ಗಂಗೂಲಿ ಆರೋಗ್ಯ ಸ್ಥಿರ; ಇನ್ನೊಂದು ಆ್ಯಂಜಿಯೋಪ್ಲಾಸ್ಟಿ ಇಂದು ನಿರ್ಧಾರ
Team Udayavani, Jan 4, 2021, 6:30 AM IST
ಕೋಲ್ಕತಾ: ಲಘು ಹೃದಯಾ ಘಾತಕ್ಕೊಳಗಾಗಿ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿರುವ ಮಾಜಿ ಕ್ರಿಕೆಟ್ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವುಡ್ಲ್ಯಾಂಡ್ಸ್ ಹಾಸ್ಪಿಟಲ್ನ ವೈದ್ಯರು ತಿಳಿಸಿದ್ದಾರೆ.
ಮೂರು ಹೃದಯನಾಳಗಳು ಕಟ್ಟಿಕೊಂಡ ಪರಿಣಾಮ ಗಂಗೂಲಿ ಅವರಿಗೆ ಇನ್ನೊಂದು ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಯ ಅಗತ್ಯವಿದೆ. ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಸೋಮವಾರ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿಯಿತ್ತರು.
ಈ ನಡುವೆ ಸೌರವ್ ಗಂಗೂಲಿ ಅವರಿಗೆ ಕೋವಿಡ್ -19 ಟೆಸ್ಟ್ ಕೂಡ ಮಾಡಲಾಗಿದ್ದು, ಇದರ ಫಲಿತಾಂಶ ನೆಗೆಟಿವ್ ಬಂದಿದೆ.
ಪ್ರಧಾನಿ ಮೋದಿ ಹಾರೈಕೆ
ಸೌರವ್ ಗಂಗೂಲಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ. ಅವರು ಸ್ವತಃ ಗಂಗೂಲಿ ಜತೆ ಮಾತಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಗಂಗೂಲಿ ಪತ್ನಿ ಡೋನಾ ಜತೆಯೂ ಪ್ರಧಾನಿ ಮಾತಾಡಿದರೆಂದು ಕಚೇರಿಯ ಮೂಲಗಳು ಹೇಳಿವೆ.