ಬಿಜೆಪಿ ಅಂತಿಮ ಕಾಂಗ್ರೆಸ್‌ ಕಸರತ್ತು

ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಸಭೆ

Team Udayavani, Apr 26, 2019, 6:00 AM IST

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾ ವಣೆಗೆ ಮತದಾನ ಮುಗಿದ ಬೆನ್ನಲ್ಲೇ ಸದ್ಯದಲ್ಲೇ ನಡೆಯಲಿರುವ ಎರಡು ಉಪಚುನಾವಣೆಗಳಿಗೆ ರಾಜಕೀಯ ಪಕ್ಷಗಳಿಂದ ಬಿರುಸಿನ ಸಿದ್ಧತೆ ಆರಂಭವಾಗಿದೆ. ಬೆಂಗಳೂರಿನಲ್ಲಿ ಕೋರ್‌ ಕಮಿಟಿ ಸಭೆ ನಡೆಸಿರುವ ಬಿಜೆಪಿ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮ ಮಾಡಿದೆ. ಕಾಂಗ್ರೆಸ್‌ ಕೂಡ ಈ ಎರಡೂ ಕ್ಷೇತ್ರಗಳ ಜಿಲ್ಲಾ ಮುಖಂಡರ ಸಭೆ ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಿಸಿದೆ.

ಬಿಜೆಪಿಯಿಂದ ಚಿಂಚೋಳಿಯಲ್ಲಿ ಡಾ. ಉಮೇಶ್‌ ಜಾಧವ್‌ ಅವರ ಕುಟುಂಬದವರೇ ಆದ ಅವರ ಸಹೋದರ ರಾಮಚಂದ್ರ ಜಾಧವ್‌ ಅಥವಾ ಪುತ್ರ ಡಾ. ಅವಿನಾಶ್‌ ಜಾಧವ್‌ಗೆ ಟಿಕೆಟ್ ನೀಡುವ ಸಂಭವವಿದೆ. ಅವಿನಾಶ್‌ ಜಾಧವ್‌ ಕಲಬುರಗಿಯ ಕೆಬಿಎನ್‌ ಆಸ್ಪತ್ರೆಯಲ್ಲಿ ಎಂಡಿ ಮುಗಿಸಿ ಅಲ್ಲೇ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಇವರಿಬ್ಬರಲ್ಲಿ ಯಾರು ಎಂಬುದು ಅಧಿಕೃತವಾಗುವ ಸಂಭವವಿದೆ. ಇಲ್ಲಿ ಸುನೀಲ್ ವಲ್ಯಾಪುರೆ ಅವರು ಸ್ಪರ್ಧಿಸಲು ಆಸಕ್ತಿ ತೋರಿದ್ದರು. ಅಲ್ಲದೆ, ನಾಮದೇವ್‌ ರಾಥೋಡ್‌ ಹಾಗೂ ಸಂಜಯ್‌ ಯಾಕಾಪುರೆ ಅವರ ಹೆಸರು ಸಹ ಇತ್ತು. ಉಮೇಶ್‌ ಜಾಧವ್‌ ಸೂಚಿಸಿದವರಿಗೆ ಟಿಕೆಟ್ ನೀಡಲಾಗುವುದು ಎಂದು ಪಕ್ಷ ಈ ಹಿಂದೆ ನೀಡಿದ್ದ ಮಾತಿನ ಅನ್ವಯ ಅವರ ಕುಟುಂಬದವರಿಗೇ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳ ತಿಳಿಸಿವೆ.

ಆದರೆ, ಕಾಂಗ್ರೆಸ್‌ನಲ್ಲಿ ಈ ಕ್ಷೇತ್ರದಲ್ಲಿ ಸದ್ಯಕ್ಕೆ ಯಾವುದೇ ಅಭ್ಯರ್ಥಿಯ ಹೆಸರು ಚರ್ಚೆಯಾಗಿಲ್ಲ. ಇಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸುವ ಹೆಸರೇ ಅಂತಿಮವಾಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರಲ್ಲಿ ಸಭೆ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರು, ಖರ್ಗೆ ಅವರ ಜತೆ ಚರ್ಚೆ ನಡೆಸಲಿದ್ದಾರೆ.

ಕುಂದಗೋಳಕ್ಕೆ ಚಿಕ್ಕನಗೌಡರ ಅಂತಿಮ: ಅತ್ತ ಕುಂದಗೋಳದಲ್ಲಿ ಬಿಜೆಪಿ ಎಸ್‌.ಐ. ಚಿಕ್ಕನ ಗೌಡರ ಅವರ ಹೆಸರನ್ನೇ ಅಂತಿಮ ಮಾಡಿ ದೆಹಲಿಗೆ ಕಳುಹಿಸಿಕೊಟ್ಟಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿ.ಎಸ್‌.ಶಿವಳ್ಳಿ ಅವರ ವಿರುದ್ಧ ಚಿಕ್ಕನಗೌಡರ ಕೇವಲ 634 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇಲ್ಲಿಂದ 2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಆರ್‌. ಪಾಟೀಲ್ ಅವರು ಕುಂದಗೋಳ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದರು. ಆದರೆ, ಇವರ ಹೆಸರು ಪರಿಗಣಿಸಿಲ್ಲ.

ಇನ್ನು ಕಾಂಗ್ರೆಸ್‌ನಲ್ಲಿ ಮಾತ್ರ ಕುಂದಗೋಳ ಕ್ಷೇತ್ರ ಕಗ್ಗಂಟಾಗುವ ಲಕ್ಷಣ ಕಾಣಿಸಿಕೊಂಡಿದೆ. ಅಕಾಲಿಕ ನಿಧನ ಹೊಂದಿರುವ ಸಚಿವ ಸಿ.ಎಸ್‌. ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಸ್ಥಳೀಯ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿ ಸ್ಪರ್ಧಿಸಲು ಆರು ಜನ ಮಾಜಿ ಶಾಸಕರ ಪುತ್ರರು ಸಹಿತ ಹತ್ತು ಮಂದಿ ಉತ್ಸುಕತೆ ತೋರಿದ್ದು, ಟಿಕೆಟ್ಗಾಗಿ ಮನವಿ ಮಾಡಿದ್ದಾರೆ. ಆದರೆ, ಶಿವಳ್ಳಿ ಅವರ ಪತ್ನಿಗೆ ಟಿಕೆಟ್ ನೀಡಲು ರಾಜ್ಯ ನಾಯಕತ್ವ ಒಲವು ವ್ಯಕ್ತಪಡಿಸಿದೆ. ಕಳೆದ ಸಲ ಕಡಿಮೆ ಅಂತರದಿಂದ ಗೆಲುವು ಸಾಧಿಸಿರುವುದರಿಂದ ಕುಸುಮಾ ಅವರನ್ನು ಕಣಕ್ಕಿಳಿಸುವುದರಿಂದ ಅನುಕಂಪದ ಆಧಾರ ದಲ್ಲಿ ಮತ ಪಡೆಯಬಹುದು ಎಂಬ ಲೆಕ್ಕಾಚಾರ ಪಕ್ಷದ ನಾಯಕರದ್ದಾಗಿದೆ.

ಈ ಮಧ್ಯೆ, ಉಪಚುನಾವಣೆ ನಡೆಯುವ ಎರಡೂ ಕ್ಷೇತ್ರಗಳು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಂದೊಡ್ಡುವ ಸಾಧ್ಯತೆಗಳೂ ಇವೆ. ಚಿಂಚೋಳಿ ಕ್ಷೇತ್ರದ ಟಿಕೆಟ್ ಕೈತಪ್ಪುವ ಸಾಧ್ಯತೆ ಇರುವ ಬಿಜೆಪಿಯ ಸುನಿಲ್ ವಲ್ಯಾಪುರೆ ಅವರು ಶುಕ್ರವಾರ ಬೆಂಬಲಿಗರ ಸಭೆ ಕರೆದಿದ್ದು ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮನುಷ್ಯನಿಗೆ ವಯಸ್ಸು ಸರಿದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಕಣ್ಣಿನ ದೃಷ್ಟಿ ಮಂದವಾಗುವುದು, ತಲೆನೋವು ಬರುವುದು ಮೊದಲಾದ ಸಮಸ್ಯೆಗಳ ಉಂಟಾಗುತ್ತದೆ....

  • ಮಾರುತಿ ಸುಝುಕಿ 800 ಜಮಾನಾ ಮುಗಿದು 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಆಲ್ಟೋ 800 ಮಾರುಕಟ್ಟೆಗೆ ಬಂದಿದ್ದಾಗ ದೊಡ್ಡ ಸುದ್ದಿಯಾಗಿತ್ತು. ಬಳಿಕ 2012ರಲ್ಲಿ ಹೊಸ ಆಲ್ಟೋ...

  • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

  • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...