ಕೊರೊನಾದಿಂದ ಶಿಕ್ಷಣದಲ್ಲಿ ಏರುಪೇರು: ಕಾಗೇರಿ
Team Udayavani, Feb 9, 2021, 7:38 PM IST
ಶಿರಸಿ: ಕೊರೊನಾ ಕಾರಣದಿಂದ ಶೈಕ್ಷಣಿಕ ವರ್ಷದಲ್ಲಿ ಏರುಪೇರಾಗಿರುವುದರಿಂದ ಈ ವರ್ಷವನ್ನು ವಿದ್ಯಾರ್ಥಿಗಳು ಶಿಕ್ಷಕರು ಸೇರಿದಂತೆ ಪಾಲಕರು ಕೂಡಾ ಸವಾಲಾಗಿ ಸ್ವೀಕರಿಸಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ನಗರದ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂ ಡ ಕೊಠಡಿ, ಶೌಚಾಲಯ ಉದ್ಘಾಟನೆ ಹಾಗೂ 10 ಲ.ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಸಭಾಭವನ ಕಟ್ಟಡಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೊನಾ ಶೈಕ್ಷಣಿಕ ರಂಗದಲ್ಲಿ ಸಾಕಷ್ಠು ಅಪಾಯ ತಂದಿದ್ದರಿಂದ ಇದನ್ನು ಎಲ್ಲರೂ ಧೈರ್ಯದಿಂದ ಎದುರಿಸಬೇಕೆಂದು ಮಕ್ಕಳಿಗೆ ಧೈರ್ಯ ತುಂಬಿದರು. ಮಕ್ಕಳು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು. ಅದರ ಜತೆಗೆ ಓದಿನತ್ತ ಏಕಾಗ್ರತೆ ಇರಲಿ ಎಂದು ಸಲಹೆ ನೀಡಿದರು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒಂದೇ ವರ್ಷದಲ್ಲಿ 1 ಕೋಟಿಗಿಂತ ಹೆಚ್ಚು ಅನುದಾನ ತಂದಿದ್ದೇನೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ ಎಂದರು.
ಇದನ್ನೂ ಓದಿ :ಕುಸಿಯುತ್ತಿದೆ ಕುಷ್ಟಗಿ ಕಲ್ಲಬಾವಿ ರಕ್ಷಾ ಗೋಡೆ
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅದ್ಯಕ್ಷ ರಾಘವೇಂದ್ರ ಶೆಟ್ಟಿ, ಸದಸ್ಯೆ ದೀಪಾ ಮಹಾಲಿಂಗಣ್ಣನವರ, ಡಿಡಿಪಿಐ ದಿವಾಕರ ಶೆಟ್ಟಿ, ಡಿಡಿಪಿಯು ಎಸ್.ಎನ್. ಬಗಲಿ, ಕಾಲೇಜಿನ ಪ್ರಾಚಾರ್ಯ ಬಾಲಚಂದ್ರ ಭಟ್ಟ, ಪ್ರೌಢಶಾಲೆ ಮುಖ್ಯ ಶಿಕ್ಷಕ ನಾಗರಾಜ ಇದ್ದರು.