ಉಡುಪಿಯಲ್ಲಿ  ಭಕ್ತರಿಂದ ಅಂತಿಮ ದರ್ಶನ

Team Udayavani, Jul 20, 2018, 9:38 AM IST

ಉಡುಪಿ: ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಪಾರ್ಥಿವ ಶರೀರವನ್ನು ಗುರುವಾರ ಅಪರಾಹ್ನ 3.30ಕ್ಕೆ ರಥಬೀದಿಗೆ ತಂದಾಗ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ಪಾರ್ಥಿವ ಶರೀರಕ್ಕೆ ಕಾವಿವಸ್ತ್ರವನ್ನು ಉಡಿಸಿ ಸಾಸಿವೆ, ಉಪ್ಪು, ಕಾಳು ಮೆಣಸು,ಹತ್ತಿ, ಪಚ್ಚೆ ಕರ್ಪೂರ ಮತ್ತು ಪೂಜಾ ಸಾಮಗ್ರಿಗಳಿದ್ದ ಬುಟ್ಟಿ ಪಲ್ಲಕಿಯಲ್ಲಿ ರಿಸಿ ರಥಬೀದಿಯ ಶೀರೂರು ಮಠಕ್ಕೆ ತರಲಾಯಿತು. ಮಠದ ದೇವರಿಗೆ ಪ್ರದಕ್ಷಿಣೆ ಬಂದ ಬಳಿಕ ಸ್ನಾನ ಮಾಡಿಸ ಲಾಯಿತು. ಪುನಃ ಪ್ರದಕ್ಷಿಣೆ ತಂದು ಶ್ರೀ ದೇವರ ಮುಂದೆ ಕುಳ್ಳಿರಿಸಲಾಯಿತು. ದೇವರ ಮಂಗಳಾ ರತಿಯ ಬಳಿಕ ಶ್ರೀಗಳಿಗೆ ಆರತಿ ಬೆಳಗಲಾಯಿತು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಶಾಸಕ ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ಅಂತಿಮ ನಮನ ಸಲ್ಲಿಸಿದರು. ಅನಂತರ ಸುಮಾರು 1 ತಾಸು ಶೀರೂರು ಮಠದ ಮುಂಭಾಗ ಅಂತಿಮ ನಮನಕ್ಕೆ ಅವಕಾಶ ನೀಡಲಾಯಿತು. ಕೇಮಾರು ಶ್ರೀ ಈಶ ವಿಟಲದಾಸ ಸ್ವಾಮೀಜಿ ಉಪಸ್ಥಿತರಿದ್ದರು. 

ಕನಕನ ಕಿಂಡಿ ಮೂಲಕ ದರ್ಶನ 
ಮರಣೋತ್ತರ ಪರೀಕ್ಷೆ ನಡೆಸಿದ ಕಾರಣ ಪಾರ್ಥಿವ ಶರೀರವನ್ನು ಶ್ರೀಕೃಷ್ಣ ಮಠದೊಳಗೆ ಒಯ್ಯದೆ ಕನಕನ ಕಿಂಡಿ ಮೂಲಕ ಕೃಷ್ಣದರ್ಶನ ಮಾಡಿಸಲಾಯಿತು. ಪರ್ಯಾಯ ಶ್ರೀ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಆರತಿಯೆತ್ತಿ ಶ್ರೀಗಳಿಗೂ ಬೆಳಗಿದರು. ಅನಂತರ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರಿಗೆ ದೇವರಿಗೆ ಸಮರ್ಪಿಸಿದ ತುಳಸಿ ಮಾಲೆಯನ್ನು ಅರ್ಪಿಸಿದರು. ಅಲ್ಲಿಂದ ಚಂದ್ರಮೌಳೀಶ್ವರ, ಅನಂತೇಶ್ವರ ದೇವರ ದರ್ಶನ ಮಾಡಿಸಿ ರಥಬೀದಿಗೆ ಪ್ರದಕ್ಷಿಣೆ ಬಂದು ಹಿರಿಯಡಕ ಸಮೀಪದ ಶೀರೂರು ಮೂಲ ಮಠಕ್ಕೆ ಕರೆದೊಯ್ಯಲಾಯಿತು. 

ಹಿಂಬಾಗಿಲಿನಿಂದ ಪ್ರವೇಶ
ಬೆಳಗ್ಗೆ 11 ಗಂಟೆ ಸುಮಾರಿಗೆ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿ
ಯಿದ್ದುದರಿಂದ ಸಾಕಷ್ಟು ಮಂದಿ ಭಕ್ತರು ಸೇರಿದ್ದರು. ಮಧ್ಯಾಹ್ನ ವೇಳೆ ಜನ ಕೊಂಚ ಕಡಿಮೆಯಾದರೂ ಶ್ರೀಗಳ ಶರೀರವನ್ನು ಮಠದ ಬಳಿ ತರುವಷ್ಟರಲ್ಲಿ ಮತ್ತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಹೀಗಾಗಿ ಶೀರೂರು ಮಠಕ್ಕೆ ಶ್ರೀಗಳ ಶರೀರವನ್ನು ಹಿಂಬಾಗಿಲ ಮೂಲಕ ತರಲಾಯಿತು.

ಸೋದೆ ಮಠದ ನೇತೃತ್ವ
ಶ್ರೀಗಳ ವೃಂದಾವನ ಸೇರ್ಪಡೆಯ ಎಲ್ಲ ವಿಧಿವಿಧಾನಗಳನ್ನು ಸೋದೆ ಮಠದ ನೇತೃತ್ವದಲ್ಲಿ ನಡೆಸಲಾಯಿತು.
ಶಿಷ್ಯರನ್ನು ಗುರುತಿಸಿದ್ದರೆ  ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ತಮ್ಮ ಪಟ್ಟಶಿಷ್ಯನನ್ನು ಗುರುತಿಸಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ. ಸೂಕ್ತ ಸಮಯದಲ್ಲಿ ಘೋಷಿಸಲು ಚಿಂತನೆ ನಡೆಸಿದ್ದರೆಂದು ಅವರ ಆಪ್ತ ಮೂಲಗಳು ತಿಳಿಸಿವೆ.

ನಿರಂತರ ನಗಾರಿ ವಾದನ

ಅಷ್ಟಮಠಗಳ ಶ್ರೀಗಳು ಅಸ್ತಂಗತರಾದರೆ ಸಂತಾಪ ಸೂಚಕವಾಗಿ 54 ಬಾರಿ ಬೆಡಿ ಸಿಡಿಸಲಾಗುತ್ತದೆ ಮತ್ತು ನಿರಂತರವಾಗಿ ನಗಾರಿ ಬಾರಿಸಲಾಗುತ್ತದೆ. ಹಿಂದೆ ಈ ಬೆಡಿ ಸದ್ದು ಸುಮಾರು 15ರಿಂದ 20 ಕಿ.ಮೀ. ವರೆಗೆ ಕೇಳಿಸುತ್ತಿತ್ತು. ಈ ಮೂಲಕವೇ ಕೃಷ್ಣ ಮಠದಲ್ಲಿ ಶ್ರೀಗಳು ನಿಧನರಾಗಿದ್ದಾರೆ ಎನ್ನುವ ವಾರ್ತೆ ಊರಿ ನವರಿಗೆ ತಿಳಿಯುತ್ತಿತ್ತು. ಗುರುವಾರ ಕೃಷ್ಣ ಮಠದ ನಗಾರಿ ಬಾರಿಸುವ ಸದಾಶಿವ ಮಧ್ಯಾಹ್ನದಿಂದಲೇ ನಗಾರಿ ಬಾರಿಸುತ್ತಿದ್ದರು. ನಗಾರಿ ಚರ್ಮ ಸಡಿಲು ಬಿಟ್ಟು ಬಾರಿಸುವ ಇದನ್ನು ಹಸಿ ನಗಾರಿ ಎನ್ನುತ್ತಾರೆ. ಇದರ ಧ್ವನಿ ಭಿನ್ನವಾಗಿರುತ್ತದೆ. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ