ದೀಪ ರಾಯಭಾರಿ ಪುನೀತ್ ಸ್ಮರಣೆಗೆ ಇಂದು ದೀಪನಮನ
Team Udayavani, Jan 29, 2022, 12:06 PM IST
ಬೆಂಗಳೂರು : ಚಿತ್ರನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಕೆಲವು ತಿಂಗಳು ಕಳೆದರೂ ಅವರ ನೆನಪು ಮಾತ್ರ ಸದಾ ಜೀವಂತ. ಪುನೀತ್ ಅವರನ್ನು ಸ್ಮರಿಸುವುದಕ್ಕೆ ರಾಜ್ಯ ಜೀವನೋಪಾಯ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ಇಂದು ವಿನೂತನ ಕಾರ್ಯಕ್ರಮ ಆಯೋಜಿಸಿದೆ.
ಇಲಾಖೆಯ ಕೆ.ಎಸ್.ಆರ್.ಎಲ್.ಪಿ.ಎಸ್. ಸಂಸ್ಥೆಯು ಗ್ರಾಮೀಣ & ನಗರ ಪ್ರದೇಶಗಳ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿರುವ ಒಂದು ಸಂಸ್ಥೆಯಾಗಿದೆ. 2021-22ರಲ್ಲಿ ದೀಪಾವಳಿಯ ಸಂದರ್ಭದಲ್ಲಿ ಮಹಿಳೆಯರೇ ತಯಾರಿಸಿದ ದೀಪಗಳ ಮಾರಾಟಕ್ಕೆ `ದೀಪ ಸಂಜೀವಿನಿ’ ಎನ್ನುವ ಹೆಸರಿನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಈ ಉಪಕ್ರಮಕ್ಕೆ ಜನಪ್ರಿಯ ನಟರಾಗಿದ್ದ ದಿ.ಪುನೀತ್ ರಾಜಕುಮಾರ್ ಅವರು ಪ್ರಚಾರ ರಾಯಭಾರಿಯಾಗಿದ್ದರು.
ಪುನೀತ್ ರಾಯಭಾರಿಯಾದ ತರುವಾಯ ಸಂಸ್ಥೆ ತಯಾರಿಸಿದ ದೀಪದ ಮಾರಾಟ ಭರ್ಜರಿಯಾಗಿತ್ತು.ಆದರೆ, ಪುನೀತ್ ಈಗ ಸಂಸ್ಥೆಯೊಂದಿಗಿಲ್ಲ. ಹೀಗಾಗಿ ಸಾಮಾಜಿಕ ಕಳಕಳಿ ಹೊಂದಿದ್ದ ದಿ.ಪುನೀತ್ ಅವರಿಗೆ ಸಂಸ್ಥೆಯ ವತಿಯಿಂದ ವಿಶಿಷ್ಟ ರೀತಿಯಲ್ಲಿ ನಮನಗಳನ್ನು ಸಲ್ಲಿಸಲು ನಿರ್ಧರಿಸಲಾಗಿದೆ.
ದೀಪದ ರಾಯಭಾರಿಗೆ ಇಂದು ಸಂಜೆ 4 ಗಂಟೆಗೆ ಸಾವಿರ ದೀಪಗಳನ್ನು ಬೆಳಗುವು `ದೀಪ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುನೀತ್ ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋದಲ್ಲಿ ಶನಿವಾರ, ಸಂಜೆ 4 ಗಂಟೆ ಕಾರ್ಯಕ್ರಮ ಆಯೋಜಿಸಲಾಗಿದೆ.