ನಮ್ಮ ಪಾಲಿಗೆ ಅಂಜು ಸತ್ತಿದ್ದಾಳೆ: ತಂದೆ
Team Udayavani, Jul 27, 2023, 7:16 AM IST
ಭೋಪಾಲ್: “ನಮ್ಮ ಪಾಲಿಗೆ ಆಕೆಗೆ ಸತ್ತಿದ್ದಾಳೆ. ನಮಗೂ ಆಕೆಗೂ ಯಾವುದೇ ಸಂಬಂಧವಿಲ್ಲ’ ಎಂದು ಪಾಕಿಸ್ಥಾನಕ್ಕೆ ತೆರಳಿರುವ ಅಂಜು ತಂದೆ ನೋವಿನಿಂದ ಹೇಳಿದ್ದಾರೆ. ರಾಜಸ್ಥಾನದಲ್ಲಿ ವಾಸವಿದ್ದ ಅಂಜು ಫೇಸ್ಬುಕ್ ಮೂಲಕ ಪರಿಚಯವಾದ ಪಾಕಿಸ್ಥಾನಿ ಪ್ರಜೆ ನಸ್ರುಲ್ಲಾನೊಂದಿಗೆ ಪ್ರೇಮದ ಪಾಶಕ್ಕೆ ಸಿಲುಕಿದ್ದಾಳೆ.
ಆತನಿಗಾಗಿ ಕಾನೂನು ಪ್ರಕಾರ ವೀಸಾ ಪಡೆದು, ಪಾಕಿಸ್ಥಾನದ ಖೈಬರ್ಪಖ್ತುಂಖ್ವ ಪ್ರಾಂತದ ಕುಗ್ರಾಮಕ್ಕೆ ತೆರಳಿದ್ದಾಳೆ. ಅಲ್ಲಿ ಇಸ್ಲಾಂಗೆ ಮತಾಂತರವಾಗಿರುವ ಆಕೆ, ತನ್ನ ಹೆಸರನ್ನು “ಫಾತಿಮಾ’ ಎಂದು ಮರುನಾಮಕರಣ ಮಾಡಿಕೊಂಡಿದ್ದಾಳೆ. ಅಂಜು (35) ಮತ್ತು ನಸ್ರುಲ್ಲಾ (29) ಸೋಮವಾರ ಮದುವೆಯಾಗಿದ್ದಾರೆ ಎಂದು ಪಾಕಿಸ್ಥಾನ ಮಲಕಂದ ವಿಭಾಗದ ಡಿಜಿಪಿ ನಾಸಿರ್ ಮೆಹಮೂದ್ ಸತ್ತಿ ಖಾತ್ರಿಪಡಿಸಿದ್ದಾರೆ.
ಈ ಕುರಿತು ಮಧ್ಯಪ್ರದೇಶದ ತೆಕನ್ಪುರ್ನಲ್ಲಿ ಮಾತನಾಡಿದ ಅಂಜು ತಂದೆ “ಕಳೆದ ಒಂದು ವರ್ಷದಿಂದ ಆಕೆಯೊಂದಿಗೆ ನಾವು ಮಾತನಾಡಿಲ್ಲ. ಪತಿ ಮತ್ತು ಮುಖ್ಯವಾಗಿ ಮಕ್ಕಳನ್ನೇ ಬಿಟ್ಟು ಹೋಗಿರುವ ಆಕೆಯೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ’ ಎಂದು ಬೇಸರವಾಗಿ ಹೇಳಿದ್ದಾರೆ. ಈ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತಮತಕ್ಕೆ ಮತಾಂತರವಾಗಿದ್ದ ಅಂಜು, ರಾಜಸ್ಥಾನದ ಅರವಿಂದ ಅವರನ್ನು ಮದುವೆಯಾಗಿದ್ದು, ದಂಪತಿಗೆ 15 ವರ್ಷದ ಪುತ್ರಿ ಮತ್ತು ಆರು ವರ್ಷದ ಪುತ್ರನಿದ್ದಾನೆ.