆ ಸಾವನ್ನಪ್ಪಿದೆ.

ಸ್ಥಳೀಯ ನಿವಾಸಿ ಅಲ್ವಿನ್‌ ಯಾನೆ ವಲೇರಿಯನ್‌ ಡಿ’ಸೋಜಾ (53) ಚಿರತೆಯಿಂದ ಗಾಯಗೊಂಡ ವ್ಯಕ್ತಿ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ದನ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದೆ.

ಅಟ್ಟದಲ್ಲಿ ಅವಿತಿದ್ದ ಚಿರತೆ
ನಿಂಜೂರು ಮಲ್ಲಿಬೆಟ್ಟು ನಿವಾಸಿ ಅಪ್ಪಿ ಪೂಜಾರ್ತಿ ಅವರ ದನದ ಕೊಟ್ಟಿಗೆಯ ಅಟ್ಟದಲ್ಲಿ ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಗಿನ ಜಾವ ಅವಿತು ಕುಳಿತಿದ್ದ ಚಿರತೆ ಮುಂಜಾನೆ ದನದ ಮೇಲೆರಗಿತು. ಅಪ್ಪಿ ಪೂಜಾರಿ ಅವರ ನೆರೆಮನೆಯ ಅಲ್ವಿನ್‌ ಅವರು ಚಿರತೆಯ ಗರ್ಜನೆ ಕೇಳಿ ಕೊಟ್ಟಿಗೆಯತ್ತ ಧಾವಿಸುವಷ್ಟರಲ್ಲಿ ಚಿರತೆ ದನದ ಮೇಲೆರಗಿತ್ತು. ದನವನ್ನು ರಕ್ಷಿಸಲೆಂದು ಬಂದ ಅವರ ಮೇಲೆಯೂ ಚಿರತೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತು.

ಅಲ್ವಿನ್‌ ಅಲ್ಲಿಂದ ತಪ್ಪಿಸಿಕೊಂಡು ಹೊರ ಓಡಿದಾಗ ಚಿರತೆಯೂ ಹಿಂಬಾಲಿಸಿತು. ಹೊರಗೆ ಬಂದ ಚಿರತೆ ಅಲ್ಲೇ ಇದ್ದ ನಾಯಿಯನ್ನು ಅಟ್ಟಿಸಿಕೊಂಡು ಹೋಗಿದೆ. ಅಷ್ಟರಲ್ಲಿ ಮನೆಯವರ ಬೊಬ್ಬೆ ಕೇಳಿದ ಸ್ಥಳೀಯರೆಲ್ಲ ಧಾವಿಸಿ ಬಂದಿದ್ದರು. ಗಲಿಬಿಲಿಗೊಂಡ ಚಿರತೆ ಅವರ ಮೇಲೆಯೂ ಎರಗಿತು. ಸಾರ್ವಜನಿಕರು ಅನ್ಯದಾರಿ ಕಾಣದೆ ಚಿರತೆಯ ಮೇಲೆ ಹಲ್ಲೆ ಮಾಡಿದ್ದರಿಂದ ಅದು ಸಾವನ್ನಪ್ಪಿತು.

ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕಾಗಮಿಸಿ ಚಿರತೆಯ ಮೃತದೇಹವನ್ನು ಕೊಂಡೊಯ್ದಿದ್ದಾರೆ. ಮಂಗಳವಾರ ತಡರಾತ್ರಿ ನೀರೆಬೈಲೂರಿನ ಚಿತ್ರಬೈಲ್‌ ಸಮೀಪ ರಾಮ ಮೂಲ್ಯ ಅವರ ಮೇಲೆ ಚಿರತೆಯೊಂದು ದಾಳಿ ಮಾಡಿ ಗಾಯಗೊಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ