ಯಾವುದೇ ಪ್ರಶ್ನೆಗೆ ಉತ್ತರ ಕೊಡಲ್ಲ;HDK, ಸಿದ್ದರಾಮಯ್ಯ ಟ್ವೀಟ್ ನಲ್ಲಿ ಹೇಳಿರುವುದೇನು?
Team Udayavani, May 13, 2019, 3:41 PM IST
ಹುಬ್ಬಳ್ಳಿ/ಬೆಂಗಳೂರು:ನಾನು ಯಾವುದೇ ಪ್ರಶ್ನೆಗೆ ಉತ್ತರ ಕೊಡಲ್ಲ. ಯಾರ ಬಗ್ಗೆಯೂ ಮಾತನಾಡಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್, ಜೆಡಿಎಸ್ ಮುಖಂಡರ ಹೇಳಿಕೆ ಕುರಿತು ಸೋಮವಾರ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಕುಂದಗೋಳ ಕ್ಷೇತ್ರ ವಿಧಾನಸಭೆಯ ಉಪ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರ ಜೊತೆ ಚರ್ಚೆ ನಡೆಸಲು ಹುಬ್ಬಳ್ಳಿಗೆ ಆಗಮಿಸಿದ್ದ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಮೈತ್ರಿಧರ್ಮ ನನ್ನ ಬಾಯಿ ಕಟ್ಟಿಹಾಕಿದೆ; ಸಿದ್ದರಾಮಯ್ಯ
ಜೆಡಿಎಸ್ ಅಧ್ಯಕ್ಷ ವಿಶ್ವನಾಥ್ ಅವರ ಹೊಟ್ಟೆಕಿಚ್ಚಿನ ಮಾತುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಮೊದಲು ಜಿಟಿ ದೇವೇಗೌಡ, ಈಗ ವಿಶ್ವನಾಥ್…ಮುಂದೆ ಯಾರು ಗೊತ್ತಿಲ್ಲ. ನನ್ನನ್ನು ಗುರಿಯಾಗಿಸಿದ ಇಂತಹ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸುವುದು ಒಳಿತು.
ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿಧರ್ಮ ನನ್ನ ಬಾಯಿ ಕಟ್ಟಿಹಾಕಿದೆ. ಇದರಿಂದಾಗಿ ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ವಿಶ್ವನಾಥ್ ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು. ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.