ಅಂಗವಿಕಲರಿಗೆ ಯೋಜನೆಗಳ ಲಾಭ ದೊರಕಿಸಿ: ಪಾಟೀಲ

ಕೃತಕ ಅಂಗಾಂಗ ಜೋಡಣೆ ಸಾಧನ ಸಲಕರಣೆಗಳ ವಿತರಣೆ

Team Udayavani, Jul 8, 2019, 4:30 PM IST

ವಿಜಯಪುರ: ಬಿಎಲ್ಡಿಇ ಆಸ್ಪತ್ರೆಯ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಕೃತಕ ಅಂಗಾಂಗ ಜೋಡಣೆ ಉಚಿತ ಸಾಧನ ವಿತರಣಾ ಕಾರ್ಯಕ್ರಮ ಜರುಗಿತು.

ವಿಜಯಪುರ: ದಿವ್ಯಾಂಗ ಚೇತನರು ಎಲ್ಲರಂತೆ ಉತ್ತಮ ಜೀವನವನ್ನು ಹೊಂದಿ ಎಲ್ಲರೊಂದಿಗೆ ಸಹಬಾಳ್ವೆಯಿಂದ ತಮ್ಮ ಬದುಕನ್ನ ವೃದ್ಧಿಸಿಕೊಳ್ಳಲೆಂದೇ ರೂಪಿತವಾದ ಸರ್ಕಾರದ ಉತ್ತಮ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸಹಯೋಗದಲ್ಲಿ ನಗರದ ಬಿಎಲ್ಡಿಇ ಆಸ್ಪತ್ರೆಯ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕೃತಕ ಅಂಗಾಂಗ ಜೋಡಣೆ ಸಾಧನ ಸಲಕರಣೆಗಳ ಉಚಿತ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಲಕರಣೆ ವಿತರಿಸಿ ಅವರು ಮಾತನಾಡಿದರು.

ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವಿನ ಸಂಬಂಧ ವೃದ್ಧಿಯಾಗಿ ಸರ್ಕಾರಿ ಸೌಲಭ್ಯಗಳು ಜನರಿಗೆ ನೇರವಾಗಿ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿ ವೃಂದದವರು ಸಂಘ ಸಂಸ್ಥೆಗಳ ಸಹಕಾರದಿಂದ ಕಾರ್ಯ ಪ್ರವೃತ್ತರಾಗುವಂತೆ ತಿಳಿಸಿದ ಅವರು, ಜಿಲ್ಲೆಯ ಎಲ್ಲ ತಾಲೂಕು ಮತ್ತು ಗ್ರಾಮಾಂತರ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ದಿವ್ಯಾಂಗ ಚೇತನರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕೆಂದು ಹೇಳಿದರು.

ಬಿಎಲ್ಡಿಇ ಸಂಸ್ಥೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಹಾಗೂ ಸರ್ಕಾರದಿಂದ ಸಂಗ್ರಹಿಸಿದ ಹಣದಿಂದ ವಿವಿಧ ಸಲಕರಣೆಗಳನ್ನು ವಿತರಿಸುತ್ತಿದ್ದು ಈ ಉತ್ತಮ ಸಹಕಾರ ಮತ್ತು ಸೌಲಭ್ಯ ಪಡೆಯುವಲ್ಲಿ ವಂಚಿತರಾದ ದಿವ್ಯಾಂಗರು ಕಂಡು ಬಂದಲ್ಲಿ ಅಧಿಕಾರಿಗಳಿಗೆ ಮಾಹಿತಿ ಒದಗಿಸುವುದರ ಮೂಲಕ ಸಾರ್ವಜನಿಕರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಸಿಇಒ ವಿಕಾಸ್‌ ಸುರಳಕರ ಮಾತನಾಡಿ, ದಿವ್ಯಾಂಗರ ಜೀವನ ವೃದ್ಧಿಗಾಗಿಯೇ ರೂಪಿಸಲ್ಪಟ್ಟ ಅನೇಕ ಯೋಜನೆಗಳಿದ್ದು, ಇವುಗಳು ಜನರಿಗೆ ತಲುಪುವಲ್ಲಿ ಕಾರ್ಯ ಸಾಧುವಾಗಬೇಕಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಂಸ್ಥೆಗಳ ಸಹಕಾರ ಪಡೆದು ಸಮಿತಿಗಳನ್ನು ರಚಿಸಿಕೊಂಡು ಪ್ರತಿ ಹಳ್ಳಿಗಳಲ್ಲಿ ತೆರಳಿ ನೇರವಾಗಿ ಅವರ ಮಾಹಿತಿ ಪಡೆದು ಅವರಿಗೆ ದೊರಕುವ ಸರ್ಕಾರಿ ಸೌಲಭ್ಯ ಒದಗಿಸಬೇಕು ಎಂದು ಸಲಹೆ ನೀಡಿದರು.

ನೋಡಲ್ ಅಧಿಕಾರಿ ಡಾ| ಎಂ.ಸಿ. ಯದವಣ್ಣನವರ ಮಾತನಾಡಿ, 2013-14ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಲ್ಲಿವರೆಗೆ 138 ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು ಒಟ್ಟು 18,654 ಜನರನ್ನು ತಪಾಸಣೆ ಮಾಡಿ 1,767 ಜನ ವಿಕಲಚೇತನರಿಗೆ ಗುರುತಿನ ಚೀಟಿ ವಿತರಿಸಿದೆ ಎಂದರು.

ಎನ್‌ಡಿಪಿಸಿ ಹಾಗೂ ಬಿಎಲ್ಡಿಇ ಸಂಸ್ಥೆ ಧನಸಹಾಯದಿಂದ ರೆಡ್‌ಕ್ರಾಸ್‌ ಸಂಸ್ಥೆ ಸಹಯೋಗದೊಂದಿಗಿನ 270 ವಿಕಲಚೇತನರಿಗೆ ಕೃತಕ ಅಂಗಾಂಗ ಸಾಧನಗಳನ್ನು ವಿತರಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿವೆ ಎಂದು ಹೇಳಿದರು.

ಸಿ.ಬಿ. ಕುಂಬಾರ, ವಿ.ಜಿ. ಉಪಾಧ್ಯಾಯ, ನಿರ್ಮಲಾ ಸುರಪುರ, ವಿ.ಜಿ. ವಾರದ, ಡಾ| ವಿಜಯಕುಮಾರ ಕಲ್ಯಾಣಪ್ಪಗೊಳ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ