ಬೆಸ್ಕಾಂನಲ್ಲಿ ದಾಖಲೆ ವಿದ್ಯುತ್‌ ಬೇಡಿಕೆ

Team Udayavani, May 4, 2019, 3:10 AM IST

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಏ.26ರಂದು ಬರೋಬ್ಬರಿ 6,156 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆ ಏರಿಕೆಯಾಗಿದ್ದು, ಬೆಸ್ಕಾಂ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಸದ್ಯ ಸರಾಸರಿ 5,500 ಮೆ.ವ್ಯಾ.ನಷ್ಟು ಬೇಡಿಕೆಯಿದ್ದು, ಅಷ್ಟೂ ಪ್ರಮಾಣದಲ್ಲಿ ವಿದ್ಯುತ್‌ ಪೂರೈಸುವಲ್ಲಿ ಇಂಧನ ಇಲಾಖೆ ಯಶಸ್ವಿಯಾಗಿದೆ.

ವಿದ್ಯುತ್‌ ಉಪಕರಣಗಳ ಬಳಕೆ ಪ್ರಮಾಣ ಏರಿಕೆ, ಕೈಗಾರಿಕಾ ವಿದ್ಯುತ್‌ ಬಳಕೆ ಹೆಚ್ಚಳ, ಕೃಷಿ ಪಂಪ್‌ಸೆಟ್‌ ಬಳಕೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಅದರಲ್ಲೂ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಪೈಕಿ ಬೆಂಗಳೂರು ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್‌ ಬಳಕೆಯಾಗುತ್ತಿದ್ದು, ಬೇಡಿಕೆಯಲ್ಲಿ ಇನ್ನಷ್ಟು ಹೊಸ ದಾಖಲೆ ಸೃಷ್ಟಿಸುವುದೇ ಎಂಬ ಕುತೂಹಲ ಮೂಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಬೇಡಿಕೆ ಗರಿಷ್ಠ ಮಿತಿ ತಲುಪಿದೆ.

ರಾಜ್ಯದಲ್ಲಿ ನಿತ್ಯ ಸರಾಸರಿ ವಿದ್ಯುತ್‌ ಬೇಡಿಕೆ 10,500 ಮೆಗಾವ್ಯಾಟ್‌ನಿಂದ 11,500 ಮೆ.ವ್ಯಾ.ನಷ್ಟಿದೆ. ಬೆಸ್ಕಾಂ ಅಡಿಯಲ್ಲಿರುವ ಎಂಟು ಜಿಲ್ಲೆಗಳಲ್ಲಿ ನಿತ್ಯ ಸರಾಸರಿ 5,500 ಮೆ.ವ್ಯಾ.ವಿದ್ಯುತ್‌ ಬೇಡಿಕೆ ಇದೆ.

ಅಂದರೆ ರಾಜ್ಯದಲ್ಲಿ ಬಳಕೆಯಾಗುವ ವಿದ್ಯುತ್‌ ಪ್ರಮಾಣದಲ್ಲಿ ಸುಮಾರು ಶೇ. 45ರಿಂದ ಶೇ.50ರಷ್ಟು ವಿದ್ಯುತ್‌ ಬೆಸ್ಕಾಂ ವ್ಯಾಪ್ತಿಯೊಂದರಲ್ಲೇ ಬಳಕೆಯಾಗುತ್ತಿದೆ. ಉಳಿದ ನಾಲ್ಕು ಎಸ್ಕಾಂ ವ್ಯಾಪ್ತಿಯ 22 ಜಿಲ್ಲೆಗಳಲ್ಲಿ ಶೇ. 50ರಿಂದ ಶೇ. 55ರಷ್ಟು ವಿದ್ಯುತ್‌ ಬಳಕೆಯಾಗುತ್ತಿದೆ.

ದಾಖಲೆ ಬೇಡಿಕೆ: ದಿನ ಕಳೆದಂತೆ ವಿದ್ಯುತ್‌ ಬಳಕೆ ಹಾಗೂ ವಿದ್ಯುತ್‌ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ವಿದ್ಯುತ್‌ ಬೇಡಿಕೆಯೂ ಹೆಚ್ಚಾಗುತ್ತಲೇ ಇದೆ. ಈ ಬಾರಿಯೂ ಬೆಸ್ಕಾಂ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ.

ಕಳೆದ ಏ.26ರಂದು 24 ಗಂಟೆಗಳಲ್ಲಿ 6,156 ಮೆ.ವ್ಯಾ.ವಿದ್ಯುತ್‌ ಬೇಡಿಕೆ ಸೃಷ್ಟಿಯಾಗಿದ್ದು, ಅಷ್ಟು ಪ್ರಮಾಣದಲ್ಲಿ ವಿದ್ಯುತ್‌ ಪೂರೈಕೆಯಾಗಿದೆ. ಇದು ಬೆಸ್ಕಾಂ ಇತಿಹಾಸದಲ್ಲೇ ಸಾರ್ವತ್ರಿಕ ದಾಖಲೆ ಬೇಡಿಕೆ ಎನಿಸಿದೆ.

ಬೇಡಿಕೆ ಹೆಚ್ಚಳಕ್ಕೆ ಕಾರಣ: ಬೆಂಗಳೂರು ಸೇರಿ ರಾಜ್ಯದಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಉಷ್ಣಾಂಶ ಶೇ.1ರಿಂದ ಶೇ. 2ರಷ್ಟು ಏರಿಕೆಯಾಗಿದೆ. ಇದರಿಂದ ಸಹಜವಾಗಿಯೇ ಬಿಸಿಲ ಬೇಗೆಯಿಂದ ಪರಿಹಾರ ಕೊಳ್ಳಲು ಜನ ನಾನಾ ಎಲೆಕ್ಟ್ರಿಕಲ್‌ ಸಾಧನಗಳ ಮೊರೆ ಹೋಗಿದ್ದಾರೆ.

ಮುಖ್ಯವಾಗಿ ಹವಾನಿಯಂತ್ರಣ ಸಾಧನಗಳು, ಕೂಲರ್‌ಗಳು, ಫ್ಯಾನ್‌ ಇತರೆ ಎಲೆಕ್ಟ್ರಾನಿಕ್‌ ಉಪಕರಣಗಳ ಬಳಕೆ ಹೆಚ್ಚಾಗಿದೆ. ಜತೆಗೆ ಕೈಗಾರಿಕಾ ವಲಯದಿಂದಲೂ ವಿದ್ಯುತ್‌ ಬಳಕೆ ಪ್ರಮಾಣ ಹೆಚ್ಚಾಗಿದೆ. ಜತೆಗೆ ಕೃಷಿ ಪಂಪ್‌ಸೆಟ್‌ ಬಳಕೆಯೂ ಹೆಚ್ಚಾಗಿದೆ.

ಈ ಕಾರಣಗಳಿಂದಾಗಿ ಒಟ್ಟಾರೆ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಬೇಡಿಕೆ ಗರಿಷ್ಠ ಮಟ್ಟ ತಲುಪಿದೆ ಎಂದು ಬೆಸ್ಕಾಂ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. ಬೆಸ್ಕಾಂ ಸೇರಿ ರಾಜ್ಯಾದ್ಯಂತ ವಿದ್ಯುತ್‌ ಬೇಡಿಕೆ ಹೆಚ್ಚಾಗಿದ್ದರೂ ಸೌರಶಕ್ತಿ ವಿದ್ಯುತ್‌ ಉತ್ಪಾದನೆ ದುಪ್ಪಟ್ಟಾಗಿರುವುದು,

ಪವನಶಕ್ತಿ ಮೂಲದ ವಿದ್ಯುತ್‌ ಉತ್ಪಾದನೆ ಹೆಚ್ಚಾಗಿರುವುದರಿಂದ ಇಂಧನ ಇಲಾಖೆ ಪರಿಸ್ಥಿತಿ ನಿಭಾಯಿಸುತ್ತಿದೆ. ಈ ನಡುವೆ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಮಾರು 2000 ಮೆ.ವ್ಯಾ.ನಷ್ಟು ಬೇಡಿಕೆ ತಗ್ಗಿದೆ. ಇದರಿಂದಾಗಿ ಉಷ್ಣ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಕನಿಷ್ಠ ಪ್ರಮಾಣದಲ್ಲಿದ್ದು, ಘಟಕಗಳ ಮೇಲಿನ ಒತ್ತಡ ಸದ್ಯದ ಮಟ್ಟಿಗೆ ತಗ್ಗಿದೆ.

ಬಿಸಿಲ ತಾಪದಿಂದ ಹವಾನಿಯಂತ್ರಣ ಸಾಧನ, ಕೂಲರ್‌, ಫ್ಯಾನ್‌ ಇತರೆ ಉಪಕರಣ ಬಳಕೆ ಜತೆಗೆ ಕೈಗಾರಿಕಾ ವಿದ್ಯುತ್‌ ಬೇಡಿಕೆಯೂ ಹೆಚ್ಚಾಗಿದೆ. ಆದರೆ ಸೌರಶಕ್ತಿ, ಪವನ ಶಕ್ತಿ ಮೂಲದಿಂದ ಗರಿಷ್ಠ ವಿದ್ಯುತ್‌ ಪೂರೈಕೆಯಿಂದಾಗಿ ಬೇಡಿಕೆಯಷ್ಟು ವಿದ್ಯುತ್‌ ಪೂರೈಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಸರಾಸರಿ ಬೇಡಿಕೆ 5,500 ಮೆ.ವ್ಯಾ.ನಷ್ಟಿದ್ದು, ಎಲ್ಲಿಯೂ ವಿದ್ಯುತ್‌ ಕಡಿತವಿಲ್ಲದಂತೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ.
-ಸಿ.ಶಿಖಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು

ರಾಜ್ಯದಲ್ಲಿ ಸದ್ಯ ವಿದ್ಯುತ್‌ ಬೇಡಿಕೆ ಕುಸಿದಿರುವುದರಿಂದ ಉಷ್ಣ ವಿದ್ಯುತ್‌ ಉತ್ಪಾದನೆಯೂ ಇಳಿಕೆಯಾಗಿದೆ. ಈ ನಡುವೆ ಉಷ್ಣ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಸುಧಾರಿಸಿದೆ. ಸದ್ಯ 15 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಲವಿದ್ಯುತ್‌ ಘಟಕಗಳಿರುವ ಜಲಾಶಯಗಳಲ್ಲೂ ನೀರಿನ ಸಂಗ್ರಹ ಹೆಚ್ಚಾಗಿದ್ದು, ಪರಿಸ್ಥಿತಿಗೆ ತಕ್ಕಂತೆ ಜಲವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ವಿದೇಶಿ ಕಲ್ಲಿದ್ದಲು ಆಮದಿಗೂ ಸರ್ಕಾರ ಅನುಮತಿ ನೀಡಿದ್ದು, ಸದ್ಯ ದೇಶೀಯ ಕಲ್ಲಿದ್ದಲು ಬಳಸಿ ಉತ್ಪಾದಿಸಲಾಗುತ್ತಿದೆ.
-ವಿ.ಪೊನ್ನುರಾಜ್‌, ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

* ಎಂ. ಕೀರ್ತಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ