ಡ್ರಗ್ಸ್ ಸೇವನೆ: ಕಮಿಷನರ್ ಕೌನ್ಸೆಲಿಂಗ್
Team Udayavani, Jun 26, 2023, 5:54 AM IST
ಮಂಗಳೂರು: ನಾಲ್ಕು ತಿಂಗಳ ಅವಧಿಯಲ್ಲಿ ಕಮಿಷನರೆಟ್ ವ್ಯಾಪ್ತಿಯ ವಿವಿಧೆಡೆ ಡ್ರಗ್ಸ್ ಸೇವನೆ ಪ್ರಕರಣಗಳಲ್ಲಿ ಪಾಸಿಟಿವ್ ಬಂದವರಿಗೆ ರವಿವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೌನ್ಸೆಲಿಂಗ್ ನಡೆಯಿತು.
ನಗರದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಡಿಸಿಪಿಯವರಾದ ಅಂಶು ಕುಮಾರ್ ಮತ್ತು ದಿನೇಶ್ ಕುಮಾರ್ ಅವರು ಸಮಾಲೋಚನೆ ನಡೆಸಿದರು. ಮಾದಕ ವಸ್ತು ಸೇವನೆಯಿಂದ ಕುಟುಂಬ, ಸಮಾಜದ ಮೇಲಾಗುವ ದುಷ್ಪರಿಣಾಮಗಳ ಕುರಿತು ವಿವರಿಸಿದರು. ಮಾದಕ ವಸ್ತು ಸೇವನೆಯಿಂದ ಹೇಗೆ ಹೊರಗೆ ಬರಬಹುದು ಎನ್ನುವುದನ್ನೂ ತಿಳಿಸಿದರು. ಪ್ರಕರಣ ದಾಖಲಾಗುವುದರಿಂದ ಏನೆಲ್ಲ ಸಂಕಷ್ಟಗಳನ್ನು ಅನುಭವಿಸಬೇಕು ಎನ್ನುವುದನ್ನೂ ತಿಳಿಸಿದರು.
ಎಸಿಪಿಗಳು, ಕಮಿಷನರೆಟ್ ವ್ಯಾಪ್ತಿಯ ವಿವಿಧ ಠಾಣೆಗಳ, ಇನ್ಸ್ಪೆಕ್ಟರ್ಗಳು ಸಭೆಯಲ್ಲಿ ಭಾಗವಹಿಸಿದ್ದರು. ಮಾದಕ ವಸ್ತುಗಳಿಗೆ ದಾಸರಾಗಿರುವ ಸುಮಾರು 100ಕ್ಕೂ ಅಧಿಕ ಮಂದಿ ಉಪಸ್ಥಿತರಿದ್ದರು.