ಪರೀಕ್ಷೆ ಮಾಡಿಸದಾಕೆಗೆ ಕೊರೊನಾ ಪಾಸಿಟಿವ್!
Team Udayavani, Jan 23, 2022, 10:41 AM IST
ಮುಂಡಗೋಡ: ಕೋವಿಡ್ ಪರೀಕ್ಷೆ ಮಾಡಿಸದ ವಿದ್ಯಾರ್ಥಿನಿಯೊಬ್ಬಳಿಗೆ ಪಾಸಿಟಿವ್ ವರದಿ ಬಂದಿರುವ ಘಟನೆ ವರದಿಯಾಗಿದೆ.
ಕರಗಿನಕೊಪ್ಪ ಲೊಯೋಲಾ ಇಂಗ್ಲಿಷ್ ಮಾಧ್ಯಮ ಶಾಲೆಯ ಆರನೇ ತರಗತಿ ಓದುತ್ತಿರುವ ಹಳೂರಿನ ವಿದ್ಯಾರ್ಥಿನಿ ಜ.12ರಿಂದ 19ರವರೆಗೆ ಅನಾರೋಗ್ಯ ಕಾರಣ ಶಾಲೆಗೆ ಹೋಗಿರಲಿಲ್ಲ. ಆದರೆ, ಶಾಲೆಯಲ್ಲಿ ಜ.17ರಂದು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಆದರೆ ರಜೆಯಲ್ಲಿದ್ದ ಈ ವಿದ್ಯಾರ್ಥಿನಿಗೆ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಪಾಲಕರಿಗೆ ತಿಳಿಸಿದ್ದು ಆತಂಕಕ್ಕೆ ಕಾರಣವಾಗಿದೆ.
ವಿದ್ಯಾರ್ಥಿನಿಯ ತಂದೆ ಶಾಲೆಗೆ ಹೋದಾಗಲೂ ನಿಮ್ಮ ಮಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಕೂಡಲೇ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಆಗ ಮಗಳು ಎಂಟು ದಿನಗಳಿಂದ ಶಾಲೆಗೆ ಬಂದಿಲ್ಲ. ಕೋವಿಡ್ ಪರೀಕ್ಷೆ ಯಾವಾಗ ಮಾಡಿದ್ದೀರಿ. ಆಕೆ ಇವತ್ತು ಮಾತ್ರ ಶಾಲೆಗೆ ಬಂದಿದ್ದಾಳೆ ಎಂದು ವಿವರಿಸಿದ್ದಾರೆ.
ಏನೋ ಎಡವಟ್ಟು ಆದಂತೆ ಕಂಡುಬಂದ ಶಿಕ್ಷಕರು ಹಾಜರಾತಿ ನೋಡಿದಾಗ ವಿದ್ಯಾರ್ಥಿನಿ ಶಾಲೆಗೆ ಬಂದಿಲ್ಲದಿರುವುದು ಕಂಡುಬಂದಿದೆ. ಆಗ ಆರೋಗ್ಯ ಸಿಬ್ಬಂದಿಗೆ ವಿಷಯ ತಿಳಿಸಿದಾಗ, ಮಿಸ್ ಆಗಿ ಬೇರೆಯವರ ವರದಿ ಬಂದಿದೆ ಎಂದು ಸಮಜಾಯಿಷಿ ನೀಡಿದರು ಎನ್ನಲಾಗಿದೆ.