ಉಡುಪಿ: ಶೆಡ್‌ ಮೇಲೆ ಉರುಳಿದ ಮರ; ತಗ್ಗು ಪ್ರದೇಶಗಳು ಜಲಾವೃತ

Team Udayavani, Jul 11, 2019, 5:55 AM IST

ಉಡುಪಿ: ಉಡುಪಿ ದೊಡ್ಡಣಗುಡ್ಡೆಯಲ್ಲಿ ಅಧಿಕಾರಿ ಕೃಷ್ಣ ಹೆಬೂರು ಅವರ ಶೆಡ್‌ ಮೇಲೆ ಮರವೊಂದು ಗಾಳಿಮಳೆಗೆ ಬಿದ್ದಿದೆ. ಯಾವುದೇ ಹಾನಿ ಸಂಭವಿಸಿಲ್ಲ ಉಡುಪಿ, ಮಣಿಪಾಲ, ಪಡುಬಿದ್ರಿ, ಬ್ರಹ್ಮಾವರ, ಕಾಪು, ಕಟಪಾಡಿ, ಬೆಳ್ಮಣ್ಣು, ತೆಕ್ಕಟ್ಟೆ ಮೊದಲಾದೆಡೆ ಉತ್ತಮ ಮಳೆಯಾಗಿದೆ. ಬಯಲು ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಂಡವು. ಬಹುತೇಕ ಕಡೆಗಳಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿತ್ತು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಿಡುಗಡೆಗೊಳಿಸಿದ ಅಂಕಿ ಅಂಶದಲ್ಲಿ ಮಂಗಳವಾರದ ವರೆಗೆ ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿತ್ತು.

ಶಾಲೆ ಶೌಚಾಲಯಕ್ಕೆ ಹಾನಿ
ನರಿಮೊಗರು: ಮಂಗಳವಾರ ರಾತ್ರಿ ಬೀಸಿದ ಗಾಳಿ ಮಳೆಗೆ ನರಿಮೊಗರು ಗ್ರಾಮದ ಮುಕ್ವೆ ಶಾಲಾ ಶೌಚಾಲಯ ಕಟ್ಟಡದ ಮೇಲೆ ಬಿದ್ದು ಮರ ಬಿದ್ದು ಶೀಟ್‌ಗೆ ಹಾನಿಯಾಗಿದೆ.ಹೀಗೆ ಶೀಟ್‌ಗೆ ಬಿದ್ದ ಮರದ ಗೆಲ್ಲಿ ನಲ್ಲಿ ಶಾಲೆ ಆರಂಭಕ್ಕೂ ಮುನ್ನ ಬಂದ ವಿದ್ಯಾರ್ಥಿ ಯೋರ್ವ ಆಟವಾಡಿ ಜಾರಿ ಬಿದ್ದು ಕೈಗೆ ಗಾಯಗೊಂಡಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಮರವನ್ನು ಅರಣ್ಯ ಇಲಾಖೆಯವರು ತೆರವು ಮಾಡಿದ್ದಾರೆ.

ಮುಕ್ವೆಯಲ್ಲಿ ವಿದ್ಯುತ್‌ ಕಂಬಗಳ ಮೇಲೂ ಮರ ಬಿದ್ದು ಹಲವು ಕಂಬಗಳು ಮುರಿದು ಬಿದ್ದಿವೆ. ರಾತ್ರಿಯಿಡೀ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿತ್ತು.ಬುಧವಾರವೂ ತಾಂತ್ರಿ ಅಡಚಣೆಯಿಂದ ಬೆಳಗ್ಗೆಯಿಂದ ಸಂಜೆವರೆಗೂ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

ಕೋಟ: 27ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗೆ
ಕೋಟ: ಮಂಗಳವಾರ ಭಾರೀ ಗಾಳಿ ಮಳೆಗೆ ಕೋಟ ಹೋಬಳಿಯಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. 27ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಶಿರಿಯಾರ, ಗಿಳಿಯಾರು, ಗುಂಡ್ಮಿ ಮೊದಲಾದೆಡೆ 11ಕ್ಕೂ ಹೆಚ್ಚು ಮನೆ, ಕೊಟ್ಟಿಗೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಮಂಗಳವಾರ ಸಂಜೆ 7 ಗಂಟೆಯಿಂದ ಬುಧವಾರ ಅಪರಾಹ್ನ 12ರ ತನಕ ವಿದ್ಯುತ್‌ ವ್ಯತ್ಯಯವಾಗಿತ್ತು. ಮೆಸ್ಕಾಂ ಸಿಬಂದಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಿ ವಿದ್ಯುತ್‌ ಸಂಪರ್ಕ ಸರಿಪಡಿಸಿದರು.

ಗಾಳಿಗೆ ಹಾರಿದ ಮನೆಯ ಛಾವಣಿ
ಉಪ್ಪುಂದ: ಬುಧವಾರ ಮಧ್ಯಾಹ್ನ ಗಾಳಿ ಮಳೆಗೆ ಪಡುವರಿ ಗ್ರಾಮದ ಬೆಸ್ಕೂರು ಮನೆ ಗೋವಿಂದ ಪೂಜಾರಿ ಅವರ ಮನೆಯ ಛಾವಣಿ ಹಾರಿಹೋಗಿದೆ. 25 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಗ್ರಾಮಕರಣಿಕ ಆದರ್ಶ, ಗ್ರಾ.ಪಂ. ಸದಸ್ಯ ಸುರೇಶ ಬೆಸ್ಕೂರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮಧ್ಯಾಹ್ನ ಸುರಿದ ಗಾಳಿ ಮಳೆಗೆ ಉಪ್ಪುಂದ ನಡುಮನೆ ಅಬ್ಬಕ್ಕೆ ಅವರ ಮನೆಯ ಹಂಚು ಗಳು ಹಾರಿ ಹೋಗಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ