ಸುಸಜ್ಜಿತ ಸ್ನಾನ-ಶೌಚಗೃಹ ಸಂಕೀರ್ಣ

ಉಡುಪಿ: ಶ್ರೀಕೃಷ್ಣ ಮಠದ ಪರಿಸರದಲ್ಲಿ

Team Udayavani, Jul 11, 2019, 5:43 AM IST

ಉಡುಪಿ: ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಸಾವಿರಾರು ಯಾತ್ರಾರ್ಥಿಗಳಿಗೆ ಸುಸಜ್ಜಿತ ಸ್ನಾನ ಮತ್ತು ಶೌಚಗೃಹ ಸಂಕೀರ್ಣ 2 ಕೋ.ರೂ. ವೆಚ್ಚದಲ್ಲಿ ಮಠದ ವಾಹನ ಪಾರ್ಕಿಂಗ್‌ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದೆ. ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆ ತನ್ನ ಸಿಎಸ್‌ಆರ್‌ ನಿಧಿಯಿಂದ ಇದನ್ನು ನಿರ್ಮಿಸಿಕೊಡುತ್ತಿದೆ.

ತಳಅಂತಸ್ತಿನಲ್ಲಿ 5 ಲಕ್ಷ ಲೀಟರ್‌ ನೀರು ಸಂಗ್ರಹಣ ತೊಟ್ಟಿಯನ್ನು ಸುಮಾರು 50 ಲ.ರೂ. ವೆಚ್ಚದಲ್ಲಿ ನಿರ್ಮಿಸು ತ್ತಿದ್ದರೆ, ನೆಲ ಮಟ್ಟ ಮತ್ತು ಮಹಡಿಯಲ್ಲಿ ಸುಮಾರು 8,000 ಚದರಡಿ ವಿಸ್ತೀರ್ಣದಲ್ಲಿ ಸ್ನಾನ ಗೃಹ ಮತ್ತು ಶೌಚಗೃಹ ಗಳನ್ನು 1.5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಒಟ್ಟು 46 ಸ್ನಾನಗೃಹಗಳು, 46 ಶೌಚಾಲಯಗಳು ಸಂಕೀರ್ಣದಲ್ಲಿರುತ್ತವೆ. ಮೂತ್ರಾಲಯಗಳೂ ಇವೆ. ನೀರುಸಂಗ್ರಹಣ ಸಂಪ್‌ಗೆ ಶ್ರೀಕೃಷ್ಣ ಮಠ ಪರಿಸರ ಪ್ರತಿಷ್ಠಾನ ದಲ್ಲಿರುವ ಬಾವಿ, ಕೊಳವೆಬಾವಿಗಳ ನೀರಿನೊಂದಿಗೆ ನಗರಸಭೆ ನೀರಿನ ಸಂಪರ್ಕವನ್ನೂ ಮಾಡಲಾಗುತ್ತದೆ. ಸಂಪ್‌ ಕೆಲಸ ಬಹುತೇಕ ಮುಗಿದಿದ್ದು ಸ್ನಾನ-ಶೌಚಗೃಹದ ಕೆಲಸ ಶೇ. 60ರಷ್ಟು ಮುಗಿದಿದೆ. ಸಂಪ್‌ ಕಾಮಗಾರಿಯ ಗುತ್ತಿಗೆಯನ್ನು ಉಡುಪಿಯ ಶೈಲೇಶ್‌ ವಹಿಸಿಕೊಂಡರೆ, ಸ್ನಾನ-ಶೌಚಗೃಹದ ಗುತ್ತಿಗೆಯನ್ನು ವೆಂಕಟೇಶ್‌ ಶೇಟ್ ವಹಿಸಿಕೊಂಡಿ ದ್ದಾರೆ.

ಪರ್ಯಾಯ ಪೂರ್ವಭಾವಿ ಸಂಚಾರದ ವೇಳೆ ಶ್ರೀ ಪಲಿ ಮಾರು ಸ್ವಾಮೀಜಿಯವರು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ನಾನಗೃಹ-ಶೌಚ ಗೃಹ ನಿರ್ಮಿಸಲು ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ರಾಗಿದ್ದ ಕುಮಾರ್‌ ಅವರಲ್ಲಿ ಅಪೇಕ್ಷೆ ವ್ಯಕ್ತಪಡಿಸಿದ್ದರು.

ಸ್ವಚ್ಛಭಾರತ್‌ ಅಭಿಯಾನ ದಡಿ ಯೋಜನೆಯನ್ನು ಎಂಆರ್‌ಪಿಎಲ್ನವರು ಜಾರಿಗೊಳಿಸುತ್ತಿರುವುದರಿಂದ ಆ. 15ರಂದು ಉದ್ಘಾಟಿಸುವ ಇರಾದೆ ಇದೆ. ಒಂದು ವೇಳೆ ಕಾಮಗಾರಿ ಮುಗಿಯದಿದ್ದರೆ ಸೆಪ್ಟಂಬರ್‌ನೊಳಗಾದರೂ ಉದ್ಘಾಟಿಸಲಿದ್ದೇವೆ ಎಂದು ಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ ರಾವ್‌ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಕಾಮಗಾರಿ ಪೂರ್ಣಗೊಂಡ ಅನಂತರ ಶ್ರೀಕೃಷ್ಣ ಮಠ ಪರಿಸರ ಪ್ರತಿಷ್ಠಾನಕ್ಕೆ ಬಿಟ್ಟುಕೊಡಲಿದ್ದೇವೆ. ಮೂತ್ರ ವಿಸರ್ಜನೆಗೆ ಶುಲ್ಕ ಇರುವುದಿಲ್ಲ. ಸ್ನಾನಗೃಹ ಮತ್ತು ಶೌಚಗೃಹಗಳಿಗೆ ಸಾಂಕೇತಿಕ ಶುಲ್ಕ ನಿಗದಿಪಡಿಸಲಿದ್ದೇವೆ. ಇದು ನಿರ್ವಹಣ ವೆಚ್ಚವನ್ನು ಸರಿದೂಗಿಸಲು ಮಾತ್ರ. ಸದ್ಯ ಸರಾಸರಿ 5,000 ಯಾತ್ರಿಕರು ಬರುತ್ತಿದ್ದು ಅವರ ಅಗತ್ಯಗಳ ಪೂರೈಕೆಗೆ ಹೊಸ ಸಂಕೀರ್ಣ ಅನುಕೂಲವಾಗಲಿದೆ. ಈಗಾಗಲೇ ಯಾತ್ರೀ ನಿವಾಸ ಬಳಿ ಇರುವ ಸಾರ್ವಜನಿಕ ಶೌಚಾಲಯ ಮುಂದುವರಿಯಲಿದೆ. ಸುಮಾರು ಮೂರು ದಶಕಗಳ ಹಿಂದೆ ಕಾಣಿಯೂರು ಮಠದ ಪಕ್ಕದಲ್ಲಿ ಶ್ರೀ ಅದಮಾರು ಮಠದ ಶ್ರೀಗಳು ನಿರ್ಮಿಸಿದ ಸ್ನಾನಗೃಹ- ಶೌಚ ಗೃಹವನ್ನು ಮುಚ್ಚಿ ಅದನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ಇರಾದೆ ಇದೆ.
– ಪ್ರಹ್ಲಾದ ರಾವ್‌,ಆಡಳಿತಾಧಿಕಾರಿ, ಪರ್ಯಾಯ ಶ್ರೀ ಪಲಿಮಾರು ಮಠ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ