ಕರುನಾಡಲ್ಲಿ ಜಿಹಾದಿಗಳನ್ನು ಸೃಷ್ಟಿಸಿದ ಕಾಂಗ್ರೆಸ್‌: ಯೋಗಿ​​​​​​​

Team Udayavani, May 4, 2018, 6:40 AM IST

ಶಿರಸಿ: ಕರ್ನಾಟಕ ಎಂದರೆ ಕಾಂಗ್ರೆಸ್‌ಗೆ ಎಟಿಎಂ. ರಾಜ್ಯದಲ್ಲಿ ದುರಾಡಳಿತ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕರ್ನಾಟಕದಲ್ಲಿ ಸರಕಾರವೇ ಇಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಟೀಕಾ ಪ್ರಹಾರ ನಡೆಸಿದರು.

ಗುರುವಾರ ಶಿರಸಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಿಂದ ಮಂಗಳೂರು, ಹಾಸನದಿಂದ ಚಿಕ್ಕಮಗಳೂರು, ಹುಬ್ಬಳ್ಳಿ ಎಲ್ಲಿಯೇ ಹೋದರೂ ದುರಾಡಳಿತ ಇದೆ.  ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಾಗಿವೆ. ರೈತರ ಆತ್ಮಹತ್ಯೆಗಳಾಗಿವೆ. ಯಾರಿಗೂ ನೆಮ್ಮದಿ ಕೊಡದ, ಜಾತಿ, ಮತ, ಧರ್ಮದಲ್ಲಿ ವಿಷ ಬೀಜ ಬಿತ್ತಿದ ಸರಕಾರ ಕಾಂಗ್ರೆಸ್‌ನದ್ದು. ಸಿದ್ದರಾಮಯ್ಯ ಸ್ವಯಂ ಲೂಟಿ ಮಾಡಿದವರು. ಅತಿ ಹೆಚ್ಚು ಜಿಹಾದಿಗಳನ್ನು ಸೃಷ್ಟಿಸಿದ್ದಾರೆ. ಅರಾಜಕತೆಗೆ ಕಾರಣರಾಗಿದ್ದಾರೆ. ಉ.ಪ್ರದೇಶದಲ್ಲಿ 83 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದೇವೆ. ಕರ್ನಾಟಕದ ರೈತರು ಕಷ್ಟದಲ್ಲಿದ್ದರೂ ಇಲ್ಲೇಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
 
ಧರ್ಮದ ಹೆಸರಲ್ಲಿ ಜನರ ವಿಭಜನೆ: ಬಾಳೆಹೊನ್ನೂರಿನಲ್ಲಿ  ಬಹಿರಂಗ ಸಮಾವೇಶದಲ್ಲಿ  ಮಾತನಾಡಿದ  ಯೋಗಿ  ಅವರು  ಧರ್ಮ ಗಳ ಮೂಲಕ ನಾವು ಎಲ್ಲರನ್ನೂ ಒಂದಾ ಗಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ರಾಜ್ಯದ ಕಾಂಗ್ರೆಸ್‌ ಸರಕಾರ ಧರ್ಮದ ಹೆಸರಲ್ಲಿ ಜನರನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದರು.ಸಿದ್ದರಾಮಯ್ಯನವರಿಗೆ ಭಾರತ ಸಂಸ್ಕೃತಿ, ಪರಂಪರೆಯ ನಾಡು ಎಂಬುದೇ ಮರೆತು ಹೋಗಿದೆ. ಹೀಗಾಗಿ ಧರ್ಮದ ಹೆಸರಲ್ಲೂ ಅವರು ರಾಜಕಾರಣ ಮಾಡುತ್ತಿದ್ದಾರೆ. 

ಸಿದ್ದರಾಮಯ್ಯನವರು ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿ ಧರ್ಮ ಒಡೆಯಲು ಮುಂದಾಗಿದ್ದಾರೆ. ಬಿಜೆಪಿ ಎಲ್ಲರನ್ನೂ ಜೋಡಿಸುವ ಕಾರ್ಯದಲ್ಲಿ ತೊಡಗಿದ್ದರೆ ಕಾಂಗ್ರೆಸ್‌ ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ