ಪ್ರಜೆಗಳ ಸ್ವಾಸ್ಥ್ಯಕ್ಕೂ ದೇಶದ ಪ್ರಗತಿಗೂ ಯೋಗ ಪೂರಕ

Team Udayavani, Jun 24, 2019, 9:48 AM IST

ಬದುಕಿನಲ್ಲಿ ಯೋಗ-ಭಾಗ್ಯ ಒಟ್ಟಿಗೆ ಸಾಗಬೇಕೆಂದರೆ “ಯೋಗ’ ಇರಲೇಬೇಕು. ಇಂದಿನ “ಯೋಗ ಜೀವನ ‘ ಅಂಕಣದಲ್ಲಿ ಯೋಗ ಗುರು ಡಾ| ಕೆ. ಕೃಷ್ಣ ಭಟ್‌ ಬದುಕಿಗೆ ಯೋಗದ ಅಗತ್ಯವನ್ನು ವಿವರಿಸಿದ್ದಾರೆ.

ಮಂಗಳೂರು: ಪ್ರಪಂಚದಲ್ಲಿಯೇ ಅತೀ ಹೆಚ್ಚು ಯುವಜನತೆ ಇರುವ ದೇಶ ಭಾರತ. ಯುವಕರೇ ದೇಶದ ಬೆನ್ನೆಲುಬು. ಯುವಕರು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಆರೋಗ್ಯವಂತರಾದಾಗ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಿದೆ. ಇದಕ್ಕೆ ನಿರಂತರ ಯೋಗಾಭ್ಯಾಸ ಅತೀ ಮುಖ್ಯ.

ವೃದ್ಧರಿಗೆ ಸಾಕಷ್ಟು ಅನುಭವ, ಜ್ಞಾನವಿರುತ್ತದೆ. ಆದರೆ ವೃದ್ಧಾಪ್ಯದಲ್ಲಿ ಕಾಡುವ ದೈಹಿಕ ದೌರ್ಬಲ್ಯ, ಬೌದ್ಧಿಕ ವಿಚಲನೆ-ವಿಸ್ಮತಿಗಳಿಂದ ಅವರ ಜ್ಞಾನ, ಅನುಭವ ಸಮಾಜದ ಪಾಲಿಗೆ ನಿರುಪಯೋಗಿ ಎಂಬಂತಾಗುತ್ತದೆ. ಈ ತೊಂದರೆಯನ್ನು ಯೋಗಾಭ್ಯಾಸದಿಂದ ದೂರ ಮಾಡಲು ಸಾಧ್ಯವಿದೆ. ಪ್ರತೀನಿತ್ಯ ಯೋಗ ಮಾಡುವುದರಿಂದ ಮನಸ್ಸು ಸಮಾಧಾನಗೊಂಡು ಶಾಂತಿಯಿಂದಿರುತ್ತದೆ. ಸಮಾಜದಲ್ಲಿಶೇ.5ರಷ್ಟು ಮಂದಿ ಶಾಂತ ಸ್ವಭಾವದವರಾಗಿದ್ದರೂ ಅದರಿಂದ ಪ್ರಭಾವಿತಗೊಂಡು ಉಳಿದವರಲ್ಲೂ ಶಾಂತಿ ನೆಲೆಸುತ್ತದೆ. ಯೋಗದಿಂದ ಸಾಮಾಜಿಕ ಶಾಂತಿ ಸಾಧ್ಯ ಎನ್ನುವುದು ಇದೇ ಕಾರಣಕ್ಕೆ.

ದೇಶದಲ್ಲಿ ಈಗ ಯುವ ಸಮೂಹ ದೊಡ್ಡಪ್ರಮಾಣದಲ್ಲಿದೆ. ಇದು ಮಹತ್ತರ ಬದಲಾವಣೆಯನ್ನು ಉಂಟುಮಾಡಬಲ್ಲ ಸಂಪನ್ಮೂಲ.ಈ ಕಾಲದ ಹೆಚ್ಚಿನ ಮಂದಿ ಯುವಕ-ಯುವತಿಯರು ದೈಹಿಕವಾಗಿ ಶಕ್ತಿವಂತರಾದರೂ ಮಾನ
ಸಿಕವಾಗಿ ದುರ್ಬಲರು. ನಮ್ಮನ್ನು ಪ್ರಭಾವಿಸಿರುವ ಪಾಶ್ಚಾತ್ಯ ಜೀವನ ಶೈಲಿ ಇದಕ್ಕೆ ಒಂದು ಕಾರಣ. ನಿಯತವಲ್ಲದ ಆಹಾರಕ್ರಮ, ದೈಹಿಕ
ಚಟುವಟಿಕೆಯಿಲ್ಲದ ದೈನಿಕ, ವಿವಿಧ ಹವ್ಯಾಸಗಳಿಂದ ಯೌವ್ವನ ಸುಖವಾಗಿ ಕಳೆದರೂ ವಯಸ್ಸು ಮಾಗಿದಾಗ ವಿವಿಧ ದೈಹಿಕ-ಮಾನಸಿಕ ಸಮಸ್ಯೆಗಳು ಬಾಧಿಸಲಾರಂಭಿಸುತ್ತವೆ. ಇದಕ್ಕೆಲ್ಲ ಮೂಲ ಕಾರಣ ಮನಸ್ಸು. ಮನಸ್ಸನ್ನು ಸ್ಥಿಮಿತದಲ್ಲಿರಿಸಲು ನಿತ್ಯ ಯೋಗಾಭ್ಯಾಸ ಸಹಕಾರಿ.

ಯೋಗಾಭ್ಯಾಸವು ವ್ಯಕ್ತಿಯ ಮನಸ್ಸು-ದೇಹಗಳನ್ನು ಏಕಸೂತ್ರದಡಿ ತಂದು ಶ್ರುತಿಗೊಳಿಸುತ್ತದೆ. ಯೋಗದಿಂದ ಮಾನಸಿಕ, ದೈಹಿಕ, ಬೌದ್ಧಿಕ, ಸಾಮಾಜಿಕ ಆರೋಗ್ಯ ದೃಢವಾಗಿ ಸ್ಥಾಪನೆಯಾಗುವುದು. ಯೋಗದಿಂದ ಪ್ರಯೋಜನ ಲಭಿಸಬೇಕಾದರೆ ನಿರಂತರ ಅಭ್ಯಾಸ ಮಾಡಬೇಕು. ಅದು ಒಂದು ದಿನಕ್ಕೆ ಸೀಮಿತವಾಗಬಾರದು. ದೇಶದ ಸುರಕ್ಷೆ, ಸುಭಿಕ್ಷೆಯಲ್ಲಿ ಜನರ ಆರೋಗ್ಯ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಎಷ್ಟೇ ಸಂಪದ್ಭರಿತವಾಗಿದ್ದರೂ ಜನರ ಸ್ವಾಸ್ಥ್ಯ ಸರಿಯಿಲ್ಲದಿದ್ದರೆ ಸದೃಢ ದೇಶ ನಿರ್ಮಾಣ ಸಾಧ್ಯವಿಲ್ಲ. ದೇಶದ ಜನರು ಸ್ವಸ್ಥರಾಗಿರಲು ಯೋಗದ ಪಾತ್ರ ಬಲು ಮುಖ್ಯವಾದುದು.

1977ರಷ್ಟು ಹಿಂದೆಯೇ ತಿರುಪತಿಯಲ್ಲಿ ಪಿಜಿ ಡಿಪ್ಲೊಮಾ ಇನ್‌ ಯೋಗ ತರಬೇತಿ ಪ್ರಾರಂಭಿಸಿದ ಕೀರ್ತಿ ಡಾ| ಕೃಷ್ಣ ಭಟ್‌ ಅವರಿಗೆ ಸಲ್ಲುತ್ತದೆ. 1980ರಲ್ಲಿ ಮಣಿಪಾಲದ ಕೆಎಂಸಿ ಯೋಗ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದವರಿವರು. 1986ರಲ್ಲಿ ಮಣಿಪಾಲದ ಕೆಎಂಸಿಯಲ್ಲಿ ಮಂಗಳೂರು ವಿವಿ ಸಂಯೋಜಿತವಾಗಿ ಆರಂಭಗೊಂಡ ಪಿಜಿ ಡಿಪ್ಲೊಮಾ ಇನ್‌ ಯೋಗ ಥೆರಪಿ ವಿಭಾಗದ ಪ್ರೊಫೆಸರ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. 1998ರ ಡಿಸೆಂಬರ್‌ನಿಂದ 2012ರ ಜನವರಿಯ ವರೆಗೆ ಮಂಗಳೂರು ವಿವಿಯಲ್ಲಿ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದರು. 2000ರಿಂದ ಮಂಗಳೂರಿನ ಬಲ್ಮಠದಲ್ಲಿ ಭಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌
ಹೋಲಿಸ್ಟಿಕ್‌ ಹೆಲ್ತ್‌ನಲ್ಲಿ ಯೋಗ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ| ಕೃಷ್ಣ ಭಟ್‌ ಅವರ ಯೋಗ ಗುರು ಪ್ರೊ| ಪಟ್ಟಾಭಿ ಜೋಯಿಸರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ