ಮಂಡ್ಯದಲ್ಲಿ  ಸುಮಲತಾ ಕಮಾಲ್‌, ಕಾಂಗ್ರೆಸ್‌-ಜೆಡಿಎಸ್‌ಗೆ ಸವಾಲ್‌

Team Udayavani, Mar 21, 2019, 1:53 AM IST

ಮಂಡ್ಯ : ಸ್ಪರ್ಧಿಸಿದರೆ ಮಂಡ್ಯದಿಂದ ಮಾತ್ರ ಎನ್ನುತ್ತಿದ್ದ ಸುಮಲತಾ, ಬುಧವಾರ ಮೈಸೂರಿನ ಚಾಮುಂಡಿ ದೇವಿಗೆ ನಮಿಸಿ,  “ಬಿ’ ಫಾರಂಗೆ ಪೂಜೆ ಸಲ್ಲಿಸಿ, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಅಂಬರೀಷ್‌ ಅಭಿಮಾನಿಗಳು ತಮ್ಮ ಪ್ರೀತಿಯ ಯಜಮಾನಿಗೆ ಅಭೂತಪೂರ್ವ ಸ್ವಾಗತ ಕೋರಿದರೆ, ಸ್ಥಳೀಯ ಕಾಂಗ್ರೆಸ್‌ ನಾಯಕರು ವರಿಷ್ಠರ ಮಾತಿಗೆ ಬೆಲೆ ಕೊಡದೆ, ಸುಮಲತಾರ ಬೆನ್ನಿಗೆ ನಿಂತರು. ಈ ಮಧ್ಯೆ ಕ್ಷೇತ್ರದಲ್ಲಿ ತಮ್ಮ ಪುತ್ರನನ್ನು ಶತಾಯ ಗತಾಯ ಗೆಲ್ಲಿಸಲೇ ಬೇಕೆಂಬ ಪಣ ತೊಟ್ಟಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಗಳವಾರ ರಾತ್ರಿಯಿಂದಲೇ ಕೆಆರ್‌ಎಸ್‌ನಲ್ಲಿ ಠಿಕಾಣಿ ಹೂಡಿ, ಮಗನ ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ.  ನಿಖೀಲ್‌ ಜಿಲ್ಲೆಯ ಜನರನ್ನು ಭೇಟಿ ಮಾಡುತ್ತ, ತಮ್ಮ ಪರ ಮತಯಾಚನೆ ಮುಂದುವರಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ನಗರದ ಸಿಲ್ವರ್‌ ಜ್ಯುಬಿಲಿ ಪಾರ್ಕ್‌ನಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಸುಮಲತಾ ಮಾತನಾಡಿದ ಪರಿ ಹೀಗಿತ್ತು:

 ನಾನು ನಿಮ್ಮೂರಿನ ಮಳವಳ್ಳಿ ಹುಚ್ಚೇಗೌಡರ ಸೊಸೆ, ಅಂಬರೀಷ್‌ ಧರ್ಮಪತ್ನಿ, ಅಭಿಷೇಕ್‌ ತಾಯಿ, ಈ ಮಣ್ಣಿನ ತಾಯಿ, ಮಂಡ್ಯ ಮಣ್ಣಿನ ಹೆಣ್ಣು ಮಗಳಾಗಿ ಜಿಲ್ಲೆಗೆ ಬಂದಿದ್ದೇನೆ.

 ಕಳೆದ 4 ತಿಂಗಳುಗಳಿಂದ ಮನೆಯಲ್ಲಿದ್ದೆ. ನೋವಿನಲ್ಲಿದ್ದ ನನಗೆ ಧೈರ್ಯ ತುಂಬಿದವರು ಈ ಜಿಲ್ಲೆಯ ಜನ.

ನೀವು ನನ್ನೊಂದಿಗೆ ಇಲ್ಲದಿದ್ದರೆ ನನ್ನನ್ನು ಮಂಡ್ಯದ ಸೊಸೆಯೇ ಅಲ್ಲ ಎಂದು ಹೇಳಿದ ಹಾಗೆ.

 ಪಂಚಭಾಷೆಗಳಲ್ಲಿ 200 ಚಿತ್ರಗಳಲ್ಲಿ ನಟಿಸಿರುವ ನನಗೆ ನನ್ನದೇ ಆದ ಹೆಸರಿದೆ. ನಾನು ರಾಜಕೀಯಕ್ಕೆ ಬಂದು ಹೆಸರು ಮಾಡುವ ಅಗತ್ಯವಿಲ್ಲ. ಆದರೆ ಜನಪರವಾಗಿ ನಿಲ್ಲಲು ಬಂದೆ.

 ಕಾಂಗ್ರೆಸ್‌ ಕದ ತಟ್ಟಿದೆ, ಮಂಡ್ಯ ನಿಮಗೆ ಬೇಡವೇ, ಅಂಬರೀಷ್‌ ನಿಮಗೆ ಬೇಡವೇ, ಅಭಿಮಾನಿಗಳು ಬೇಡವೇ ಎಂದು ಕೇಳಿದೆ. ಮೈತ್ರಿಧರ್ಮದ ನೆಪವೊಡ್ಡಿ ನನ್ನ ಸ್ಪರ್ಧೆಗೆ ಕಾಂಗ್ರೆಸ್‌ ನಾಯಕರು ನಿರಾಕರಣೆ ತೋರಿದರು.

 ದರ್ಶನ್‌, ಯಶ್‌ ನನ್ನ ಮನೆಯ ಮಕ್ಕಳು. ಚುನಾವಣೆಗೆ ಸ್ಪರ್ಧಿಸಿರುವ ತಾಯಿಗೋಸ್ಕರ ಮಕ್ಕಳು ಬರೋದು ತಪ್ಪಾ?

ನನಗೆ ಇಂದು ಇಡೀ ಚಿತ್ರರಂಗ ಬೆಂಬಲವಾಗಿ ನಿಂತಿದೆ. ಅದು ನನ್ನ ಘನತೆಯಲ್ಲ. ಅಂಬರೀಷ್‌ ಉಳಿಸಿಕೊಂಡು ಬಂದಿರುವ ನಿಜವಾದ ಪ್ರೀತಿ. 

 ನಾನೆಂದೂ ನಿಮ್ಮನ್ನು ಬಿಟ್ಟು ಹೋಗೋಲ್ಲ, ಬಿಟ್ಟು ಹೋದರೆ ಅಂಬಿ ಪತ್ನಿಯಾಗಿರಲು ಅರ್ಹಳಲ್ಲ.  ನಾನು ನಿಮ್ಮೂರ ಸೊಸೆ.

56 ಕೋ. ರೂ. ಒಡತಿ
ಸುಮಲತಾ ಅವರು 56 ಕೋ. ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 12,70,363 ಲ. ರೂ. ನಗದು ಇದೆ. 5.6 ಕೆಜಿ ಚಿನ್ನ, 31 ಕೆಜಿ ಬೆಳ್ಳಿ ಇದೆ. ಬೆಂಗಳೂರಿನ ಜೆ.ಪಿ.ನಗರ, ಉತ್ತರಳ್ಳಿಯಲ್ಲಿ ಮನೆ, ಫೇರ್‌ಫೀಲ್ಡ್‌ ಲೇಔಟ್‌ನಲ್ಲಿ ಒಂದು ಅಪಾರ್ಟ್‌ಮೆಂಟ್‌ ಹೊಂದಿದ್ದು, ಸುಮಾರು 61 ಲ. ರೂ. ನಷ್ಟು ಸಾಲ ಹೊಂದಿರುವುದಾಗಿ ಅಫಿದವಿತ್‌ನಲ್ಲಿ ತಿಳಿಸಿದ್ದಾರೆ.

ಪುತ್ರನ ಗೆಲುವಿಗೆ ಸಿಎಂ ಗೇಮ್‌ ಪ್ಲ್ಯಾನ್‌
ನಾಮಪತ್ರ ಸಲ್ಲಿಸಿದ ಬಳಿಕ ಸುಮಲತಾ ನಡೆಸಿದ ಮೆರವಣಿಗೆ, ಅದರಲ್ಲಿ ಪಾಲ್ಗೊಂಡ ಜನಸ್ತೋಮದ ಬಗ್ಗೆ ಮಂಗಳವಾರದಿಂದಲೂ ಕೆಆರ್‌ಎಸ್‌ನಲ್ಲಿ ಬೀಡುಬಿಟ್ಟಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಖುದ್ದು ಮಾಹಿತಿ ಸಂಗ್ರಹಿಸುತ್ತಿದ್ದರು. ಪೊಲೀಸ್‌, ಗುಪ್ತಚರ ಇಲಾಖೆ ಮೂಲಕ ಮಾಹಿತಿ ಪಡೆದುಕೊಂಡರು.

ನಾವು ಮಾಡ್ತಿರೋದು ತಪ್ಪಾದರೆ ಅದನ್ನೇ ಮಾಡ್ತೀವಿ: ಯಶ್‌
ನಾವು ಚುನಾವಣೆಯಲ್ಲಿ ಸುಮಲತಾ ಬೆಂಬಲಕ್ಕೆ ನಿಂತಿದ್ದೇವೆ. ನಾವು ಮಾಡ್ತಿರೋದರಲ್ಲಿ ಯಾವ ತಪ್ಪೂ ಇಲ್ಲ ಅನ್ನೋದು ನಮಗೆ ಗೊತ್ತಿದೆ. ಅದನ್ನು ತಪ್ಪು ಎಂದು ತಿಳಿದುಕೊಂಡವರಿಗೆ ನಾವು ಕೊನೆಯವರೆಗೂ ಆ ತಪ್ಪನ್ನೇ ಮಾಡುತ್ತೇವೆ ಎಂದು ಚಿತ್ರನಟ ಯಶ್‌ ಹೇಳಿದರು

ನಾವು ಅಧಿಕಾರದ ಲಾಭಕ್ಕಾಗಿ ಇಲ್ಲಿಗೆ ಬಂದಿಲ್ಲ. ಅಂಬರೀಷ್‌ ಮನೆಯ ಮಕ್ಕಳಾಗಿ ಅವರ ಋಣ ತೀರಿಸಲು ಬಂದಿದ್ದೇವೆ. ನಾವು ಸಿನೆಮಾ ಕಲಾವಿದರು. ಮಂಡ್ಯದ ಕಬ್ಬಿನ ಹಾಲು ಕುಡಿದು ಬೆಳೆದಿದ್ದೇವೆ. ಇಲ್ಲಿಯ ಜನರ ಪ್ರೀತಿಯನ್ನೂ ಸಂಪಾದಿಸಿದ್ದೇವೆ ಎಂದು ದಿಟ್ಟ ಉತ್ತರ ನೀಡಿದರು.

 ಅಂಬಿ ಪ್ರೀತಿ ನಮ್ಮನ್ನು ಇಲ್ಲಿಗೆ ಕರೆತಂದಿದೆ: ದರ್ಶನ್‌
ಅಂಬರೀಷ್‌ ಅವರ ಮೇಲಿನ ಪ್ರೀತಿ ನಮ್ಮನ್ನು ಇಲ್ಲಿಯವರೆಗೆ ಎಳೆದು ತಂದಿದೆ. ಪಕ್ಷವಾಗಿ ನಾವಿಲ್ಲಿಗೆ ಬಂದಿಲ್ಲ. ಪ್ರೀತಿಯಿಂದ ಬಂದಿದ್ದೇವೆ ಎಂದು ಚಿತ್ರನಟ ದರ್ಶನ್‌ ಹೇಳಿದರು. ನಮ್ಮ ಬಗ್ಗೆ ಯಾರು ಏನೇ ಮಾತನಾಡಲಿ. ನಮಗೆ ಯಾವುದೇ ಕೋಪ, ಬೇಜಾರು ಇಲ್ಲ. ನೊಂದುಕೊಳ್ಳಲ್ಲ. ಯಾರಿಗೂ ಏನೂ ಅನ್ನೋದಿಲ್ಲ. ಇಂದಿನಿಂದ ನಮ್ಮ ಪರೇಡ್‌ ಶುರುವಾಗಿದೆ. ಒಂದು ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.

ಹೈಕಮಾಂಡ್‌ಗೆ ಡೋಂಟ್‌ ಕೇರ್‌ ಎಂದ  ಕೈ’ ನಾಯಕರು
ನಾಮಪತ್ರ ಸಲ್ಲಿಕೆಯಿಂದ ಆರಂಭವಾಗಿ ಸಮಾವೇಶದಲ್ಲಿ ಭಾಗಿಯಾಗುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರು ಬಹಿರಂಗವಾಗಿಯೇ ಕಾಣಿಸಿಕೊಳ್ಳುವ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ಸೂಚಿಸಿದರು. ಸುಮಲತಾ ಜತೆ ವೇದಿಕೆ ಹಂಚಿಕೊಂಡರು. ಕೆಪಿಸಿಸಿ ಸದಸ್ಯರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ನಗರಸಭಾ ಸದಸ್ಯರು, ಜಿ. ಪಂ., ತಾ. ಪಂ. ಸದಸ್ಯರು, ಚುನಾಯಿತ ಜನಪ್ರತಿನಿಧಿಗಳೂ ಭಾಗಿಯಾಗಿದ್ದರು. ಜತೆಗೆ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಮನೆಯಿಂದಲೇ ಸುಮಲತಾ ನಾಮಪತ್ರ ಸಲ್ಲಿಸಲು ತೆರಳಿದ್ದು ವಿಶೇಷವಾಗಿತ್ತು.

ಜನವೋ, ಜನ…
ಮಂಡ್ಯ: ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ನಾಮಪತ್ರ ಸಲ್ಲಿಕೆ ಸಮಾರಂಭಕ್ಕೆ ಜನಸಾಗರವೇ ಹರಿದು ಬಂದಿತ್ತು. ಬೆಳಗ್ಗೆ 11.30ರ ವೇಳೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಳಿಸಿ ಹೊರ ಬಂದ ಸುಮಲತಾ, ತೆರೆದ ವಾಹವನ್ನೇರಿದರು. ಪುತ್ರ ಅಭಿಷೇಕ್‌, ನಟರಾದ ದರ್ಶನ್‌, ಯಶ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಸುಮಲತಾಗೆ ಜೊತೆಯಾಗಿ ನಿಂತರು. ಸುಮಲತಾ ಸಮಾವೇಶದ ನೇರಪ್ರಸಾರವನ್ನು ಜನರು ವೀಕ್ಷಣೆ ಮಾಡ ದಂತೆ ಕೇಬಲ್‌ ಕಟ್‌ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ